

ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಆಟೋ ಮೀಟರ್ ಬಳಕೆ ಕಡ್ಡಾಯಗೊಂಡಿದ್ದು ಅದರ ಬೆನ್ನಲ್ಲೇ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ನಗರ ಸಂಚಾರ ಪೊಲೀಸರು ಆಟೋ ದರಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಒಂದೂವರೆ ಕಿ.ಮೀ.ಗೆ ಗರಿಷ್ಠ ಮೂವರಿಗೆ ಕನಿಷ್ಠ ದರ 40 ರೂ. ನಿಗದಿ ಮಾಡಲಾಗಿದೆ. ನಂತರದ ಪ್ರತಿ ಒಂದು ಕಿ.ಮೀ.ಗೆ ಗರಿಷ್ಠ ಮೂವರಿಗೆ 20 ರೂ. ಇದ್ದು ಮೊದಲ 15 ನಿಮಿಷದವರೆ ಕಾಯುವುದು ಉಚಿತವಾಗಿದೆ. ಆನಂತರ ಪ್ರತಿ 15 ನಿಮಿಷಕ್ಕೆ 5 ರೂ. ಹಾಗೂ ಒಬ್ಬ ಪ್ರಯಾಣಿಕ 20 ಕೆಜಿವರೆಗೆ ಸರಕನ್ನು ಉಚಿತವಾಗಿ ಕೊಂಡೊಯ್ಯಬಹುದು. 20 ಕೆಜಿ ಮೇಲ್ಪಟ್ಟ ಲಗ್ಗೇಜ್‌ಗೆ 5 ರೂ. ಪಡೆಯಬಹುದು. ರಾತ್ರಿ 10ರಿಂದ ಬೆಳಗಿನ ಜಾವ 5ರ ಅವಧಿಯಲ್ಲಿ ಒಂದೂವರೆ ಪಟ್ಟ ದರವನ್ನು ಪ್ರಯಾಣಿಕರಿಂದ ಪಡೆಯಬಹುದು ಎಂದು ಸೂಚಿಸಿದೆ.
ಇತ್ತೀಚೆಗೆ ‘ವಿಜಯವಾಣಿ’ ಆಟೋ ಮೀಟರ್ ಬಳಕೆ ಬಗ್ಗೆ ಸರಣಿ ವರದಿ ಪ್ರಕಟಿಸಿತ್ತು. ಅದರ ಬೆನ್ನಲ್ಲೇ ವಿಶೇಷ ಕಾರ್ಯಾಚರಣೆ ನಡೆಸಿದ್ದ ಪೊಲೀಸ್ ಇಲಾಖೆ, ಸಾವಿರಾರು ಆಟೋಗಳನ್ನು ತಪಾಸಣೆಗೆ ಒಳಪಡಿಸಿ ಲಕ್ಷಾಂತರ ರೂ. ದಂಡವನ್ನು ಸಂಗ್ರಹಿಸಿತ್ತು. ಅಲ್ಲದೆ, ಆಟೋ ಮೀಟರ್ ಬಳಕೆಯನ್ನು ಕಡ್ಡಾಯಗೊಳಿಸಿ ಆದೇಶಿಸಿತ್ತು.