

|ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಕರೊನಾ ಕಾಲದಲ್ಲಿನ ಲಾಕ್ಡೌನ್ನಿಂದಾಗಿ ಕಂಗೆಟ್ಟಿದ್ದ ರಾಜ್ಯಕ್ಕೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಸಂಗ್ರಹದ ಪ್ರಗತಿ ಹೊಸ ಆಶಾಕಿರಣ ಮೂಡಿಸಿದೆ. ಜಿಎಸ್ಟಿ ಸಂಗ್ರಹದಲ್ಲಿ ಗಣನೀಯ ಪ್ರಗತಿ ಸಾಧಿಸುವ ಮೂಲಕ ಕರ್ನಾಟಕ ಮುಂಚೂಣಿ ರಾಜ್ಯಗಳ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಕೋವಿಡ್ ಮೂರನೇ ಅಲೆ ಆತಂಕದ ನಡುವೆಯೂ ಆರ್ಥಿಕ ಚಟುವಟಿಕೆ ಚಿಗಿತುಕೊಳ್ಳುವ ಭರವಸೆ ಮೂಡಿದೆ.
ಆರ್ಥಿಕ ವರ್ಷದ ಲೆಕ್ಕವನ್ನು ಪರಿಗಣಿಸುವುದಾದರೆ, 2021ರ ಏಪ್ರಿಲ್ನಿಂದ ನವೆಂಬರ್ ಅಂತ್ಯದ ವರೆಗೆ ರಾಜ್ಯದಲ್ಲಿ 51,467 ಕೋಟಿ ರೂ. ಸಂಗ್ರಹವಾಗಿದೆ. 2020ರ ಏಪ್ರಿಲ್ನಿಂದ ನವೆಂಬರ್ ಅವಧಿಯಲ್ಲಿ 43,319 ಕೋಟಿ ರೂ. ಸಂಗ್ರಹವಾಗಿತ್ತು. ಅಂದರೆ 8 ಸಾವಿರ ಕೋಟಿ ರೂ.ನಷ್ಟು ಜಿಎಸ್ಟಿ ಹೆಚ್ಚಾಗಿದೆ. ಈ ಆರ್ಥಿಕ ವರ್ಷದಲ್ಲಿ (2021-22) 82-85 ಸಾವಿರ ಕೋಟಿ ರೂ. ದಾಟಬಹುದೆಂಬ ನಿರೀಕ್ಷಿಸಲಾಗಿದೆ. ಜಿಎಸ್ಟಿ ಸಂಗ್ರಹದಲ್ಲಿ ಒಟ್ಟಾರೆಯಾಗಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಗುಜರಾತ್ ನಂತರದಲ್ಲಿದೆ. ಹಾಗೆಯೇ ಗುಜರಾತ್ ಮತ್ತು ಕರ್ನಾಟಕ ನಡುವೆ ಹೆಚ್ಚಿನ ಅಂತರವೇನೂ ಇಲ್ಲ.
2021ರಲ್ಲಿ ಏಪ್ರಿಲ್- ಮೇ ನಲ್ಲಿ ಕರೊನಾ ಹಾಗೂ ಲಾಕ್ಡೌನ್ ಕಾರಣಕ್ಕೆ ಜಿಎಸ್ಟಿ ಸಂಗ್ರಹದ ಮೇಲೆ ಪರಿಣಾಮ ಬೀರಿತ್ತು. ಆದರೆ, ಹಂತಹಂತವಾಗಿ ಲಾಕ್ಡೌನ್ ಸಡಿಲಿಕೆಯಾಗಿ ರಫ್ತು ಹೆಚ್ಚಾಗುತ್ತಿದ್ದಂತೆ ಜಿಎಸ್ಟಿ ಕೂಡ ಗಣನೀಯವಾಗಿ ವೃದ್ಧಿಯಾಗಿದೆ.ಕರೊನಾ ಸಾಂಕ್ರಾಮಿಕದಿಂದ ಕುಸಿದಿದ್ದ ಆರ್ಥಿಕ ಪರಿಸ್ಥಿತಿ ಪುನಃ ಸಹಜ ಸ್ಥಿತಿಗೆ ಮರಳುವ ಲಕ್ಷಣ ಈ ಬೆಳವಣಿಗೆಯಿಂದ ಗೋಚರಿಸುತ್ತಿದೆ ಎಂಬುದು ಹಣಕಾಸು ಇಲಾಖೆ ಅಧಿಕಾರಿಗಳ ವಿವರಣೆ. ಕರೊನಾ ಬಗ್ಗೆ ಇನ್ನೂ ಆತಂಕವಿದೆ, ಹೂಡಿಕೆದಾರರು ಕಾದು ನೋಡುತ್ತಿದ್ದಾರೆ. ಲಸಿಕೆ ವಿತರಣೆ ವೇಗವಾಗಿ ನಡೆದ ಪರಿಣಾಮ ಒಂದಷ್ಟು ಕಳವಳ ದೂರ ಆಗಿದೆ ಎನಿಸಿದರೂ ಊಹಾಪೋಹ ಸುದ್ದಿ ಹರಿದಾಟದಿಂದ ಇನ್ನೂ ಜನರಲ್ಲಿ ಸ್ಪಷ್ಟತೆ ಮೂಡಿಲ್ಲ, ಮೂರನೇ ಅಲೆ ಆತಂಕ ಇನ್ನೂ ಇದ್ದೇ ಇದೆ. ಹೀಗಾಗಿ ಆರ್ಥಿಕ ಚಟುವಟಿಕೆ ಇನ್ನಷ್ಟು ತೆರೆದುಕೊಳ್ಳುವ ಅವಕಾಶ ಇದ್ದರೂ ಸಾಧ್ಯವಾಗಿಲ್ಲ.
| ಬಿ.ಟಿ.ಮನೋಹರ್ ಸರ್ಕಾರದ ಜಿಎಸ್ಟಿ ಸಲಹಾ ಸಮಿತಿ ಸದಸ್ಯ
ರಾಜ್ಯದ ಕೈಬಿಡದ ಐಟಿ: ವರ್ಕ್ಫ್ರಂ ಹೋಂ ನಿಯಮ ಜಾರಿಗೆ ಬಂದಿದ್ದರಿಂದಾಗಿ ಲಾಕ್ಡೌನ್ ಹೊರತಾಗಿಯೂ ಐಟಿ ಕ್ಷೇತ್ರದಿಂದ ಜಿಎಸ್ಟಿ ಸಂಗ್ರಹ ಅಬಾಧಿತವಾಗಿದೆ ಎಂಬ ಅಭಿಪ್ರಾಯವಿದೆ. ಅದೇ ರೀತಿ ಉಳಿದ ಕ್ಷೇತ್ರಗಳಲ್ಲಿ ದಿನದಿನಕ್ಕೂ ಸುಧಾರಣೆ ಕಾಣಿಸಿದೆ. ಅಬಕಾರಿ, ಸಾರಿಗೆ ಕ್ಷೇತ್ರದಲ್ಲೂ ಬೆಳವಣಿಗೆ ಕಾಣಿಸುತ್ತಿದೆ ಎಂಬುದು ಅಧಿಕಾರಿಗಳ ವಿವರಣೆಯಾಗಿದೆ.
ಜಿಎಸ್ಟಿ 1.31 ಲಕ್ಷ ಕೋಟಿ ರೂ. ಸಂಗ್ರಹ: ನವೆಂಬರ್ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) 1.31 ಲಕ್ಷ ಕೋಟಿ ರೂ. ಸಂಗ್ರಹವಾಗಿದ್ದು, ಶೇ.25 ಬೆಳವಣಿಗೆ ದಾಖಲಾಗಿದೆ. ಜಿಎಸ್ಟಿ ಅನುಷ್ಠಾನಕ್ಕೆ ಬಂದ ನಂತರದಲ್ಲಿ ಸಂಗ್ರಹವಾದ ಎರಡನೇ ಅತಿ ಹೆಚ್ಚಿನ ಮೊತ್ತವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ. ನವೆಂಬರ್ನಲ್ಲಿ 1,31,526 ಕೋಟಿ ರೂ.ಸಂಗ್ರಹವಾಗಿದೆ. ಇದರಲ್ಲಿ ಸಿಜಿಎಸ್ಟಿ 23,978 ಕೋಟಿ ರೂ., ಎಸ್ಜಿಎಸ್ಟಿ 31,127 ಕೋಟಿ ರೂ., ಐಜಿಎಸ್ಟಿ 66,815 ಕೋಟಿ ರೂ.(ಈ ಪೈಕಿ 32,165 ಕೋಟಿ ರೂ. ಆಮದು ಸುಂಕ) ಮತ್ತು 9,606 ಕೋಟಿ ರೂ. ಸೆಸ್ (ಇದರಲ್ಲಿ 653 ಕೋಟಿ ರೂ. ಆಮದು ಸುಂಕ) ಎಂದು ಸಚಿವಾಲಯ ಹೇಳಿದೆ. ಸತತ ಐದನೇ ತಿಂಗಳು ಜಿಎಸ್ಟಿ ಸಂಗ್ರಹ ಒಂದು ಲಕ್ಷ ಕೋಟಿ ರೂ. ಗಡಿ ದಾಟಿದೆ. 2020ರ ನವೆಂಬರ್ಗೆ ಹೋಲಿಸಿದರೆ (1.05 ಲಕ್ಷ ಕೋಟಿ ರೂ.) ಈ ನವೆಂಬರ್ನಲ್ಲಿ ಶೇ. 25 ಬೆಳವಣಿಗೆ ದಾಖಲಾಗಿದೆ. 2019ರ ನವೆಂಬರ್ಗಿಂತ ಶೇಕಡ 27 ಹೆಚ್ಚು ತೆರಿಗೆ ಸಂಗ್ರಹವಾಗಿದೆ.
ಗರಿಷ್ಠ ಸಂಗ್ರಹ: ಜಿಎಸ್ಟಿ ಸಂಗ್ರಹ ಈ ವರ್ಷ ಏಪ್ರಿಲ್ನಲ್ಲಿ ಇದುವರೆಗಿನ ಗರಿಷ್ಠ 1,39,708 ಕೋಟಿ ರೂ. ಆಗಿತ್ತು. ಅಕ್ಟೋಬರ್ನಲ್ಲಿ 1,30,127 ಕೋಟಿ ರೂ. ಸಂಗ್ರಹವಾಗಿದ್ದು ನಂತರದ ಗರಿಷ್ಠ ಮೊತ್ತವಾಗಿತ್ತು. ಈ ನವೆಂಬರ್ನಲ್ಲಿ 1,31, 526 ಕೋಟಿ ಸಂಗ್ರಹವಾಗಿದ್ದು, ಇದು ಎರಡನೇ ಗರಿಷ್ಠ ಮೊತ್ತವಾಗಿ ದಾಖಲಾಗಿದೆ.
ಬಟ್ಟೆ, ಚಪ್ಪಲಿ ತುಟ್ಟಿ?: ಟೆಕ್ಸ್ಟೈಲ್, ಫುಟ್ವೇರ್, ರೆಡಿಮೇಡ್ ಬಟ್ಟೆ ಖರೀದಿ ಜನವರಿ ಬಳಿಕ ಕೊಂಚ ದುಬಾರಿಯಾಗಬಹುದು. ಒಂದು ಸಾವಿರ ರೂ. ಒಳಗಿನ ಖರೀದಿಗೆ ಪ್ರಸ್ತುತ ಶೇ.5 ಜಿಎಸ್ಟಿ ಇದೆ. ಜ.1ರಿಂದ ಅದು ಶೇ.12ಕ್ಕೆ ಏರಿಕೆಯಾಗಲಿದೆ. ಈ ಕ್ಷೇತ್ರದವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಎಫ್ಕೆಸಿಸಿಐ ಕೂಡ ಪರ್ಯಾಯ ಕ್ರಮಗಳತ್ತ ಗಮನ ಕೊಡಿ ಎಂದು ಕೇಂದ್ರಕ್ಕೆ ಸಲಹೆ ನೀಡಿದೆ.
ಏರಿಕೆಗೆ ಕಾರಣಗಳು:
1. ಜನರಲ್ಲಿನ ಖರೀದಿ ಶಕ್ತಿ ಸುಧಾರಣೆ. ಖಾಸಗಿ ಕ್ಷೇತ್ರದಲ್ಲಿ ಕಡಿತವಾಗಿದ್ದ ವೇತನಗಳು ಮರುಸ್ಥಾಪನೆಯಾಗಿವೆ.
2. 2017ರಿಂದ 2021ರ ಏಪ್ರಿಲ್ ವರೆಗೆ ರಿಟರ್ನ್ ಫೈಲ್ ಮಾಡದವರಿಗಾಗಿ ಜಾರಿ ಮಾಡಿದ ಯೋಜನೆ ಫಲಕೊಟ್ಟಿದೆ.
3. ಜಾಗೃತ ದಳದ ಚಟುವಟಿಕೆ ಚುರುಕುಗೊಂಡಿದ್ದರಿಂದ ವಂಚನೆ ನಿಯಂತ್ರಣವಾಗಿ ತೆರಿಗೆ ವ್ಯಾಪ್ತಿಗೆ ಬರುವ ಪ್ರಮಾಣ ಹೆಚ್ಚಾಗುತ್ತಿದೆ.
4. ಇ- ವೇ ಬಿಲ್, ಇ ಇನ್ವಾಯ್್ಸ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿರುವ ಕಾರಣ ತೆರಿಗೆ ವ್ಯಾಪ್ತಿಗೆ ಬರುವವರ ಸಂಖ್ಯೆ ವೃದ್ಧಿಯಾಗುತ್ತಿದೆ.
5. ಕೈಗಾರಿಕೆಗಳು ಸಹಜ ಸ್ಥಿತಿಗೆ ಮರಳುತ್ತಿವೆ, ಉತ್ಪಾದನಾ ಸಾಮರ್ಥ್ಯ ಮುಂಚಿನಂತೆಯೇ ಆಗುತ್ತಿದೆ.