ಶಿವಮೊಗ್ಗ ಎಫ್‌ಎಂ ಕೇಂದ್ರದಲ್ಲಿ ಧ್ವನಿಮುದ್ರಣ ಘಟಕ

transmitter installation
ಶಿವಮೊಗ್ಗದ ದೂರದರ್ಶನ ಮರುಪ್ರಸಾರ ಕೇಂದ್ರದಲ್ಲಿ 10 ಕಿ.ವಾ. ಸಾಮರ್ಥ್ಯದ ಟ್ರಾನ್ಸ್‌ಮೀಟರ್ ಅಳವಡಿಕೆಗೆ ಕೇಂದ್ರ ಸಚಿವ ಡಾ. ಎಲ್.ಮುರುಗನ್ ಚಾಲನೆ ನೀಡಿದರು. ಬಿ.ವೈ.ರಾಘವೇಂದ್ರ, ಆರಗ ಜ್ಞಾನೇಂದ್ರ, ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಕೆ.ಬಿ.ಅಶೋಕನಾಯ್ಕ, ಕೆ.ಟಿ.ಸಂಜೀವ್, ಡಾ. ರಘು, ಸುಬ್ರಾಯ ಭಟ್ ಇದ್ದರು.
Published on

ಶಿವಮೊಗ್ಗ: ದೇಶದ ಎಲ್ಲ ಆಕಾಶವಾಣಿ ಕೇಂದ್ರಗಳನ್ನು ಜನರ ಆಶೋತ್ತರಗಳಿಗೆ ಪೂರಕವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಕಳೆದ ಸಾಲಿನಲ್ಲಿ 2,500 ಕೋಟಿ ರೂ. ಬಿಡುಗಡೆಗೊಳಿಸಿ ಮೂಲ ಸೌಲಭ್ಯಗಳೊಂದಿಗೆ ಅತ್ಯಾಧುನಿಕ ತಂತ್ರಾಂಶಗಳನ್ನು ಅಳವಡಿಸಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್.ಮುರುಗನ್ ಹೇಳಿದರು.

ವಿದ್ಯಾನಗರದ ದೂರದರ್ಶನ ಮರುಪ್ರಸಾರ ಕೇಂದ್ರದಲ್ಲಿ ಎಫ್‌ಎಂ ರೇಡಿಯೋ ಆರಂಭಿಸಲು ಕೆನಡಾದಿಂದ ತರಿಸಿದ್ದ ಅತ್ಯಧಿಕ ತರಂಗಾಂತರಗಳನ್ನು ಸೂಸುವ ಟ್ರಾನ್ಸ್‌ಮೀಟರ್ ಅಳವಡಿಕೆ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಕೋಲಾರ, ರಾಣೆಬೆನ್ನೂರು, ಬೀದರ್ ಮತ್ತು ಉಡುಪಿ ಜಿಲ್ಲೆಗಳಿಗೂ ಅತ್ಯಧಿಕ ತರಂಗಾಂತರಗಳನ್ನು ಸೂಸುವ ಟ್ರಾನ್ಸ್‌ಮೀಟರ್‌ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಕರ್ನಾಟಕದಲ್ಲಿ ಆಕಾಶವಾಣಿ ಕೇಂದ್ರಗಳು ಮತ್ತಷ್ಟು ಸಮರ್ಥವಾಗಿ ಕಾರ್ಯನಿರ್ವಹಿಸಲಿವೆ ಎಂದರು.

ಈಗಾಗಲೇ ಭದ್ರಾವತಿಯಲ್ಲಿ ವ್ಯವಸ್ಥಿತವಾದ ಆಕಾಶವಾಣಿ ಕೇಂದ್ರವಿದೆ. ಇದಕ್ಕೆ ಪೂರಕವಾಗಿ ಶಿವಮೊಗ್ಗದಲ್ಲಿ ಉದ್ದೇಶಿತ ಎಫ್‌ಎಂ ರೇಡಿಯೋ ಕೇಂದ್ರದಲ್ಲಿ ಅತ್ಯಾಧುನಿಕ ಹಾಗೂ ಸುಸಜ್ಜಿತ ಧ್ವನಿಮುದ್ರಣ ಘಟಕ ಆರಂಭಕ್ಕೆ ಅಗತ್ಯ ನೆರವನ್ನು ಕೇಂದ್ರ ಸರ್ಕಾರದಿಂದ ಒದಗಿಸಲಾಗುವುದು. ಅತ್ಯಲ್ಪ ಅವಧಿಯಲ್ಲಿ ಕಾರ್ಯಾರಂಭ ಆಗಲಿದೆ. ಆಕಾಶವಾಣಿ ಈ ದೇಶದ ಸಾಂಪ್ರದಾಯಿಕ, ಕಲೆ, ಸಾಹಿತ್ಯ, ಸಂಗೀತವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯ ಕಲಾವಿದರಿಗೆ ವೇದಿಕೆಗಳನ್ನು ಒದಗಿಸಿ ಅವರ ಕಲೆಯನ್ನು ಜಗತ್ತಿಗೆ ಪರಿಚಯಿಸುತ್ತಿದೆ ಎಂದು ಹೇಳಿದರು.

ದೂರದ ಗುಡ್ಡ, ಬೆಟ್ಟ ಪ್ರದೇಶಗಳಲ್ಲೂ ಆಕಾಶವಾಣಿ ತನ್ನ ಇರುವಿಕೆಯನ್ನು ಮತ್ತೆಮತ್ತೆ ಪರಿಚಯಿಸಲಿದೆ. ಸಂಸದ ಬಿ.ವೈ.ರಾಘವೇಂದ್ರ ಅವರ ಒತ್ತಾಸೆಯಂತೆ ಎಫ್‌ಎಂ ರೇಡಿಯೋ ಕೇಂದ್ರವನ್ನು ಅಭಿವೃದ್ಧಿಪಡಿಸಲು ಅಗತ್ಯ ಸಹಕಾರ ನೀಡಲಾಗುವುದು. ವಿಐಪಿ ಸ್ಟುಡಿಯೋಗೆ ಪ್ರಸ್ತಾವನೆ ಸಲ್ಲಿಸಿದ್ದು, ಇದನ್ನೂ ಮಂಜೂರು ಮಾಡಲಾಗುವುದು. ಸಾಮಾನ್ಯವೆನಿಸುವ ಕಾರ್ಯಗಳನ್ನು ನಿರ್ಲಕ್ಷಿಸದೆ ಕೈಗೆತ್ತಿಕೊಳ್ಳುವ ಅವರ ಸ್ವಭಾವ ಪ್ರಶಂಸನೀಯ ಎಂದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, 2024ರ ಜ.19ರಂದು ಟ್ರಾನ್ಸ್‌ಮೀಟರ್ ಅಳವಡಿಕೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಸಂಸದರ ಇಚ್ಛಾಶಕ್ತಿಯಿಂದ ಒಂದು ವರ್ಷದಲ್ಲಿ 10 ಕೋಟಿ ರೂ. ವೆಚ್ಚದ 10 ಕಿ.ವಾ. ಸಾಮರ್ಥ್ಯದ ಟ್ರಾನ್ಸ್‌ಮೀಟರ್ ಅಳವಡಿಸಲಾಗಿದೆ. ತಾಂತ್ರಿಕ ಪರಿಣಿತರಿಂದ ಕೆಲಸ ಶುರುವಾಗಿದ್ದು ಮಲೆನಾಡಿನಲ್ಲಿ ಎಫ್‌ಎಂ ಕಾರ್ಯಕ್ರಮಗಳನ್ನು ಅಡೆತಡೆ ಇಲ್ಲದೆ ಆಲಿಸಬಹುದು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಎಂಎಲ್‌ಸಿ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಶಾಸಕ ಕೆ.ಬಿ.ಅಶೋಕನಾಯ್ಕ, ಆಕಾಶವಾಣಿ ದಕ್ಷಿಣ ವಿಭಾಗೀಯ ಮುಖ್ಯಸ್ಥ ಕೆ.ಟಿ.ಸಂಜೀವ್, ಉಪನಿರ್ದೇಶಕ ಡಾ. ರಘು, ಕಾರ್ಯಕ್ರಮ ಸಂಯೋಜಕ ಸುಬ್ರಾಯ ಭಟ್, ಆಕಾಶವಾಣಿಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net