ಕೇಂದ್ರ ತೆರಿಗೆಯಲ್ಲಿ ರಾಜ್ಯಗಳ ಪಾಲು ಕಡಿತ? ಶೇ. 1ರಷ್ಟು ಇಳಿಸಲು ಚಿಂತನೆ

ವಿಜಯವಾಣಿ (3)
Published on

ನವದೆಹಲಿ: ಕೇಂದ್ರ ತೆರಿಗೆಯಿಂದ ಸಂಗ್ರಹವಾದ ಹಣದಲ್ಲಿ ರಾಜ್ಯಗಳಿಗೆ ನೀಡಬೇಕಾದ ಮೊತ್ತವನ್ನು ಮುಂದಿನ ವರ್ಷದಿಂದ ಕಡಿಮೆ ಮಾಡುವ ಸಾಧ್ಯತೆ ಇದೆ. ಈ ಸಂಬಂಧ ಕೇಂದ್ರ ಸರ್ಕಾರವು ಸದ್ಯದಲ್ಲೇ ಹಣಕಾಸು ಆಯೋಗಕ್ಕೆ ಶಿಫಾರಸು ಸಲ್ಲಿಸಲಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಇದಲ್ಲದೆ, ಕೇಂದ್ರ-ರಾಜ್ಯ ಆರ್ಥಿಕ ಸಂಬಂಧಗಳಿಗೆ ಸಂಬಂಧಿಸಿದ ಇತರ ವಿಷಯಗಳೂ ಈ ಶಿಫಾರಸುಗಳಲ್ಲಿ ಇರಲಿವೆ ಎನ್ನಲಾಗಿದೆ. ಇದರಿಂದಾಗಿ ಈಗಾಗಲೇ ತೆರಿಗೆ ಪಾಲಿನ ಸಂಬಂಧ ಕೇಂದ್ರದೊಂದಿಗೆ ಸಂಘರ್ಷಕ್ಕಿಳಿದಿರುವ ರಾಜ್ಯಗಳು ಇನ್ನೊಂದು ಸುತ್ತಿನ ಸಮರಕ್ಕೆ ಸಿದ್ಧವಾಗುವ ನಿರೀಕ್ಷೆ ಇದೆ.

ಅರ್ಥಶಾಸ್ತ್ರಜ್ಞ ಅರವಿಂದ ಪನಗಾರಿಯಾ ನೇತೃತ್ವದ ಸಮಿತಿಯು ತನ್ನ ಶಿಫಾರಸುಗಳನ್ನು ಅ. 31ರೊಳಗೆ ಸಲ್ಲಿಸಲಿದ್ದು, 2026-27ನೇ ಆರ್ಥಿಕ ವರ್ಷದಿಂದ ಅವು ಜಾರಿಗೆ ಬರಲಿವೆ. ಕೇಂದ್ರದಿಂದ ರಾಜ್ಯಗಳಿಗೆ ಈಗ ಶೇ. 41ರಷ್ಟು ತೆರಿಗೆ ಪಾಲು ಬರುತ್ತಿದ್ದು, ಇದನ್ನು ಶೇ. 40ಕ್ಕೆ ಇಳಿಸಲಿದೆ ಎನ್ನಲಾಗಿದೆ. ಮಾರ್ಚ್ ಅಂತ್ಯದೊಳಗೆ ಕೇಂದ್ರ ಸಚಿವ ಸಂಪುಟ ಈ ಪ್ರಸ್ತಾವನೆಗೆ ಅನುಮೋದನೆ ನೀಡಿ, ಹಣಕಾಸು ಆಯೋಗಕ್ಕೆ ಕಳಿಸಲಿದೆ. ಶೇ. 1ರಷ್ಟು ಇಳಿಕೆಯಿಂದ ಕೇಂದ್ರ ಸರ್ಕಾರಕ್ಕೆ ಸುಮಾರು 35 ಸಾವಿರ ಕೋಟಿ ರೂ. ಉಳಿತಾಯವಾಗಲಿದೆ. ಪ್ರತಿ ವರ್ಷದ ತೆರಿಗೆ ಸಂಗ್ರಹ ಆಧರಿಸಿ ಈ ಮೊತ್ತ ಬದಲಾವಣೆ ಆಗುತ್ತದೆ. ಕೇಂದ್ರದಿಂದ ರಾಜ್ಯಗಳಿಗೆ ಹೋಗುವ ತೆರಿಗೆ ಪಾಲು 1980ರಲ್ಲಿ ಶೇ. 20ರಷ್ಟಿತ್ತು.

ಈಗ ಅದು ಶೇ. 41ಕ್ಕೇರಿದೆ. ಕೇಂದ್ರ ಸರ್ಕಾರವು ಮೂಲಸೌಕರ್ಯ ಮತ್ತಿತರ ಕಾರ್ಯಗಳಿಗೆ ಮಾಡುತ್ತಿರುವ ವೆಚ್ಚವು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿರುವುದರಿಂದ ತೆರಿಗೆ ಪಾಲನ್ನು ಕಡಿತಗೊಳಿಸುವ ಆಲೋಚನೆಗೆ ಮೂಲ ಕಾರಣ ಎನ್ನಲಾಗಿದೆ. 2024-25ರಲ್ಲಿ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ನಿವ್ವಳ ದೇಶೀಯ ಉತ್ಪನ್ನದ (ಜಿಡಿಪಿ) ಶೇ. 4.8ರಷ್ಟಿದೆ. ರಾಜ್ಯಗಳು ವಿತ್ತೀಯ ಕೊರತೆಯು ರಾಷ್ಟ್ರೀಯ ಜಿಡಿಪಿಯ ಶೇ. 3.2ರಷ್ಟಿದೆ. ಒಟ್ಟಾರೆ ಸರ್ಕಾರಿ ವೆಚ್ಚದಲ್ಲಿ ರಾಜ್ಯಗಳ ಪಾಲು ಶೇ. 60ಕ್ಕಿಂತ ಜಾಸ್ತಿ ಇದ್ದು, ಅದರಲ್ಲಿ ಆರೋಗ್ಯ, ಶಿಕ್ಷಣ ಮುಂತಾದ ಸಾಮಾಜಿಕ ಕಾರ್ಯಗಳಿಗೇ ಹೆಚ್ಚು ವೆಚ್ಚವಾಗುತ್ತಿದೆ. ಕೇಂದ್ರ ಸರ್ಕಾರ ಹೆಚ್ಚಿನ ಹಣವನ್ನು ಭೌತಿಕ ಮೂಲಸೌಕರ್ಯಗಳಿಗೆ ಖರ್ಚು ಮಾಡುತ್ತಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಪದ್ಧತಿಯನ್ನು 2017ರ ಜುಲೈನಲ್ಲಿ ಜಾರಿಗೊಳಿಸಿದ ಬಳಿಕ ರಾಜ್ಯಗಳು ಸ್ವತಂತ್ರವಾಗಿ ಆದಾಯ ರೂಢಿಸಿಕೊಳ್ಳುವುದಕ್ಕೆ ಅವಕಾಶಗಳು ಕಡಿಮೆಯಾಗಿವೆ. ಕೋವಿಡ್ ಹಾವಳಿಯ ನಂತರದ ಅವಧಿಯಲ್ಲಿ ಕೇಂದ್ರ ಸರ್ಕಾರ ಸೆಸ್​ಗಳು ಮತ್ತು ಸರ್ಚಾರ್ಜ್​ಗಳ ಪಾಲನ್ನು ಹೆಚ್ಚಿಸಿದ್ದರೂ ಅದರಲ್ಲಿ ರಾಜ್ಯಗಳಿಗೆ ಯಾವುದೇ ಪಾಲನ್ನು ನೀಡುವುದಿಲ್ಲ. ಇನ್ನು ಮುಂದೆ ಕೇಂದ್ರದಿಂದ ಬರುವ ತೆರಿಗೆ ಪಾಲು ಮತ್ತಷ್ಟು ಕಡಿಮೆಯಾಗುವುದರಿಂದ ರಾಜ್ಯಗಳು ತಮ್ಮ ವೆಚ್ಚಗಳನ್ನು ನಿಯಂತ್ರಿಸಿಕೊಳ್ಳುವ ಅನಿವಾರ್ಯತೆ ಎದುರಾಗಲಿದೆ.

ಗ್ಯಾರಂಟಿಗಳಿಗೆ ಕಡಿವಾಣ ನಿರೀಕ್ಷೆ

ರಾಜಕೀಯ ಲಾಭಕ್ಕಾಗಿ ಉಚಿತ ಗ್ಯಾರಂಟಿಗಳನ್ನು ಘೋಷಿಸುವುದು, ಸಾಲ ಮನ್ನಾ ಮಾಡುವುದು, ಜನಪ್ರಿಯ ಯೋಜನೆಗಳಡಿ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡುವುದು ಮುಂತಾದವುಗಳಿಗೆ ಕಡಿವಾಣ ಹಾಕಿಕೊಳ್ಳುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ತಾಕೀತು ಮಾಡುವ ಸಾಧ್ಯತೆಯೂ ಇದೆ. ರಾಜ್ಯಗಳಿಗೆ ನೀಡುವ ತೆರಿಗೆ ಪಾಲಿನ ಹಣವನ್ನು ಯಾವ್ಯಾವುದಕ್ಕೆ ಖರ್ಚು ಮಾಡಬೇಕು ಎಂಬುದರ ಕುರಿತು ನಿರ್ದಿಷ್ಟ ಷರತ್ತುಗಳನ್ನು ವಿಧಿಸುವ ಯೋಚನೆಯೂ ಕೇಂದ್ರಕ್ಕಿದೆ. ಈ ಷರತ್ತುಗಳನ್ನು ಪಾಲಿಸಿದ ಬಳಿಕವೇ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net