ಅನುದಾನಿತ ಶಾಲೆಗಳಿಗೆ 5 ಸಾವಿರ ಶಿಕ್ಷಕರ ನೇಮಕ

madhu bangarappa
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
Published on

ಬೆಂಗಳೂರು: ಮುಂದಿನ ದಿನಗಳಲ್ಲಿ ಅನುದಾನಿತ ಶಾಲೆಗಳಲ್ಲಿ 5 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂಭತ್ತು ವರ್ಷದಲ್ಲಿ ಅನುದಾನಿತ ಶಾಲೆಗೆ ಒಬ್ಬ ಶಿಕ್ಷಕರನ್ನೂ ನೇಮಕ ಮಾಡಿಲ್ಲ. ಸಂಬಳ ಕೊಡುವ ಹೊರೆ ಕಾರಣ ಸರ್ಕಾರ ಈ ನೇಮಕ ಹಾಗೆ ಉಳಿಸಿಕೊಂಡು ಬಂದಿದೆ. 2013ರಿಂದ ಇಲ್ಲಿಯವರೆಗೆ ಅನುದಾನಿತ ಶಾಲೆಯಲ್ಲಿ ನೇಮಕ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.

ಅನುದಾನಿತ ಕನ್ನಡ ಮಾಧ್ಯಮ ಶಾಲೆ ಉಳಿಸಬೇಕಾಗಿದೆ. ಒಳ್ಳೆಯ ಶಿಕ್ಷಕರು ಇರುವುದು ಕನ್ನಡ ಮಾಧ್ಯಮ ಶಾಲೆಗಳಲ್ಲಿ. 8, 9, 10ನೇ ತರಗತಿ ಮಕ್ಕಳಿಗೆ ಮರು ಸಿಂಚನ (ವಿಶೇಷ ವಿಜ್ಞಾನ) ತರಗತಿ ಮಾಡಲಾಗುತ್ತಿದೆ. ಒಟ್ಟು 8 ಲಕ್ಷ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಅನುತ್ತೀರ್ಣರಾದವರಿಗೆ ವಿಶೇಷ ಸೌಲಭ್ಯ

ಎಸ್‌ಎಸ್‌ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ರಾಜ್ಯ ಪಠ್ಯಕ್ರಮದ ತರಗತಿ ವಿದ್ಯಾರ್ಥಿಗಳು ಇಷ್ಟಪಟ್ಟರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತೆ ಯಾವುದೇ ಸರ್ಕಾರಿ ಪ್ರೌಢಶಾಲೆ, ಪಿಯು ಕಾಲೇಜಿನಲ್ಲಿ ಅದೇ ತರಗತಿಗಳಿಗೆ ದಾಖಲಾಗಿ ವ್ಯಾಸಂಗ ಮಾಡಬಹುದು ಎಂದರು.

ಪ್ರತಿ ವರ್ಷ ಕನಿಷ್ಠ 1 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಅರ್ಧಕ್ಕೆ ನಿಲ್ಲಿಸುತ್ತಾರೆ. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಈ ವಿಶೇಷ ಸೌಲಭ್ಯ ನೀಡಲಾಗಿದೆ. ರೆಗ್ಯುಲರ್ ವಿದ್ಯಾರ್ಥಿಗೆ ದೊರೆಯುವ ಎಲ್ಲ ಅನೂಕೂಲ ಈ ವಿದ್ಯಾರ್ಥಿಗಳಿಗೆ ಸಿಗಲಿವೆ ಎಂದು ತಿಳಿಸಿದರು.

ಶಿಕ್ಷಕರ ಕೊರತೆ ಸಾಕಷ್ಟು ನೀಗಿಸಿದ್ದೇವೆ

46 ಸಾವಿರ ಶಾಲೆಗಳು ಹಾಗೂ ಕಾಲೇಜುಗಳಿದ್ದು, ಈ ಪೈಕಿ 15 ಸಾವಿರ ಅನುದಾನಿತ ಶಾಲೆಗಳಿವೆ. 42 ಸಾವಿರ ಅತಿಥಿ ಶಿಕ್ಷಕರು ನೇಮಕ ಮಾಡಿದ್ದೇವೆ. 13,500 ಸಾವಿರ ಕಾಯಂ ಶಿಕ್ಷಕರ ನೇಮಕ ಮಾಡಿದ್ದೇವೆ. 53 ಸಾವಿರ ಕಾಯಂ ಶಿಕ್ಷಕರ ನೇಮಕಾತಿಯಾಗಬೇಕಿದೆ ಎಂದರು.

12.5 ಕೋಟಿ ರೂ. ವೆಚ್ಚದಲ್ಲಿ ನೀಟ್ ತರಬೇತಿ

12.50 ಕೋಟಿ ರೂ. ವೆಚ್ಚದಲ್ಲಿ ಮಕ್ಕಳಿಗೆ ನೀಟ್ ತರಬೇತಿ ನೀಡಲಾಗುತ್ತದೆ. ಬಡ ಮಕ್ಕಳ ಎಂಜನಿಯರಿಂಗ್ ಹಾಗೂ ವೈದ್ಯಕೀಯ ಕನಸ್ಸು ನನಸು ಮಾಡುವುದು ಇದರ ಉದ್ದೇಶವಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯಲು ಅನುಕೂಲವಾಗಲಿದೆ. ಸಿಇಟಿ ತರಬೇತಿ ಕೂಡ ನೀಲಾಗುತ್ತದೆ ಎಂದು ತಿಳಿಸಿದರು.

30 ಸಾವಿರ ಮಕ್ಕಳ ದಾಖಲಾತಿ

ಅಂಗನವಾಡಿಯಲ್ಲೇ ಎಲ್ ಕೆಜಿ, ಯುಕೆಜಿ ಪ್ರಾರಂಭ ಮಾಡಲಾಗಿದ್ದು, ಕಲ್ಯಾಣ ಕರ್ನಾಟಕದಲ್ಲಿಯೇ 1008 ಸಾವಿರ ಎಲ್ಕೆಜಿ ಹಾಗೂ ಯುಕೆಜಿ ನರ್ಸರಿ ತೆರೆಯಲಾಗುತ್ತದೆ. ಈಗಾಗಲೇ 30 ಸಾವಿರ ಮಕ್ಕಳು ದಾಖಲಾತಿ ಮಾಡಿಕೊಂಡಿದ್ದಾರೆ ಎಂದರು.

ಸೆಪ್ಟಂಬರ್‌ನಿಂದ ಪ್ರತಿ ನಿತ್ಯ ಮೊಟ್ಟೆ

ಸರ್ಕಾರ ಶಾಲೆಗಳಿಗೆ ಉಚಿತ ವಿದ್ಯುತ್ ಕೊಟ್ಟಿದ್ದೇವೆ. ರಾಗಿ ಮಾಲ್ಟ್ ಕೊಡುತ್ತಿದ್ದೇವೆ. ಅಜೀಂ ಪ್ರೇಮ್ಜೀ ಮೊಟ್ಟೆ ಕೊಡಲು 1,500 ಕೋಟಿ ರೂ. ಕೊಟ್ಟಿದ್ದಾರೆ. ಆಗಸ್ಟ್ 15ರಿಂದ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತದೆ. ಸೆಪ್ಟೆಂಬರ್‌ನಿಂದ ವಾರದ ಎಲ್ಲ ದಿನ ಮೊಟ್ಟೆ ಕೊಡಲು ಚಿಂತನೆ ನಡೆದಿದೆ ಎಂದು ಹೇಳಿದರು.

ಬ್ಯಾಗ್‌ಲೆಸ್ ಡೇ ಕಡ್ಡಾಯ

ಆದರ್ಶ ಶಾಲೆಗಳಲ್ಲಿ ಪಿಯು ಕಾಲೇಜ್ ತೆರೆದು ಕಾಲೇಜು ಕೊರತೆ ನೀಗಿಸಲು ತೀರ್ಮಾನ ಮಾಡಿದ್ದೇವೆ. ತಿಂಗಳದ ಮೂರನೇ ಶನಿವಾರ ಬ್ಯಾಗ್ ಲೆಸ್ ಡೇ ಇರುತ್ತದೆ. ಶಿಕ್ಷಕರು ಕಡ್ಡಾಯವಾಗಿ ಇದನ್ನು ಪಾಲಿಸಲು ಸೂಚಿಸಲಾಗಿದೆ. ಬ್ಯಾಗ್ ಲೆಸ್ ಮಾಡದೆ ಇದ್ದರೆ ಕಾನೂನು ಕ್ರಮ ತಗೆದುಕೊಳ್ಳುತ್ತೇವೆ. ಬ್ಯಾಗ್ ಹೊರೆ ಕಡಿಮೆ ಮಾಡಲು ಪಾರ್ಟ್ 1 ಪಾರ್ಟ್ 2 ಪಠ್ಯಕ್ರಮ ವಿಭಾಗ ಮಾಡಿದ್ದೇವೆ ಎಂದು ಮಧು ಬಂಗಾರಪ್ಪ ತಿಳಿಸಿದರು.

ಮುಡಾ ಹಗರಣ ಮುಂದಿಟ್ಟುಕೊಂಡು ಪಾದಯಾತ್ರೆ ಮಾಡಿದರೆ ಅವರು ದಡ್ಡರು. ವಿಧಾನಮಂಡಲದ ಅಧಿವೇಶನದಲ್ಲೇ ಸಿಎಂ ಸುದೀರ್ಘ ಉತ್ತರ ಕೊಟ್ಟಿದ್ದಾರೆ. ಬಿಜೆಪಿಯವರು ಏನೇ ಮಾಡಿದರೂ

ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ. ಸರ್ಕಾರಕ್ಕೆ ರಾಜ್ಯಪಾಲರ ಮೂಲಕ ಒತ್ತಡ ಹಾಕುವುದು ಬಿಜೆಪಿಯ ಕೆಟ್ಟ ಚಾಳಿ. ಅದನ್ನು ಅವರು ಮುಂದುವರೆಸಿಕೊಂಡು ಬಂದಿದ್ದಾರೆ. ತಿಪ್ಪರಲಾಗ ಹಾಕಿದರೂ ಸರ್ಕಾರ ಅಸ್ಥಿರಗೊಳಿಸಲು ಆಗುವುದಿಲ್ಲ. ಕಾನೂನು ತಜ್ಞರಿಂದ ರಾಜ್ಯಪಾಲರು ವರದಿ ಪಡೆದಿರುವ ವಿಚಾರ ನನಗೆ ಗೊತ್ತಿಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net