ಪರಿಷತ್‌ಗೆ ಶಿಫಾರಸು; ಹಿರಿಯ ಸಚಿವರ ಒತ್ತಡ

KPCC 17 May 20
Published on

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ಅಭ್ಯರ್ಥಿ ಆಯ್ಕೆ ವೇಳೆ ನಮ್ಮ ಅಭಿಪ್ರಾಯಗಳನ್ನೂ ಸಹ ಪರಿಗಣಿಸಬೇಕೆಂದು ಸಚಿವರನೇಕರು ವರಾತ ತೆಗೆದಿದ್ದಾರೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮಾತ್ರ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಲ್ಲ, ನಮ್ಮನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ.
ಪರಿಷತ್ ಅಭ್ಯರ್ಥಿ ಆಯ್ಕೆಗೆ ದೆಹಲಿಗೆ ತೆರಳುವ ಮುನ್ನ 12ಕ್ಕೂ ಹೆಚ್ಚು ಸಚಿವರು ಸಿಎಂ, ಡಿಸಿಎಂ ಭೇಟಿ ಮಾಡಿ ತಮ್ಮ ಆಪ್ತರಿಗೆ ಅವಕಾಶ ಕೊಡುವಂತೆ ಮನವಿ ಸಲ್ಲಿಸಿದ್ದರು. ಕೆಲವು ಸಚಿವರು ದೆಹಲಿಗೆ ತೆರಳಿ ಪಕ್ಷದ ಪ್ರಮುಖರನ್ನು ಭೇಟಿ ಮಾಡಿ ಅವಕಾಶಕ್ಕಾಗಿ ಬೇಡಿಕೆ ಇಟ್ಟಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರು ಸಹಜವಾಗಿ ತಮ್ಮ ಆಪ್ತರ ಒತ್ತಡ ತಾಳಲಾರದೆ ಅವರ ಬೆನ್ನಿಗೆ ನಿಂತು ಲಾಬಿ ನಡೆಸಿದ್ದಾರೆ. ಜಿಲ್ಲಾವಾರು, ಜಾತಿವಾರು ಆಧಾರದಲ್ಲಿ ಪ್ರಸ್ತಾವನೆಯನ್ನು ಪಕ್ಷದ ಮುಂದೆ ಮಂಡಿಸಿದ್ದಾರೆ. ಈ ನಡುವೆ ಕೆಪಿಸಿಸಿ ಸಂಭಾವ್ಯರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಈ ವೇಳೆ ಕೆಲವು ಹೆಸರುಗಳು ಬಿಟ್ಟುಹೋಗಿವೆ. ಇದು ಸಚಿವರ ಕೋಪಕ್ಕೂ ಕಾರಣವಾಗಿದೆ.
ಪ್ರಸ್ತುತ ಪಕ್ಷದೊಳಗೆ ನಡೆಯುತ್ತಿರುವ ಚರ್ಚೆಯಲ್ಲಿ ಸಿಎಂ, ಡಿಸಿಎಂ ಸ್ಥಾನ ಹಂಚಿಕೆ, ಜಾತಿವಾರು ಸ್ಥಾನ ಹಂಚಿಕೆ ಬಗ್ಗೆ ಚರ್ಚೆ ನಡೆಯುತ್ತಿರುವುದರಿಂದ ತಮ್ಮ ಬೇಡಿಕೆಗೆ ಮಾನ್ಯತೆ ಸಿಗದೇ ಹೋಗಬಹುದೆಂದು ಸಚಿವರಲ್ಲಿ ಚಡಪಡಿಕೆಯೂ ಶುರುವಾಗಿದೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಎರಡು ಹೆಸರನ್ನು ಪ್ರಸ್ತಾಪಿಸಿದ್ದಾರೆ. ಬೆಳಗಾವಿ ಭಾಗಕ್ಕೆ ಪ್ರಾಧಾನ್ಯತೆ ಸಿಗಬೇಕು, ಬೆಂಗಳೂರಿಗರಿಗೆ ಮಾತ್ರ ಅವಕಾಶ ಸಿಗಬಾರದು ಮತ್ತು ತಮ್ಮ ಸಮುದಾಯಕ್ಕೆ ಅವಕಾಶ ಸಿಗಬೇಕೆಂದು ಬೇಡಿಕೆ ಇಡುವ ಜತೆಗೆ ತಮ್ಮ ಪ್ರಸ್ತಾವನೆಯನ್ನೂ ಪಕ್ಷದ ಮುಂದಿಟ್ಟಿದ್ದಾರೆ. ಅದೇ ರೀತಿ ಗೃಹ ಸಚಿವ ಪರಮೇಶ್ವರ್, ವಸತಿ ಸಚಿವ ಜಮೀರ್ ಅಹ್ಮದ್ ಕೂಡ ತಮ್ಮ ಆಪ್ತರ ಹೆಸರನ್ನು ಶಿಾರಸು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net