ಸಂಪಾದಕೀಯ | ಜೈಲುಗಳ ಸುಧಾರಣೆ ಅಗತ್ಯ

2118144-jailprisonsafp-1576385651
Published on

ಕಾರಾಗೃಹಗಳ ಸುಧಾರಣೆಯ ಬಗ್ಗೆ ನಮ್ಮಲ್ಲಿ ದಶಕಗಳಿಂದಲೂ ಚರ್ಚೆ ನಡೆಯುತ್ತಲೇ ಇದೆ. ಜೈಲುಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದಾಗ ಮಾತ್ರ ಒಂದಿಷ್ಟು ಸಮಯ ನಿಯಮಗಳ ಪಾಲನೆಯಾಗುತ್ತದೆ. ಆದರೆ, ಕೆಲ ದಿನಗಳ ಬಳಿಕ ಅದೇ ಹಳೆಯ ಅವ್ಯವಸ್ಥೆ ಪುನರಾವರ್ತನೆಯಾಗುತ್ತದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಹುಳುಕುಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಮೊಬೈಲ್ ಫೋನ್, ಇಂಟರ್​ನೆಟ್, ಸಿಗರೆಟ್ ಸೇರಿದಂತೆ ಹೊರಜಗತ್ತಿನಲ್ಲಿ ಲಭ್ಯವಿರುವ ಎಲ್ಲ ಸೌಲಭ್ಯವೂ ಅಲ್ಲಿ ಕೈದಿಗಳಿಗೆ ಸಿಗುತ್ತದೆ. ಈಗ ಬಳ್ಳಾರಿ ಜೈಲಿನ ಅಂಧಾದರ್ಬಾರ್ ಬೆಚ್ಚಿಬೀಳಿಸಿದೆ. ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಐಷಾರಾಮಿ ಜೀವನ ನಡೆಸುತ್ತಿದ್ದು, ಜೈಲಿನಲ್ಲಿ ಸ್ಮಾರ್ಟ್​ಫೋನ್ ಬಳಸುತ್ತಿರುವುದು, ನಾನ್​ವೆಜ್ ಅಡುಗೆ ತಯಾರಿಸುತ್ತಿರುವ ಘಟನೆ ವ್ಯವಸ್ಥೆಯ ಕಾರ್ಯವೈಖರಿಯ ಮೇಲೆ ಪ್ರಶ್ನೆ ಮೂಡಿಸಿದೆ. ಜೈಲುಗಳೆಂದರೆ ತಪ್ಪಿತಸ್ಥರು ಶಿಕ್ಷೆ ಅನುಭವಿಸುವ ತಾಣಗಳೇ ಅಥವಾ ಐಷಾರಾಮಿ ಬದುಕಿನ ಸಾಧನೆಗಳೇ ಎಂಬ ಪ್ರಶ್ನೆ ಮೂಡಿದೆ. ಕಾರಾಗೃಹಗಳ ಸುಧಾರಣೆಗೆ ಕಠಿಣ ಕ್ರಮ ಕೈಗೊಳ್ಳದೆ ಇದ್ದರೆ ಪರಿಸ್ಥಿತಿ ಶೋಚನೀಯವಾಗುವುದರಲ್ಲಿ ಅನುಮಾನವಿಲ್ಲ.

ರಾಜ್ಯದಲ್ಲಿನ ಇತರ ಕಾರಾಗೃಹಗಳ ಸ್ಥಿತಿಯೂ ಭಿನ್ನವೇನಿಲ್ಲ. ಕೈದಿಗಳು ದುಡ್ಡು ಕೊಟ್ಟರೆ, ಅವರಿಗೆ ಸಕಲ ಸೌಲಭ್ಯ ಕಲ್ಪಿಸುವ ನಿದರ್ಶನಗಳು ಈ ಹಿಂದೆಯೂ ಬೆಳಕಿಗೆ ಬಂದಿವೆ. ಜೈಲುಗಳಲ್ಲಿ ಗಾಂಜಾ ಮತ್ತಿತರ ಮಾದಕ ವಸ್ತುಗಳು, ಚಾಕು-ತಲ್ವಾರ್-ಪಿಸ್ತೂಲ್​ನಂತಹ ಹತ್ಯಾರುಗಳು, ಮೊಬೈಲ್ ಫೋನುಗಳು ಸಿಗುತ್ತಲೇ ಇರುತ್ತವೆ. ಇದರ ಹಿಂದೆ ಲಕ್ಷಾಂತರ ರೂಪಾಯಿ ಹಣ ಕೈಬದಲಾಗುತ್ತಿರುತ್ತದೆ. ಈ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದ ಹೊರತು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೆ ಜೈಲುಗಳ ಶುದ್ಧೀಕರಣ ಸಾಧ್ಯವಿಲ್ಲ. ಕೈದಿಗಳ ಮನಃಪರಿವರ್ತನೆಯೂ ಸಾಧ್ಯವಿಲ್ಲ. ಆ ಬಗ್ಗೆ ಸರ್ಕಾರ ಗಂಭೀರ ಹೆಜ್ಜೆಗಳನ್ನು ಇಡಬೇಕು.

ಕಾರಾಗೃಹಗಳು ಶಿಕ್ಷೆಯ ಕೇಂದ್ರಗಳಲ್ಲ, ಬದಲಿಗೆ ಪರಿವರ್ತನೆಯ ಕೇಂದ್ರಗಳಾಗಬೇಕು, ಅಪರಾಧಿಯು ಶಿಕ್ಷೆ ಮುಗಿಸಿ ಜೈಲಿನಿಂದ ಹೊರಬರುವಾಗ ಮನಪರಿವರ್ತನೆ ಹೊಂದಿ, ಸಮಾಜದ ಉತ್ತಮ ನಾಗರಿಕನಾಗಿ ಬಾಳಬೇಕು ಎಂಬ ಆಶಯ ಬರೀ ಕಡತಗಳಿಗೆ ಸೀಮಿತವಾಗಿದೆ. ಜೈಲುಗಳಲ್ಲೇ ಈ ಪರಿ ಭ್ರಷ್ಟಾಚಾರ ನಡೆಯುತ್ತಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿ. ಕೈದಿಗಳು ಮೊಬೈಲ್ ಫೋನ್ ಮೂಲಕ ಹೊರಜಗತ್ತಿಗೆ ಸಂಪರ್ಕ ಸಾಧಿಸುವುದನ್ನು ತಡೆಯಲು ಜಾಮರ್ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಜಾಮರ್ ಅಳವಡಿಸಿದ್ದರೂ, ಕೈದಿಗಳಿಗೆ ಇಂಟರ್​ನೆಟ್ ಸಂಪರ್ಕ ಕಲ್ಪಿಸುತ್ತಿರುವವರು ಯಾರು? ಮತ್ತೆ ಮತ್ತೆ ಏಕೆ ಇಂಥ ಅಪಸವ್ಯಗಳು ಸಂಭವಿಸುತ್ತಿವೆ? ಎಂಬ ಪ್ರಶ್ನೆಗಳಿಗೆ ಪ್ರಾಮಾಣಿಕ ನೆಲೆಯಲ್ಲಿ ಸಂಬಂಧಪಟ್ಟವರು ಉತ್ತರ ಕಂಡುಕೊಳ್ಳಬೇಕಿದೆ.

ಕಾರಾಗೃಹಗಳಲ್ಲಿ ಭದ್ರತಾ ಮೌಲ್ಯಮಾಪನ ಮತ್ತು ಕೈದಿಗಳ ಪ್ರತ್ಯೇಕತೆ ಸೂಕ್ತವಾಗಿ ಜಾರಿಯಾಗಿಲ್ಲವೆ? ಹಲವು ಜೈಲುಗಳಲ್ಲಿ ದಟ್ಟಣೆಯೇ ಸಮಸ್ಯೆಯಾಗಿದ್ದು, ಕೈದಿಗಳ ಸ್ಥಳಾಂತರಕ್ಕೆ ಏಕೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ? ಕೈದಿಗಳು ಹೀಗೆ ಆರಾಮದಾಯಕವಾದ ಜೀವನ ಜೈಲಿನಲ್ಲಿ ಕಳೆಯುವಂತಾದರೆ ಸಮಾಜಕ್ಕೆ ತಪು್ಪಸಂದೇಶ ರವಾನೆಯಾಗುತ್ತದೆ ಮತ್ತು ‘ಏನು ಮಾಡಿದರೂ ಹಣದ ಪ್ರಭಾವದಿಂದ ಆರಾಮವಾಗಿರಬಹುದು’ ಎಂಬ ಅಪಾಯಕಾರಿ ಪ್ರವೃತ್ತಿ ಬೆಳೆಯುತ್ತದೆ. ಈ ಸಮಸ್ಯೆಗಳ ನಿವಾರಣೆಗೆ ಜೈಲು ಆಡಳಿತದಲ್ಲಿ ಪಾರದರ್ಶಕತೆ ತರಬೇಕು ಮತ್ತು ಈ ನಿಟ್ಟಿನಲ್ಲಿ ಜೈಲು ಆಡಳಿತದಲ್ಲಿ ತಂತ್ರಜ್ಞಾನದ ಸಮರ್ಪಕ ಬಳಕೆ ಆಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net