ಮೃಗಾಲಯಗಳಿಗೆ ಪಶುವೈದ್ಯರ ನೇಮಕ ನಿರ್ಧಾರ

Ishwar Khandre meeting
Published on

ಬೆಂಗಳೂರು: ಮೃಗಾಲಯಗಳಲ್ಲಿ ವನ್ಯಜೀವಿ ಪಶುವೈದ್ಯರ ಕೊರತೆ ಆಗದಂತೆ ಮತ್ತು ಮೃಗಾಲಯದಲ್ಲಿರುವ ವನ್ಯಜೀವಿಗಳು ಸೋಂಕು ಇತ್ಯಾದಿಯಿಂದ ಸಾವಿಗೀಡಾಗದಂತೆ ಕ್ರಮ ವಹಿಸಲು ಪಶುವೈದ್ಯರ ನೇಮಕಾತಿಗೆ ಕರ್ನಾಟಕ ಮೃಗಾಲಯಗಳ ಪ್ರಾಧಿಕಾರ ಅಸ್ತು ಎಂದಿದೆ.

ವಿಕಾಸಸೌಧಲ್ಲಿ ಅರಣ್ಯ, ಪರಿಸರ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ

ಕರ್ನಾಟಕ ಮೃಗಾಲಯ ಪ್ರಾಧಿಕಾರದ 2024-25ನೇ ಸಾಲಿಗೆ 162.02 ಕೋಟಿ ರೂ.ಗಳ ಬಜೆಟ್‌ಗೆ ಅನುಮೋದನೆ ದೊರೆತಿದೆ.

ಚಿತ್ರದುರ್ಗದ ಆಡು ಮಲ್ಲೇಶ್ವರ ಕಿರು ಮೃಗಾಲಯಕ್ಕೆ ಸ್ಥಳೀಯ ಪಶುವೈದ್ಯಾಧಿಕಾರಿಗಳ ಸೇವೆ ಪಡೆಯಲು ಘಟನೋತ್ತರ ಅನುಮೋದನೆ ನೀಡಲಾಯಿತು. ಗದಗ ಮೃಗಾಲಯದ ವಿಸ್ತರಣೆ ಮತ್ತು ಅಭಿವೃದ್ಧಿಗೆ 13.20 ಎಕರೆ ಜಮೀನು ಭೂಸ್ವಾಧೀನಕ್ಕೆ 1.87 ಕೋಟಿ ರೂ. ನೀಡಿದ್ದು, ಇದಕ್ಕೆ ಸಭೆಯಲ್ಲಿ ಘಟನೋತ್ತರ ಮಂಜೂರಾತಿ ನೀಡಿದೆ.

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಭಿವೃದ್ಧಿ ಕಾಮಗಾರಿಗಳಿಗೆ 75.08 ಕೋಟಿ ರೂ. ಅನುದಾನ ಮೀಸಲಿಟ್ಟಿತ್ತು.

ಈ ಪೈಕಿ ಕಮಲಾಪುರ ಮೃಗಾಲಯದಲ್ಲಿನ ಶ್ರೀಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 11.28 ಕೋಟಿ ರೂ. ಮಂಜೂರು ಮಾಡಿದ್ದು, ಬಾಕಿ 63.79 ಕೋಟಿ ರೂ.ಗಳನ್ನು ಅನುದಾನದಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು ಎಂದು ಮೂಲಗಳು ತಿಳಿಸಿವೆ.

ಬಜೆಟ್ ಮೊತ್ತ ಇಳಿಕೆ

ಮೃಗಾಲಯ ಪ್ರಾಧಿಕಾರಕ್ಕೆ 2023-24 ನೇ ಸಾಲಿನಲ್ಲಿ 187.56 ಕೋಟಿ ರೂ.ಬಜೆಟ್‌ನ್ನು ಸರ್ಕಾರ ನೀಡಿತ್ತು. ನಂತರ ಪರಿಷ್ಕರಿಸಿ 147.01 ಕೋಟಿ ರೂ.ಗೆ ಇಳಿಸಿತು. ಕಾಮಗಾರಿಗಳ ಬದಲಾವಣೆ, ಹೆಚ್ಚುವರಿ ಕಾಮಗಾರಿ, ಆಡಳಿತಾತ್ಮಕ ವೆಚ್ಚ, ಆಹಾರ-ಮೇವು, ಪಶುವೈದ್ಯಕೀಯ, ನಿರ್ವಹಣಾ ಆವಶ್ಯಕ ವೆಚ್ಚ ಮರುಪರಿಷ್ಕರಿಸಿ ಹಿಂದಿನ ಸಭೆಯಲ್ಲಿ ಅನುಮೋದಿಸಿತ್ತು.

2024-25ನೇ ಸಾಲಿಗೆ 162.02 ಕೋಟಿ ರೂ.ಗಳ ವೆಚ್ಚ ಅಂದಾಜಿಸಿದೆ. ಆದರೆ 127.86 ಕೋಟಿ ರೂ.ಗಳ ನಿರೀಕ್ಷಿಯಿದ್ದು, 34.15 ಕೋಟಿ ರೂ. ಖೋತಾ ಆಗುವ ಸಾಧ್ಯತೆಯಿದೆ. 2023-24ನೇ ಸಾಲಿನ ಬಾಕಿ ಕಾಮಗಾರಿಗಳಿಗೆಂದೇ 17.94 ಕೋಟಿ ರೂ. ಮೀಸಲಿಟ್ಟಿದೆ. 9 ಮೃಗಾಲಯ ಹಾಗೂ ಪ್ರಾಧಿಕಾರದ ಅಧ್ಯಕ್ಷರ ಕಚೇರಿಯ ಆಡಳಿತ ವೆಚ್ಚವಾಗಿ 49.59 ಕೋ.ರೂ., ಆಹಾರ-ಮೇವಿಗಾಗಿ 25.54 ಕೋ. ರೂ. ಪಶುವೈದ್ಯಕೀಯಕ್ಕಾಗಿ 2.95 ಕೋಟಿ ರೂ. ಅಭಿವೃದ್ಧಿ ಕಾರ್ಯಗಳಿಗಾಗಿ 30.18 ಕೋ ರೂ. ಮತ್ತು ನಿರ್ವಹಣೆಗೆ 35.79 ಕೋಟಿ ರೂ. ತೆಗೆದಿರಿಸಲಾಗಿದೆ ಎಂದು ಅಧಿಕೃತ ಮೂಲಗಳು ವಿವರಿಸಿವೆ.

ಡಿಪ್ಲೊಮಾ ಕೋರ್ಸ್

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳ ಆರೈಕೆ ಮತ್ತು ನಿರ್ವಹಣೆಯ 10 ತಿಂಗಳುಗಳ ಡಿಪ್ಲೊಮಾ ಕೋರ್ಸ್ ಆರಂಭಿಸಲು ಸಚಿವ ಈಶ್ವರ ಖಂಡ್ರೆ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಕರ್ನಾಟಕ ಮೃಗಾಲಯಗಳ ಪ್ರಾಧಿಕಾರದ ಸಭೆಯಲ್ಲಿ ಈ ವಿಷಯ ಚರ್ಚೆಯಾಯಿತು.

ಮೃಗಾಯಗಳಲ್ಲಿ ನುರಿತ ಸಿಬ್ಬಂದಿ ಅಗತ್ಯವಿದೆ. ಬೆಂಗಲೂರು ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಬೆಂಗಳೂರಿನ ವೈಡ್ ಲ್ೈ ಸೈನ್ಸ್ ಎಜ್ಯುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಈ ಕೋರ್ಸ್ ಆರಂಭಿಸಿದ್ದಾರೆ ಅನುಮತಿ ನೀಡಿದ್ದಾರೆ.

ಡಿಪ್ಲೊಮಾ ವ್ಯಾಸಂಗ ಪೂರ್ಣಗೊಳಿಸಿದವರಿಗೆ ಉದ್ಯೋಗ ಲಭ್ಯತೆ, ದೀರ್ಘಕಾಲ ಈ ಕೋರ್ಸ್ ಪ್ರಾಮುಖ್ಯತೆ, ಪಠ್ಯಕ್ರಮದ ಜತೆಗೆ ಪ್ರಾಯೋಗಿಕ ಕಾರ್ಯಕ್ರಮ ರೂಪಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಾಧಕಬಾಧಕ ಚರ್ಚಿಸಿ ಮುಂದಿನ ಸಭೆಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಈಶ್ವರ ಖಂಡ್ರೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net