ಮಕ್ಕಳ ಆಟದ ಸಮಯ ಕಡಿತ: ಶಿಕ್ಷಣ ಇಲಾಖೆಗೆ ಆಯೋಗ ಪತ್ರ

Playing
Published on

ಬೆಂಗಳೂರು: ಶಾಲಾ ಸಮಯದಲ್ಲಿ ಆಟದ ಅವಧಿಗಳನ್ನು ಕಡಿತಗೊಳಿಸದಂತೆ ನಿರ್ದೇಶಿಸಲು ಕೋರಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಅವರು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಮಕ್ಕಳೊಂದಿಗೆ ಆಯೋಗವು ನಡೆಸಿದ ಸಂವಾದ, ಶಾಲಾ ಭೇಟಿಯ ಸಮಯದಲ್ಲಿ 10ನೇ ತರಗತಿಯ ಮಕ್ಕಳು ವೇಳಾಪಟ್ಟಿಯಲ್ಲಿ ನಿಗದಿಗೊಳಿಸಿದ ಆಟದ ಅವಧಿಗಳನ್ನು ನಡೆಸದೆ ಇರುವ ಬಗ್ಗೆ ಆಯೋಗದ ಗಮನಕ್ಕೆ ತಂದಿರುತ್ತಾರೆ. ಸ್ವತಃ ನಾನು ಹಲವು ಪ್ರೌಢಶಾಲೆಯ ಮಕ್ಕಳ ಜತೆಗೆ ಮಾತನಾಡಿದಾಗ ಇದನ್ನು ಗಮನಿಸಿರುತ್ತೇನೆ.

ಆಟ, ಕಲೆ, ಸಂಗೀತದಂತಹ ಪಠ್ಯೇತರ ಚಟುವಟಿಕೆಗಳು ಮಕ್ಕಳ ಸಮಗ್ರ ವ್ಯಕ್ವಿತ್ವ ವಿಕಾಸದ ಅವಿಭಾಜ್ಯ ಅಂಗವಾಗಿದೆ. ಇದನ್ನು ಮನಗಂಡು ವಿಶ್ವಸಂಸ್ಥೆಯು ಜೂ.11 ಅನ್ನು ಪ್ರತೀ ವರ್ಷ ಅಂತಾರಾಷ್ಟ್ರೀಯ ಆಟದ ದಿನವೆಂದು ಗುರುತಿಸಿದೆ.

10ನೇ ತರಗತಿಯ ಪರೀಕ್ಷೆಯಲ್ಲಿ ಶಾಲೆ ಉತ್ತಮ ಲಿತಾಂಶ ಗಳಿಸಬೇಕೆನ್ನುವ ಒಂದೇ ಕಾರಣದಿಂದ ಮಕ್ಕಳ ಆಟೋಟಗಳನ್ನು ಹೀಗೆ ನಿರ್ಬಂಧಿಸುವುದು ವಿಪರ್ಯಾಸದ ಸಂಗತಿಯಾಗಿದೆ. ಇದು ಮಕ್ಕಳ ಕಲಿಕೆಯ ಮೇಲೂ ನಕಾರಾತ್ಮಕ ಪರಿಣಾಮಗಳನ್ನು ಬೀರಲಿದೆ ಮತ್ತು ಮಕ್ಕಳ ಹಕ್ಕುಗಳ ಹಕ್ಕಿನ ಉಲ್ಲಂಘನೆಯಾಗಲಿದೆ.

ಆದರೆ, ತಳಮಟ್ಟದಲ್ಲಿನ ಶಿಕ್ಷಕರು ಹಾಗೂ ಅಧಿಕಾರಿಗಳ ತಪ್ಪು ಗ್ರಹಿಕೆಗಳು, ಮಕ್ಕಳ ಹಕ್ಕುಗಳ ಜಾಗೃತಿಯ ಕೊರತೆಯು ಕಾರಣದಿಂದ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ತಾವು ಇಲಾಖೆಯ ನಿಯಮಾನುಸಾರ ಶಾಲಾ ವೇಳಾಪಟ್ಟಿಯಂತೆ ಆಟದ ಅವಧಿಗಳನ್ನು ಕಡ್ಡಾಯವಾಗಿ ನಡೆಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net