

ಬೆಂಗಳೂರು: ಭೂ ಕಬಳಿಕೆ ಹಾಗೂ ಜಾತಿ ನಿಂದನೆ ಆರೋಪದ ಮೇಲೆ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಸಚಿವ ಡಿ.ಸುಧಾಕರ್ ಸೋಮವಾರ ಗೃಹ ಸಚಿವ ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿ ಪ್ರಕರಣದ ಕುರಿತು ಚರ್ಚೆ ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ಯಲಹಂಕ ಗ್ರಾಮದ ಸರ್ವೇ ನಂಬರ್ 108/1ರ ಜಮೀನನ್ನು ಮೋಸದಿಂದ ಕಬಳಿಕೆ ಮಾಡಿದ್ದಾರೆ ಎಂದು ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಅರ್ ದಾಖಲಾಗಿದೆ. ಸುಬ್ಬಮ್ಮ ಎನ್ನುವವರು ದೂರು ದಾಖಲಿಸಿದ್ದರು.
ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್, ಅದು ನಮ್ಮದೇ ಕಂಪೆನಿ. ಅಲ್ಲದೇ ಹತ್ತು ವರ್ಷದ ಹಿಂದೆ ಆಗಿರುವ ವ್ಯವಹಾರ. ಎಲ್ಲವೂ ಚೆಕ್ ಮೂಲಕವೇ ವ್ಯವಹಾರ ನಡೆದಿದೆ. ಅದು ನಮ್ಮದೆ ಜಾಗ. ಈಗ ರಾಜಕೀಯ ಕಾರಣಕ್ಕಾಗಿ ಹೀಗೆ ಮಾಡಿದ್ದಾರೆ ಎಂದರು.
ಈ ಕೇಸ್ ಕೋರ್ಟ್‌ನಲ್ಲಿದೆ ಹೀಗಿದ್ದಾಗ ಬಂದು ಗಲಾಟೆ ಮಾಡಿದ್ದಾರೆ ಎಂದ ಅವರು ಈ ಹಿಂದೆಯು 2006ರಲ್ಲಿ ಒಂದು ಪ್ರಕರಣ ದಾಖಲಾಗಿತ್ತು. 2008ರಲ್ಲಿ ಸಚಿವನಾಗಿದ್ದಾಗ ಅದನ್ನ ಮುನ್ನಲೆಗೆ ತಂದಿದ್ದರು. ಈಗ ಸಚಿವ ಆಗಿದ್ದೇನೆಂಬ ಕಾರಣಕ್ಕೆ ಮತ್ತೆ ಅದನ್ನೇ ಮಾಡುತ್ತಿದ್ದಾರೆ. ನಾನು ಚಿತ್ರದುರ್ಗ ಜಿಲ್ಲೆಯವನು, ನಾನು ಎಸ್‌ಸಿಗಳ ಮಧ್ಯೆ ಬೆಳೆದವನು. ಇದು ರಾಜಕೀಯವಾಗಿ ನಡೆದಿದೆ. ಜಮೀನು ಖರೀದಿ ಮಾಡಿದ್ದೇನೆ, ಹೆಚ್ಚಿನ ಹಣಕ್ಕಾಗಿ ಹಾಗೆ ಮಾಡಿದ್ದಾರೆ ಎಂದು ಹೇಳಿದರು.
ಸುಬ್ಬಮ್ಮ ಎಂಬುವರು ನಮಗೆ ಜಮೀನು ಕೊಟ್ಟಿದ್ದರು. ಎಲ್ಲಾ ನಿಯಮಗಳ ಪ್ರಕಾರವೇ ಜಮೀನು ಖರೀದಿಯಾಗಿದೆ. ಚೆಕ್ ಮೂಲಕ, ಕಾನೂನು ಬದ್ಧ ವ್ಯವಹಾರ ನಡೆದಿದೆ. ಈಗ ತರಲೆ ಎಬ್ಬಿಸೋಕೆ ಈ ರೀತಿ ಮಾಡುತ್ತಿದ್ದಾರೆ ಎಂದರು.