

ಹೊಸನಗರ: ಸಭಾ ನಡಾವಳಿಗಳನ್ನು ಸಭೆ ಮುಗಿದ ಬಳಿಕ ಸ್ಥಳದಲ್ಲೇ ದಾಖಲು ಮಾಡಿ ಸದಸ್ಯರಿಂದ ಕಡತಕ್ಕೆ ಸಹಿ ಪಡೆಯಬೇಕು. ಇದರಿಂದ ಹೆಚ್ಚುವರಿ ನಡಾವಳಿಗಳ ಅಕ್ರಮ ದಾಖಲು ತಡೆಯಬಹುದು ಎಂದು ಸದಸ್ಯ ಕೆ.ಕೆ.ಅಶ್ವಿನಿಕುಮಾರ್ ಸಭೆಯ ಗಮನ ಸೆಳೆದರು.
ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷ ನಾಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಯಾವುದೇ ಆದೇಶ, ಸುತ್ತೋಲೆಗಳನ್ನು ಅಧಿಕಾರಿಗಳು ಸಭೆಯ ಗಮನಕ್ಕೆ ತರಬೇಕು. ಸರ್ಕಾರಿ ಸುತ್ತೋಲೆಗಳನ್ನು ಚುನಾಯಿತ ಸದಸ್ಯರಿಂದ ಮರೆಮಾಚುವ ಸಿಬ್ಬಂದಿ ಆಟಾಟೋಪಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಪಟ್ಟಣ ಪಂಚಾಯಿತಿ ನೂತನ ಕಟ್ಟಡವನ್ನು ಹಳೇ ಗೀತಾ ಚಿತ್ರಮಂದಿರದ ಸ್ಥಳದಲ್ಲೇ ನಿರ್ಮಿಸಬೇಕು. ಹಾಲಿ ಕಚೇರಿಯನ್ನು ಪಾರಂಪರಿಕ ಕಟ್ಟಡದಂತೆ ಉಳಿಸಿಕೊಳ್ಳಬೇಕು. ಬಸ್ ನಿಲ್ದಾಣಕ್ಕೆ ಹತ್ತಿರವಾದ ಹಿನ್ನೆಲೆಯಲ್ಲಿ ಅಗತ್ಯ ಬಿದ್ದಲ್ಲಿ ಮುಂದಿನ ದಿನಗಳಲ್ಲಿ ಪಂಚಾಯಿತಿಗೆ ಹೆಚ್ಚು ಆದಾಯ ತರುವ ಸುಸಜ್ಜಿತ ವಾಣಿಜ್ಯ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿದರು.
ಅನಿಯಮಿತ ವಿದ್ಯುತ್ ಕಡಿತದಿಂದ ಕುಡಿಯುವ ನೀರು ಸರಬರಾಜಿನಲ್ಲಿ ಭಾರಿ ವ್ಯತ್ಯಯವಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜನಪ್ರತಿನಿಧಿಗಳು ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಈ ಕುರಿತು ಅಗತ್ಯ ಕ್ರಮಕ್ಕೆ ಮುಂದಾಗಬೇಕು. ಬೇಸಿಗೆ, ಮಾರಿಜಾತ್ರೆ ಸಮೀಪಿಸಿರುವುದರಿಂದ ಶೀಘ್ರ ಬದಲಿ ವ್ಯವಸ್ಥೆಗೆ ಮುಂದಾಗಬೇಕು. ಮೆಸ್ಕಾಂ ಅಧಿಕಾರಿಗಳ ಗಮನ ಸೆಳೆಯಬೇಕು ಎಂದು ಕೃಷ್ಣವೇಣಿ ಒತ್ತಾಯಿಸಿದರು.
ಆರೋಗ್ಯ ನಿರೀಕ್ಷಕಿ ಶ್ರುತಿ ಪಂಚಾಯಿತಿ ವ್ಯಾಪ್ತಿಯ ಕಳೆದ ನಾಲ್ಕು ತಿಂಗಳ ಜನನ-ಮರಣ ವರದಿ ದಾಖಲಿಸಿದರು. ಮಾವಿನಕೊಪ್ಪ ಸರ್ಕಾರಿ ಶಾಲೆಯ ಶಿಥಿಲಾವಸ್ಥೆಯಲ್ಲಿರುವ ಹಳೇ ಶೌಚಗೃಹ ಕಟ್ಟಡ ತೆರವಿಗೆ, ಮುಕ್ತಿವಾಹಿನಿ ವಾಹನ ದುರಸ್ತಿ, ಘನತ್ಯಾಜ್ಯ ಸರಬರಾಜು, ವಾಹನಗಳ ದುರಸ್ತಿ ಬಿಲ್ ಪಾವತಿಗೆ, ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳ ಬಳಕೆಗೆ ಜೆಸಿಬಿ, ಹಿಟಾಚಿ ಯಂತ್ರಗಳ ಬಾಡಿಗೆ ನಿಗದಿಪಡಿಸಿ ಸಭೆ ಅನುಮೋದನೆ ನೀಡಿತು.
ಉಪಾಧ್ಯಕ್ಷೆ ಚಂದ್ರಕಲಾ, ಸದಸ್ಯರಾದ ಸುರೇಂದ್ರ ಕೋಟ್ಯಾನ್, ಗುರುರಾಜ್ ಬಜಾಜ್, ಶಹೀನಾ, ಸಿಂಥಿಯಾ ಸೆರಾವೊ, ಗುಲಾಬಿ, ಗಾಯತ್ರಿ, ನಾಮ ನಿರ್ದೇಶನ ಸದಸ್ಯರಾದ ಎಚ್.ಎಂ. ನಿತ್ಯಾನಂದ, ನೇತ್ರಾವತಿ ಭಟ್, ಮುಖ್ಯಾಧಿಕಾರಿ ಎಂ.ಕೆ.ಸುರೇಶ್, ಕಂದಾಯ ನಿರೀಕ್ಷಕ ಮಂಜುನಾಥ್, ಬಸವರಾಜ್ ಇತರರಿದ್ದರು.