15,000 ಶಿಕ್ಷಕರ ನೇಮಕಾತಿ ಸದ್ಯಕ್ಕಿಲ್ಲ: ವರ್ಗಾವಣೆ, ಬಡ್ತಿ ಮುಗಿದ ಬಳಿಕ ಆದೇಶ; ಕನಿಷ್ಠ 3 ತಿಂಗಳು ಕಾಯುವ ಅನಿವಾರ್ಯ

Teacher
Published on

| ಎನ್.ಎಲ್. ಶಿವಮಾದು ಬೆಂಗಳೂರು

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿಯಲ್ಲಿ ಆಯ್ಕೆಯಾಗಿ ದಾಖಲಾತಿ ಪರಿಶೀಲನೆ ಮುಗಿಸಿ ನೇಮಕಾತಿ ಪತ್ರಕ್ಕಾಗಿ ಕಾಯುತ್ತಿರುವ 15 ಸಾವಿರ ಮಂದಿ ಕರ್ತವ್ಯಕ್ಕೆ ಸೇರಲು ಇನ್ನೂ ಕನಿಷ್ಠ 3ರಿಂದ 4 ತಿಂಗಳು ಕಾಯಬೇಕಿದೆ.

2022ರ ನವೆಂಬರ್​ನಲ್ಲಿಯೇ ಆಯ್ಕೆ ಪಟ್ಟಿ ಪ್ರಕಟಿಸಿ ಫೆಬ್ರವರಿ ವೇಳೆಗೆ ಸಿಗಬೇಕಿದ್ದ ನೇಮಕಾತಿ ಪತ್ರಕ್ಕೆ ಒಂದಲ್ಲಾ ಒಂದು ಅಡೆತಡೆಗಳು ಎದುರಾಗುತ್ತಲೇ ಇದೆ. ಈಗಾಗಲೇ 7 ತಿಂಗಳು ಮುಗಿದಿದ್ದು, ಈಗ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ನೂತನ ಶಿಕ್ಷಕರ ನೇಮಕಾತಿ ಪತ್ರ ನೀಡಲು ವಿಳಂಬವಾಗಬಹುದು ಎಂದು ಇಲಾಖೆ ಉನ್ನತ ಮೂಲಗಳು ತಿಳಿಸಿವೆ.

ಶಿಕ್ಷಕರ ವರ್ಗಾವಣೆಯು ಜೂ. 6ರಂದು ಆರಂಭವಾಗಿದ್ದು, ಜು.31ರ ವರೆಗೆ ನಡೆಯಲಿದೆ. ಅದಾದ ಬಳಿಕ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮುಖ್ಯ ಶಿಕ್ಷಕರಾಗಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಬಡ್ತಿ ನೀಡಬೇಕಿದೆ. ಬಡ್ತಿ ಪ್ರಕ್ರಿಯೆ ಮುಗಿಸಲು 1ರಿಂದ 2 ತಿಂಗಳ ಸಮಯ ಬೇಕಾಗುತ್ತದೆ. ನಂತರ 6ರಿಂದ 8ನೇ ತರಗತಿಗೆ ನೂತನ ಶಿಕ್ಷಕರನ್ನು ನೇಮಕ ಮಾಡಲು ಖಾಲಿ ಇರುವ ಸ್ಥಳದ ಆಧಾರದಲ್ಲಿ ಕೌನ್ಸೆಲಿಂಗ್ ನಡೆಸಿ ಸ್ಥಳ ನಿಯೋಜನೆ ಮಾಡಲಾಗುತ್ತದೆ. ಇಷ್ಟೆಲ್ಲ ಪ್ರಕ್ರಿಯೆ ಮುಗಿಯಲು ಸಮಯ ಬೇಕಾಗುತ್ತದೆ.

ವಿಳಂಬವಾಗಿದ್ದೇಕೆ?: ಶಾಲಾ ಶಿಕ್ಷಣ ಇಲಾಖೆಯು ಕಳೆದ ನವೆಂಬರ್​ನಲ್ಲಿಯೇ ನೇಮಕಾತಿ ಪತ್ರ ನೀಡಲು ಸಿದ್ಧವಿತ್ತು. ಆದರೆ, ಮೀಸಲಾತಿ ನೀಡುವ ವಿಚಾರದಲ್ಲಿ ವಿವಾಹಿತ ಮಹಿಳಾ ಅಭ್ಯರ್ಥಿಗಳ ಪತಿಯ ಆದಾಯ ಪ್ರಮಾಣಪತ್ರವನ್ನು ಪರಿಗಣಿಸಲಾಗಿತ್ತು. ಇದರಿಂದ 980 ಅಭ್ಯರ್ಥಿಗಳು ಅರ್ಹರಿದ್ದರೂ ಮೀಸಲಾತಿಯಡಿ ಹುದ್ದೆಯನ್ನು ಕಳೆದುಕೊಳ್ಳುತ್ತಿದ್ದರು. ಈ ಪ್ರಕರಣ ನ್ಯಾಯಾಲಯಕ್ಕೆ ಹೋಗಿದ್ದರಿಂದ ಮತ್ತು ಇದೇ ವಿಚಾರವಾಗಿ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳು ಕೂಡ ಕೋರ್ಟ್ ಮೆಟ್ಟಿಲೇರಿದ್ದರಿಂದ ಪ್ರಕ್ರಿಯೆ ಮುಂದೆ ಸಾಗಲಿಲ್ಲ. ಅಷ್ಟರಲ್ಲಿ ಚುನಾವಣೆ ನೀತಿಸಂಹಿತೆ ಜಾರಿಗೊಂಡಿದ್ದರಿಂದ ವಿಳಂಬವಾಗಿದೆ. ಮತ್ತೊಂದೆಡೆ, ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನಡೆಸುವ ಮುನ್ನ ಶಿಕ್ಷಕರಿಗೆ ಬಡ್ತಿ ನೀಡಬೇಕೆಂದು ಶಿಕ್ಷಕರ ಸಂಘವು ಒತ್ತಾಯಿಸಿತ್ತು.

ಶಿಕ್ಷಕರ ವರ್ಗಾವಣೆ ಮುಗಿದ ನಂತರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡಿ ಖಾಲಿಯಾಗುವ ಹುದ್ದೆಗಳ ಆಧಾರದಲ್ಲಿ 6ರಿಂದ 8ನೇ ತರಗತಿ ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. | ಡಾ. ಆರ್. ವಿಶಾಲ್, ಶಾಲಾ ಶಿಕ್ಷಣ ಆಯುಕ್ತ

ನಂತರ ಹೆಚ್ಚುವರಿ ಪ್ರಕ್ರಿಯೆಯು ಅವೈಜ್ಞಾನಿಕವಾಗಿದೆ. ದಾಖಲೆ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡಬೇಕೆಂಬ ಬೇಡಿಕೆ ಕಾರಣ ವರ್ಗಾವಣೆ ಪ್ರಕ್ರಿಯೆ ನಡೆದಿರಲಿಲ್ಲ. ಶೈಕ್ಷಣಿಕ ವರ್ಷದ ಕೊನೇ ಘಳಿಗೆಯಲ್ಲಿ ಅವಕಾಶ ನೀಡಿದ್ದರೂ ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿತ್ತು.

ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ವರ್ಗಾವಣೆ ಪ್ರಕ್ರಿಯೆಗಳು ಆರಂಭವಾಗಿವೆ. ಶಿಕ್ಷಕರ ಪರ-ವಿರೋಧದ ನಡುವೆಯೂ ಹೆಚ್ಚುವರಿ ಪ್ರಕ್ರಿಯೆ ನಡೆದಿದೆ. ಇನ್ನೂ ಸಾಮಾನ್ಯ ಕೋರಿಕೆ ವರ್ಗಾವಣೆ, ಜಿಲ್ಲಾ ಹಂತದ ವರ್ಗಾವಣೆ ಕೌನ್ಸೆಲಿಂಗ್, ವಿಭಾಗೀಯ ಹಂತದ ವರ್ಗಾವಣೆ (ಒಳಗೆ/ಹೊರಗೆ) ನಡೆಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net