

ಉಪಗ್ರಹವನ್ನು ಕಕ್ಷೆಗೆ ಸೇರಿಸಿ ಮರಳಿ ಭೂಮಿಯಲ್ಲಿ ಇಳಿಯುವ ರಾಕೆಟ್ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವದ ಸಾಧನೆ ಮಾಡಿದೆ. ಭಾನುವಾರ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ನಲ್ಲಿ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿಯಾಗಿ ನೆರವೇರಿದೆ. ಈ ಸಾಧನೆಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯೂ (ಡಿಆರ್ಡಿಒ) ಕೈಜೋಡಿಸಿದೆ. ಈ ಜೋಡಿ ಸಂಸ್ಥೆಗಳ ಪರಿಶ್ರಮದಿಂದಾಗಿ ಬಾಹ್ಯಾಕಾಶ ರಂಗದಲ್ಲಿ ಭಾರತದ ಯಶೋಗಾಥೆಯು ವಿಶ್ವವೇ ಗಮನಸೆಳೆಯುವಂತೆ ಮುಂದುವರಿದಿದೆ. ಇತ್ತೀಚಿನ ದಿನಗಳಲ್ಲಿ ಉಡಾವಣಾ ವಾಹನಗಳ (ರಾಕೆಟ್) ತಂತ್ರಜ್ಞಾನದಲ್ಲಿ ಇಸ್ರೋ ಜಾಗತಿಕವಾಗಿ ಗಮನಸೆಳೆಯುವಂತಹ ಸಾಧನೆಗಳನ್ನು ಮಾಡಿದ್ದು, ಈಗ ಮತ್ತೊಂದು ಮಹತ್ವದ ಮೈಲುಗಲ್ಲನ್ನು ಅದು ದಾಖಲಿಸಿದೆ.
ಪ್ರಸ್ತುತ ಇಸ್ರೋ ಪಿಎಸ್ಎಲ್ವಿ, ಜಿಎಸ್ಎಲ್ವಿ ರಾಕೆಟ್ ಮೂಲಕ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ತಂತ್ರಜ್ಞಾನವನ್ನು ಯಶಸ್ವಿಯಾಗಿ ಮೈಗೂಡಿಸಿಕೊಂಡಿದೆ. ಇದೇ ಕಾರಣಕ್ಕಾಗಿ ವಿವಿಧ ರಾಷ್ಟ್ರಗಳು ತಮ್ಮ ಉಪಗ್ರಹಗಳನ್ನು ಉಡಾಯಿಸಲು ಇಸ್ರೋ ಸೇವೆಯನ್ನು ಪಡೆದುಕೊಳ್ಳುತ್ತಿವೆ. ತನ್ನ ಅತಿ ಭಾರದ ರಾಕೆಟ್ ಎಲ್ವಿಎಂ3-ಎಂ2 ಮೂಲಕ ಇಂಗ್ಲೆಂಡ್ ಮೂಲದ ಕಂಪನಿಯ 36 ಬ್ರಾಡ್ಬ್ಯಾಂಡ್ ಸಂವಹನ ಉಪಗ್ರಹಗಳನ್ನು ಏಕಕಾಲಕ್ಕೆ ಯಶಸ್ವಿಯಾಗಿ ಉದ್ದೇಶಿತ ಕಕ್ಷೆಗೆ ಸೇರಿಸಿದ್ದ ಐತಿಹಾಸಿಕ ಸಾಧನೆಯನ್ನು 2022ರ ಅಕ್ಟೋಬರ್ 23ರಂದು ಇಸ್ರೋ ಮಾಡಿತ್ತು. ಒನ್ ವೆಬ್ ಎಂಬ ಈ ಖಾಸಗಿ ಸಂಸ್ಥೆಯ ಉಪಗ್ರಹಗಳನ್ನು 5,796 ಕೆಜಿಯಷ್ಟು ಭಾರವಾದ ಪೇಲೋಡ್ನೊಂದಿಗೆ ಉಡಾವಣೆ ಮಾಡಲಾಗಿತ್ತು. ಭಾರಿ ತೂಕದ ಉಪಗ್ರಹಗಳನ್ನು ಹಾರಿಬಿಡಲೆಂದೇ ಇಸ್ರೋ ತಯಾರಿಸಿರುವ ಈ ರಾಕೆಟ್ 8 ಟನ್ ಪೇಲೋಡ್ ಹೊತ್ತೊಯ್ಯಬಲ್ಲದಾಗಿದೆ ಎಂಬುದು ಗಮನಾರ್ಹ. ಮತ್ತೆ ಇದೇ ಸಂಸ್ಥೆಯ 36 ಉಪಗ್ರಹಗಳನ್ನು ಕಳೆದ ಮಾರ್ಚ್ 26ರಂದು ನಿಗದಿತ ಕಕ್ಷೆಯಲ್ಲಿ ಯಶಸ್ವಿಯಾಗಿ ಸ್ಥಾಪಿಸಿತ್ತು.
ಇಂತಹ ಉಡಾವಣೆಗಳಿಗೆ ಬಳಸಲಾಗುವ ಪಿಎಸ್ಎಲ್ವಿ, ಜಿಎಸ್ಎಲ್ವಿ ರಾಕೆಟ್ಗಳು ಭೂಮಿಗೆ ಮರಳಿ ಬರುವುದಿಲ್ಲ. ಒಂದೊಂದೇ ಹಂತ ದಾಟುತ್ತಿದ್ದಂತೆ ಹೊತ್ತಿ ಉರಿದು ಹೋಗುತ್ತವೆ. ಒಂದು ರಾಕೆಟ್ ನಿರ್ವಣಕ್ಕೆ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತದೆ. ಹೀಗಾಗಿ, ವಿಶ್ವದೆಲ್ಲೆಡೆ ಈಗ ಮರಳಿ ಭೂಮಿಗೆ ಲ್ಯಾಂಡ್ ಆಗುವ ರಾಕೆಟ್ಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗುತ್ತಿದೆ. ಭೂಮಿಗೆ ವಾಪಸಾದ ನಂತರ ಇವುಗಳನ್ನು ಮರುಬಳಕೆ ಮಾಡಿಕೊಳ್ಳಲಾಗುತ್ತದೆ.
ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಕಂಪನಿಯು ಮರುಬಳಕೆ ಮಾಡುವ ರಾಕೆಟ್ ಅಭಿವೃದ್ಧಿಪಡಿಸಿದ್ದರೂ ಈ ರಾಕೆಟ್ಗಳು ಪೂರ್ಣ ಪ್ರಮಾಣದಲ್ಲಿ ಮರಳಿಬಂದಿಲ್ಲ; ಭಾಗಶಃ ಮಾತ್ರ ವಾಪಸು ಬರುತ್ತವೆ. ಇನ್ನೂ ಅಭಿವೃದ್ಧಿಯ ಹಂತದಲ್ಲೇ ಇರುವ ಇಂತಹ ವಿನೂತನ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಇಸ್ರೋ ಯಶಸ್ವಿಯಾಗಿ ಬಳಸಿರುವುದು ಜಾಗತಿಕವಾಗಿ ಗಮನ ಸೆಳೆಯುವ ಮಹತ್ತರ ಸಂಗತಿಯೇ ಆಗಿದೆ. ಚೀನಾ, ಇಸ್ರೇಲ್ನಂತಹ ರಾಷ್ಟ್ರಗಳು ಕೂಡ ಕೆಲ ದಿನಗಳ ಹಿಂದಷ್ಟೇ ಮರುಬಳಕೆಯ ರಾಕೆಟನ್ನು ಪ್ರಾಯೋಗಿಕವಾಗಿ ಪರೀಕ್ಷೆ ಮಾಡಿವೆ. ಇಡೀ ವಿಶ್ವದಲ್ಲಿ ಉಪಗ್ರಹ ಉಡಾವಣೆ ಸಾಮರ್ಥ್ಯ ಹಾಗೂ ಸೌಲಭ್ಯಗಳನ್ನು ಹೊಂದಿರುವ ದೇಶಗಳ ಸಂಖ್ಯೆ ಕೇವಲ 11 ಇದೆ. ಸ್ವದೇಶಿ ಮಾತ್ರವಲ್ಲದೆ, ವಿದೇಶಿ ಉಪಗ್ರಹಗಳನ್ನು ಕೂಡ ಉಡಾಯಿಸುವ ಮೂಲಕ ಈ ಕ್ಷೇತ್ರದಲ್ಲಿ ಭಾರತವನ್ನು ಮುಂಚೂಣಿ ಸ್ಥಾನದಲ್ಲಿ ಇಸ್ರೋ ತಂದು ನಿಲ್ಲಿಸಿದೆ. ಈಗ ಮರುಬಳಕೆ ರಾಕೆಟ್ ತಂತ್ರಜ್ಞಾನ ಸಿದ್ಧ ಮಾಡಿಕೊಳ್ಳುವತ್ತ ದಾಪುಗಾಲು ಹಾಕಿರುವುದು ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ.