ನೀಟ್ ವಿದ್ಯಾರ್ಥಿಗಳ ನೋಂದಣಿ ಹೊಸದಲ್ಲ: ಕೆಇಎ

Medical Seat Fee
Published on

ಬೆಂಗಳೂರು ’ನೀಟ್’ ಪರೀಕ್ಷೆ ಬರೆದವರು ಕೂಡ ರಾಜ್ಯದ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಪಡೆಯಲು ಸಿಇಟಿಗೆ ನೋಂದಣಿ ಮಾಡಿಸಬೇಕು ಎಂಬ ನಿಯಮ ಹಿಂದಿನಿಂದಲೂ ಜಾರಿಯಲ್ಲಿದೆ. ಇದು ಹೊಸದಾಗಿ ಜಾರಿಯಾಗಿರುವ ನಿಯಮವಲ್ಲವೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸ್ಪಷ್ಟಪಡಿಸಿದೆ.

ಈ ಸಂಬಂಧವಾಗಿ ಕೆಇಎ ಹೊಸ ನಿಯಮ ಜಾರಿಗೊಳಿಸಿರುವುದರಿಂದ ಹಲವಾರು ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ ಎಂದು ಕೆಲವರು ಅನಗತ್ಯವಾಗಿ ಗೊಂದಲ ಮೂಡಿಸುತ್ತಿರುವುದಕ್ಕೆ ಕೆಇಎ ಸ್ಪಷ್ಟನೆ ನೀಡಿದೆ.

ಪ್ರಸಕ್ತ ಸಾಲಿನಲ್ಲಿ ’ನೀಟ್’ ಬರೆದಿರುವ ಸುಮಾರು 2 ಲಕ್ಷ ಅಭ್ಯರ್ಥಿಗಳು ಸಿಇಟಿಗೆ ನೋಂದಣಿ ಮಾಡಿಸಿದ್ದಾರೆ. ಇದರಲ್ಲಿ 50 ಸಾವಿರ ವಿದ್ಯಾರ್ಥಿಗಳು ಹೊರ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ರಾಜ್ಯದಲ್ಲಿ ವೈದ್ಯಕೀಯ ಸೀಟು ಹಂಚಿಕೆಯನ್ನು ಕೆಇಎ ನಿರ್ವಹಿಸುತ್ತಾ ಬಂದಿದ್ದು, ನೀಟ್ ಬರೆದವರು ಸಿಇಟಿಗೆ ನೋಂದಣಿ ಮಾಡಿಸಬೇಕೆಂಬುದು ಈ ಹಿಂದಿನ ವರ್ಷಗಳಲ್ಲಿಯೂ ಜಾರಿಯಲ್ಲಿತ್ತು. ಅದೇ ವ್ಯವಸ್ಥೆ ಈ ವರ್ಷವೂ ಯಾವುದೇ ಬದಲಾವಣೆ ಇಲ್ಲದೆ ಮುಂದುವರಿದಿದೆ ಎಂದು ತಿಳಿಸಿದೆ.

ಎಷ್ಟು ಬಾರಿ ನೀಟ್ ಪರೀಕ್ಷೆ ತೆಗೆದುಕೊಂಡಿದ್ದರೂ ಕೂಡ ಆಯಾ ವರ್ಷದ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾದರೆ ಸಿಇಟಿಗೆ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ. ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸ್‌ಗಳ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಏಕಕಾಲದಲ್ಲಿ ನಡೆಸುತ್ತಿದ್ದು ಇದಕ್ಕಾಗಿ ಒಂದೇ ಅರ್ಜಿಯನ್ನು ಸ್ವೀಕರಿಸಲಾಗಿದೆ. ಕೆಇಎ ನಿಯಮಗಳನ್ನು ಈ ರೀತಿ ತಪ್ಪಾಗಿ ಅರ್ಥೈಸಿ, ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಗೊಂದಲ ಉಂಟು ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೆಇಎ ಎಚ್ಚರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net