

ನವದೆಹಲಿ: ಲಾಕ್ಡೌನ್ನಿಂದಾಗಿ ಭಾರತದಲ್ಲಿ ಮದ್ಯದ ಅಂಗಡಿಗಳು ಕೂಡ ಬಾಗಿಲು ಹಾಕಿವೆ. ಇದರಿಂದಾಗಿ ಮದ್ಯಪ್ರಿಯರು ಮಧುಪಾನ ಮಾಡಲಾಗದೆ ಆತ್ಮಹತ್ಯೆ ಮಾರ್ಗದಲ್ಲಿ ಸಾಗುತ್ತಿದ್ದಾರೆ.
ಆದರೆ, ಕರೊನಾ ಸೋಂಕಿನಿಂದ ಸಾವಿನ ರೌದ್ರನರ್ತನ ಕಂಡಿರುವ ಇಟಲಿಯಲ್ಲಿ ಮಾತ್ರ ಕೊಳಾಯಿಯಲ್ಲಿ ನೀರಿನ ಬದಲು ರೆಡ್ ವೈನ್ ಧಾರೆಯೇ ಹರಿದಿದೆ! ಅದು ನಿರಂತರ ಮೂರು ಗಂಟೆ ವೈನ್ ಪೂರೈಕೆ ಆಗಿದೆ!
ಅಲ್ಲಿನ ಸರ್ಕಾರ ಮದ್ಯಪ್ರಿಯರನ್ನು ಸಮಾಧಾನಪಡಿಸಲು ಈ ಕ್ರಮ ಕೈಗೊಂಡಿತೆ ಎಂಬ ಅನುಮಾನ ಮೂಡುವುದು ಸಹಜ. ಆದರೆ ಇದು ಸರ್ಕಾರ ಕೈಗೊಂಡ ಕ್ರಮವಲ್ಲ. ಬದಲಿಗೆ ಯಾರೋ ಒಬ್ಬರ ಅಚಾತುರ್ಯದಿಂದಾಗಿ ಸಂಗತಿ ಎಂಬುದು ಸ್ಪಷ್ಟವಾಗಿದೆ.
ಇಟಲಿಯ ಮೊಡೆನಾ ಎಂಬ ಗ್ರಾಮದಲ್ಲಿ ಕೊಳಾಯಿಯಲ್ಲಿ ನೀರಿನ ಬದಲು ರೆಡ್ ವೈನ್ ಹರಿದು ಬರುತ್ತಿವುದನ್ನು ಕಂಡು ಗ್ರಾಮಸ್ಥರೇ ಆಶ್ಚರ್ಯಚಿಕಿತರಾಗಿದ್ದರು. ಗ್ರಾಮದ ಸೆಟ್ಟಿಕ್ಯಾನಿ ವೈನರಿಯ ಮಾಲಿಕ ವೈನ್ ಅನ್ನು ಸಂಗ್ರಹಗಾರಕ್ಕೆ ಹರಿಬಿಡುವ ಬದಲು ಸ್ಥಳೀಯ ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ ಪಂಪ್ ಮಾಡಿದ್ದ. ಇದರಿಂದಾಗಿ, ನೀರಿನ ಬದಲು ಕೊಳಾಯಿಗಳಲ್ಲಿ ರೆಡ್ ವೈನ್ ಹರಿಯಲಾರಂಭಿಸಿತ್ತು ಎನ್ನಲಾಗಿದೆ. ಇದಕ್ಕೆ ತಾಂತ್ರಿಕ ಸಮಸ್ಯೆ ಕಾರಣ ಎಂಬುದು ನಂತರದಲ್ಲಿ ಗೊತ್ತಾಯಿತಂತೆ.
‘ನಶೆ’ಯಾರಿದ ಜನರಿಗೆ ಸಿಗಲಿಲ್ಲ ನಶೆ ಏರಿಸಿಕೊಳ್ಳುವ ಅವಕಾಶ: ಭಾರತದಲ್ಲಿ ಮೇ 3ರವರೆಗೆ ಲಾಕ್ಡೌನ್ ವಿಸ್ತರಿಸುವ ನಿರ್ಧಾರ ಪ್ರಕಟಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಮಗೆ ಪ್ರಿಯವಾದ ಸುದ್ದಿ ಕೊಡುತ್ತಾರೆ ಎಂದು ಮದ್ಯಪ್ರಿಯರು ನಿರೀಕ್ಷಿಸುತ್ತಿದ್ದರು. ಆದರೆ, ರಾಷ್ಟ್ರವನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿ ಮೋದಿ ಈ ಬಗ್ಗೆ ಚಕಾರವನ್ನೂ ಎತ್ತಲಿಲ್ಲ. ಇದರಿಂದಾಗಿ ‘ನಶೆ’ಯಾರಿದ ಜನರ ಪರಿತಾಪ ಹಾಗೆಯೇ ಮುಂದುವರಿಯಿತು.
ಕೇರಳದಲ್ಲಿ ಆಗಿತ್ತು ಇಂಥ ಅಚಾತುರ್ಯ: ಭಾರತದಲ್ಲಿ ಕರೊನಾ ಪಿಡುಗು ಹರಡುವ ಮುನ್ನ ಫೆಬ್ರವರಿಯಲ್ಲಿ ಕೇರಳದಲ್ಲಿ ನೀರಿನ ಜತೆಗೆ ಮಿಶ್ರಗೊಂಡು ಮದ್ಯ ಮನೆಮನೆಗೆ ಹರಿದಿತ್ತು. ಕೇರಳದ ಚಾಲಕುಡ್ಡಿ ಎಂಬಲ್ಲಿ ಇರುವ ವಸತಿ ಸಮುಚ್ಛಯದಲ್ಲಿ ಇಂಥ ಘಟನೆಯಾಗಿತ್ತು. ಕೊಳಾಯಿಯಲ್ಲಿ ಮದ್ಯಸಾರ ಮಿಶ್ರಿತ ಕೊಳಕು ವಾಸನೆಯಿಂದ ಕೂಡಿದ ನೀರು ಬರಲಾರಂಭಿಸಿದ್ದರಿಂದ ಜನರು ಗಾಬರಿಗೊಂಡಿದ್ದರು. ಆದರೆ, ಇದಕ್ಕೆ ಕಾರಣ ಏನೆಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲವಂತೆ.