

| ರಾಘವ ಶರ್ಮ ನಿಡ್ಲೆ, ನವದೆಹಲಿ
ಗಂಡು-ಹೆಣ್ಣಿನ ಲಿವ್ ಇನ್ ಸಂಬಂಧಗಳಿಗೆ ಏಕರೂಪ ನಾಗರಿಕ ಸಂಹಿತೆಯಲ್ಲಿ ಪರಿಹಾರ ಕಂಡುಕೊಳ್ಳುವ ಲಕ್ಷಣಗಳು ಕಂಡುಬಂದಿದೆ. ಈ ಸಂಬಂಧಗಳನ್ನು ಅಧಿಕೃತಗೊಳಿಸುವ ಮೂಲಕ ಗಂಡು-ಹೆಣ್ಣು ಪರಸ್ಪರ ವಂಚನೆ, ಮೋಸದ ಜಾಲದಲ್ಲಿ ಸಿಲುಕದಂತೆ ಕಾಪಾಡುವ ಪ್ರಮುಖ ಅಂಶಗಳನ್ನು ಸೇರಿಸಲಾಗಿದೆ.
ಸಮಾನ ಸಂಹಿತೆ ನೀತಿ ಕುರಿತು ಸರ್ಕಾರಕ್ಕೆ ಪೂರಕ ಶಿಫಾರಸುಗಳನ್ನು ಸಲ್ಲಿಸಲು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ತಜ್ಞರ ಸಮಿತಿ ರಚನೆ ಮಾಡಿದ್ದರು. ಈ ಸಮಿತಿ ಸಿದ್ಧಪಡಿಸಿರುವ ವರದಿಯಲ್ಲಿ ಲಿವ್ ಸಂಬಂಧದ ಆರಂಭ ಮತ್ತು ಅಂತ್ಯದ ವೇಳೆ ಪ್ರಮಾಣ ಪತ್ರ ಪಡೆದುಕೊಳ್ಳುವುದು ಕಡ್ಡಾಯ ಎಂಬ ನಿಯಮವೊಂದನ್ನು ದಾಖಲಿಸಿದೆ. ಈ ಸಂಬಂಧದಿಂದ ಜನಿಸುವ ಮಗುವಿನ ಹಕ್ಕು, ಜೀವನದ ಬಗ್ಗೆಯೂ ನ್ಯಾ. ದೇಸಾಯಿ ಸಮಿತಿ ರ್ಚಚಿಸಿದೆ.
ಉತ್ತರಾಖಂಡ ಸರ್ಕಾರಕ್ಕೆ ನ್ಯಾ. ದೇಸಾಯ್ ಸಮಿತಿ ಸಲ್ಲಿಸುವ ಯುಸಿಸಿ ಕರಡು ವರದಿಯನ್ನೇ ಕೇಂದ್ರ ಸರ್ಕಾರ ತನ್ನ ಕಾನೂನಿಗೆ ಆಧಾರವಾಗಿಸಿಕೊಳ್ಳುವ ಸಾಧ್ಯತೆಯಿದೆ. ಯುಸಿಸಿ ಬಗ್ಗೆ ಸಭೆ ನಡೆಸಲು ಜುಲೈ 3ರಂದು ರಾಜ್ಯಸಭೆ ಸದಸ್ಯ ಸುಶೀಲ್ ಮೋದಿ ನೇತೃತ್ವದ ಕಾನೂನು ಮತ್ತು ನ್ಯಾಯ ಸಂಸದೀಯ ಸಮಿತಿ ಕರೆದಿರುವ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರಲಿದೆ. ರಾಷ್ಟ್ರೀಯ ಕಾನೂನು ಆಯೋಗ, ಕೇಂದ್ರ ಕಾನೂನು ಆಯೋಗದ ಉನ್ನತಾಧಿಕಾರಿಗಳನ್ನೂ ಸಭೆಗೆ ಆಹ್ವಾನಿಸಲಾಗಿದ್ದು, ಅವರ ಸಲಹೆಗಳನ್ನು ಪರಿಗಣಿಸುವ ಸಾಧ್ಯತೆಗಳಿವೆ.
ವರದಿಯಲ್ಲಿ ಏನಿದೆ?: ಲಿಂಗ ಸಮಾನತೆ, ಪಿತ್ರಾರ್ಜಿತ ಆಸ್ತಿ ಹಂಚಿಕೆಯಲ್ಲಿ ಮಗಳು-ಮಗನಿಗೆ ಸಮಾನ ನೀತಿ, ಹೆತ್ತವರನ್ನು ನೋಡಿಕೊಳ್ಳುವಲ್ಲೂ ಇಬ್ಬರಿಗೂ ಸಮಾನ ಜವಾಬ್ದಾರಿಗಳು, ವಿಚ್ಛೇದನಕ್ಕೆ ಸಂಬಂಧಿಸಿ ಎಲ್ಲಾ ಧರ್ವಿುಯರಿಗೂ ಸಮಾನ ಕಾನೂನನ್ನು ಅಳವಡಿಸಿಕೊಳ್ಳುವ ಅಂಶಗಳು ನ್ಯಾ. ದೇಸಾಯಿ ಸಮಿತಿ ವರದಿಯಲ್ಲಿದೆ. ಮುಸ್ಲಿಂ ಧರ್ಮದಲ್ಲಿರುವ ಬಹುಪತ್ನಿತ್ವ ಹಾಗೂ ಇದ್ದತ್, ಹಲಾಲಾ ಪದ್ಧತಿಗಳಿಗೆ ನಿಷೇಧ ಹೇರುವ ಬಗ್ಗೆ ಕರಡು ವರದಿಯಲ್ಲಿ ದಾಖಲಾಗಿದೆ. ಇದ್ದತ್ ಪ್ರಕಾರ ಮುಸ್ಲಿಂ ಮಹಿಳೆ ಪತಿಯಿಂದ ವಿಚ್ಛೇದನ ಪಡೆದುಕೊಂಡ ಅಥವಾ ಪತಿ ನಿಧನಗೊಂಡ ಬಳಿಕ ಇಂತಿಷ್ಟು ಅವಧಿಗೆ ಮದುವೆ ಆಗುವಂತಿಲ್ಲ. ಈ ಪದ್ಧತಿಗೆ ಪೂರ್ಣವಿರಾಮ ಹಾಕಲು ನ್ಯಾ. ದೇಸಾಯ್ ಸಮಿತಿ ಮುಂದಾಗಿದೆ.
ಎರಡು ಮಕ್ಕಳ ನೀತಿ: ನ್ಯಾ. ದೇಸಾಯಿ ತಜ್ಞರ ಸಮಿತಿ ಒಂದು ಕುಟುಂಬಕ್ಕೆ 2 ಮಕ್ಕಳು ನೀತಿ ಬಗ್ಗೆಯೂ ವರದಿಯಲ್ಲಿ ಪ್ರಸ್ತಾಪಿಸಿದೆ. ಬಿಜೆಪಿ ಸಂಸದ ಸಂಜೀವ್ ಬಲ್ಯಾನ್ ಅವರು 2018ರಲ್ಲಿ ಲೋಕಸಭೆಯಲ್ಲಿ ಖಾಸಗಿ ಸದಸ್ಯ ಮಸೂದೆಯನ್ನು (ಖಜಛಿ ್ಕಠಟಟ್ಞಠಜಿಚ್ಝಿಛಿ ಕಚ್ಟಛ್ಞಿಠಿಜಟಟಛ ಆಜ್ಝಿ್ಝ ಮಂಡಿಸಿದ್ದರು. ಇದರಲ್ಲಿರುವ ಅಂಶಗಳನ್ನು ಸಮಿತಿ ಪರಿಗಣಿಸಿದೆ. ಸರ್ಕಾರಿ ನೌಕರಿ ಅಥವಾ ಪ್ರಯೋಜನಗಳು ಸಿಗಬೇಕೆಂದರೆ ಒಂದು ಕುಟುಂಬದಲ್ಲಿ 2ಕ್ಕಿಂತ ಹೆಚ್ಚು ಮಕ್ಕಳಿರಬಾರದು ಎಂದು ಬಲ್ಯಾನ್ ಮಂಡಿಸಿದ್ದ ಮಸೂದೆಯಲ್ಲಿದೆ. ಒಟ್ಟು 125 ಸಂಸದರು ಈ ಮಸೂದೆಗೆ ಸಹಿ ಹಾಕಿದ್ದರು ಎಂದು ತಜ್ಞರ ಸಮಿತಿ ಹೇಳಿದೆ. 2 ಮಕ್ಕಳ ನೀತಿ ಅಳವಡಿಸಿಕೊಳ್ಳುವಂತೆ ಸಮಿತಿ ಉತ್ತರಾಖಂಡ ಸರ್ಕಾರಕ್ಕೆ ಶಿಫಾರಸು ಸಲ್ಲಿಸಲಿದೆಯೋ ಇಲ್ಲವೋ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಿಂದ ಇಂದಿನವರೆಗೆ ಜನಸಂಖ್ಯೆ ನಿಯಂತ್ರಣ ಕುರಿತು ಸಂಸತ್ತಿನಲ್ಲಿ ಒಟ್ಟು 34 ಖಾಸಗೀ ಸದಸ್ಯ ಮಸೂದೆಗಳು ಮಂಡನೆಯಾಗಿವೆ. ವಿಪರ್ಯಾಸ ಎಂದರೆ ಯಾವ ಸರ್ಕಾರವೂ ಇದರ ಬಗ್ಗೆ ರ್ಚಚಿಸುವ ಆಸಕ್ತಿ ತೋರಿಲ್ಲ. ದೇಶದ ಜನಸಂಖ್ಯೆ ಚೀನಾವನ್ನೂ ಮೀರಿರುವ ಈ ಕಾಲಘಟ್ಟದಲ್ಲಿ ಜನಸಂಖ್ಯೆ ನಿಯಂತ್ರಣ ಅಗತ್ಯ ಎನ್ನುವುದು ಸರ್ಕಾರಗಳಿಗೆ ಈಗಲಾದರೂ ಅರ್ಥವಾಗುವುದೇ ಎನ್ನುವುದನ್ನು ಕಾದು ನೋಡಬೇಕು.
ಹಿಂದೆಯೇ ಅನುಮೋದನೆ: 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ತ್ರಿವಳಿ ತಲಾಕ್, ರಾಮಮಂದಿರ, ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಸೇರಿ ಮಹತ್ವದ ಭರವಸೆಗಳನ್ನು ಈಡೇರಿಸಿದೆ. ಈಗ ಬಾಕಿ ಉಳಿದುಕೊಂಡಿರುವುದು ಏಕರೂಪ ನಾಗರಿಕ ಸಂಹಿತೆ ಮಾತ್ರ. 1951ರಲ್ಲಿ ಭಾರತೀಯ ಜನಸಂಘ ಅಸ್ತಿತ್ವಕ್ಕೆ ಬಂದಾಗಲೇ ದೇಶಕ್ಕೆ ಸಮಾನ ಕಾನೂನಿನ ಅಗತ್ಯದ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಅದೇ ವರ್ಷದ ಅಕ್ಟೋಬರ್ 21ರಂದು ದೆಹಲಿಯ ಗೋಲ್ ಮಾರ್ಕೆಟ್ನಲ್ಲಿರುವ ಆರ್ಯ ಕನ್ಯಾ ವಿದ್ಯಾಲಯದ ಮುಂಭಾಗದಲ್ಲಿ ಸಮಾವೇಶಗೊಂಡಿದ್ದ ಸುಮಾರು 200 ಮಂದಿ ಭಾರತೀಯ ಜನಸಂಘ ಪಕ್ಷದ ತತ್ವ ಮತ್ತು ನೀತಿಗಳಿಗೆ ಅನುಮೋದಿಸಿದ್ದ ವೇಳೆ ದೇಶದ ಸಂವಿಧಾನ ಜಮ್ಮು ಕಾಶ್ಮೀರಕ್ಕೆ ಅನ್ವಯಗೊಳಿಸುವುದು ಮತ್ತು ಸಮಾನ ಸಂಹಿತೆ ಅಳವಡಿಸಿಕೊಳ್ಳುವುದನ್ನೂ ಬೆಂಬಲಿಸಿದ್ದರು.
ವಿರೋಧಿ ಅಭಿಯಾನ: ಪ್ರಸ್ತಾವಿನ ಸಮಾನ ಸಂಹಿತೆ ನೀತಿಯನ್ನು ಖಂಡಿಸಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜಾತ್ಯತೀತ ಶಕ್ತಿಗಳ ಅಭಿಪ್ರಾಯ ಸಂಗ್ರಹಣೆ ಅಭಿಯಾನ ಶುರು ಮಾಡಲು ತೀರ್ವನಿಸಿದೆ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, 2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಸಮಾಜ ವಿಭಜಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು ಪ್ರಸ್ತಾಪಿಸಿದೆ ಎಂದು ಮುಸ್ಲಿಂ ಲೀಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿಕೆ ಕುನ್ನಲಿಕುಟ್ಟಿ ಆರೋಪಿಸಿದ್ದಾರೆ. ಈ ಸಂಹಿತೆಯು ಅನೇಕ ಸಮುದಾಯಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದಿದ್ದಾರೆ.