ಮೂರು ತಿಂಗಳಲ್ಲಿ ಬ್ಯಾಕ್​ಲಾಗ್ ಹುದ್ದೆ ಭರ್ತಿ; ಉಸ್ತುವಾರಿ ಉಪಸಮಿತಿಗೆ ನಿರ್ದೇಶನ

vidhanasoudha
Published on

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆ, ನಿಗಮ-ಮಂಡಳಿ, ವಿಶ್ವವಿದ್ಯಾಲಯಗಳು ಹಾಗೂ ಶಾಸನಬದ್ಧ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಬ್ಯಾಕ್​ಲಾಗ್ ಹುದ್ದೆಗಳನ್ನು 3 ತಿಂಗಳಲ್ಲಿ ಭರ್ತಿ ಮಾಡಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ಈ ನೇಮಕ ಸಂಬಂಧ ವಾರದಲ್ಲಿ ಅಧಿಸೂಚನೆ ಹೊರಡಿಸಿ 3 ತಿಂಗಳಲ್ಲಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಬ್ಯಾಕ್​ಲಾಗ್ ಹುದ್ದೆ ನೇಮಕಾತಿ ಉಸ್ತುವಾರಿಗಾಗಿ ನೇಮಕಗೊಂಡಿರುವ ಉಪಸಮಿತಿ ಸಭೆಯಲ್ಲಿ ನಿರ್ದೇಶನ ನೀಡಿದರು.

ಕಾರಜೋಳ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್, ಮೀನುಗಾರಿಕೆ ಸಚಿವ ಎಸ್. ಅಂಗಾರ, ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಬಿ. ಶ್ರೀರಾಮುಲು ಸದಸ್ಯರಾಗಿದ್ದಾರೆ. ಈ ಬ್ಯಾಕ್​ಲಾಗ್ ಹುದ್ದೆಗಳ ನೇಮಕಕ್ಕೆ ಕೈಗೊಂಡಿರುವ ಕ್ರಮಗಳನ್ನು ಸಮಿತಿ ವಿವರವಾಗಿ ಪರಿಶೀಲಿಸಿತು.

ಕಾಲೇಜುಗಳಲ್ಲಿ 882 ಹುದ್ದೆ: ರಾಜ್ಯ ಸರ್ಕಾರದ ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ, ಅನುದಾನಿತ ತಾಂತ್ರಿಕ ಕಾಲೇಜುಗಳಲ್ಲಿ ಮತ್ತು ವಿವಿಧ ವಿಶ್ವ ವಿದ್ಯಾಲಯಗಳಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ 446 ಮತ್ತು ಪರಿಶಿಷ್ಟ ಪಂಗಡಕ್ಕೆ 436 ಸೇರಿ 882 ಹುದ್ದೆ ನೇಮಕ ಬಾಕಿ ಇದೆ ಎಂಬುದನ್ನು ಸಮಿತಿ ಗಂಭೀರವಾಗಿ ಪರಿಗಣಿಸಿತು. ಈ ಎಲ್ಲ ಹುದ್ದೆ ನೇಮಕಕ್ಕೆ ವಾರದಲ್ಲಿ ಅಧಿಸೂಚನೆ ಹೊರಡಿಸಬೇಕೆಂದು ಸಭೆ ಸೂಚಿಸಿತು. ಎಲ್ಲ ಇಲಾಖೆ ಮುಖ್ಯಸ್ಥರು, ಪ್ರಧಾನ ಕಾರ್ಯದರ್ಶಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕೆಪಿಎಸ್ಸಿಗೆ ಕೋರಿಕೆ: ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಕೈಗೊಳ್ಳಬೇಕಾದ ನೇಮಕಾತಿಗಳನ್ನು ವಾರದಲ್ಲಿ ಅಧಿಸೂಚಿಸಿ 6 ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ ಸರ್ಕಾರಕ್ಕೆ ಆಯ್ಕೆ ಪಟ್ಟಿ ಸಲ್ಲಿಸಬೇಕೆಂದು ಆಯೋಗವನ್ನು ಕೋರಲು ಕ್ರಮ ಕೈಗೊಳ್ಳುವಂತೆ ಎಲ್ಲ ಇಲಾಖಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net