

ಕೋಲಾರ: ಜಿಲ್ಲೆಯ ಕೆಜಿಎಫ್ ತಾಲೂಕು ವ್ಯಾಪ್ತಿಯಲ್ಲಿ ಸಾಗುವಳಿ ಚೀಟಿ ವಿತರಣೆಯಲ್ಲಿ ಅಕ್ರಮ ಎಸಗಿರುವ ಅಧಿಕಾರಿಗಳನ್ನು ಅಮಾನತುಪಡಿಸಬೇಕು ಎಂದು ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ಪೊಲೀಸ್ ಮಹಾನಿರೀಕ್ಷಕರು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ತಹಶೀಲ್ದಾರ್ ಕೆ.ಎನ್.ಸುಜಾತಾ, ಕ್ಯಾಸಂಬಳ್ಳಿ ಉಪತಹಸೀಲ್ದಾರ್ ಕೆ.ಸಿ.ಸುರೇಶ್, ಪ್ರಭಾರ ಆರ್.ಆರ್.ಟಿ ಶಿರಸ್ತೇದಾರ್, ದ್ವೀತಿಯ ದರ್ಜೆ ಸಹಾಯಕ ಆರ್.ಪವನ್ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಮತ್ತು ಲೀನ್ ಬದಲಾಯಿಸುವಂತೆ ಜ.31ರಂದು ಶಿಫಾರಸು ಮಾಡಿ ಪತ್ರ ಬರೆದಿದ್ದಾರೆ.
ಆರೋಪಿಗಳು ಸುಮಾರು 229 ಫಲಾನುಭವಿಗಳಿಗೆ 523 ಎಕರೆ ಜಮೀನನ್ನು ಅಕ್ರಮವಾಗಿ ಭೂ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿ ವೆಂಕಟೇಶ್ಗೌಡ ಎಂಬುವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇದರ ಪ್ರಾಥಮಿಕ ತನಿಖೆ ನಡೆಸಿರುವ ಲೋಕಾಯುಕ್ತರು ಎಫ್ಐಆರ್ ದಾಖಲಿಸಿದ್ದರು.
2017ರ ಡಿ.12ರಂದು ಮತ್ತು 2018ರ ಜ.19ರಂದು ಕೆಜಿಎಫ್ ವಿಧಾನಸಭಾ ಕ್ಷೇತ್ರದ ಬಗರ್ ಹುಕ್ಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯನ್ನು ಅಂದಿನ ಶಾಸಕಿ ವೈ.ರಾಮಕ್ಕ ಅವರ ಅಧ್ಯಕ್ಷತೆಯಲ್ಲಿ, ಸದಸ್ಯ ಕಾರ್ಯದರ್ಶಿಗಳಾದ ಎಂ.ವಿಜಯಣ್ಣ ಸಮ್ಮುಖದಲ್ಲಿ ನಡೆದ ಸಭೆಗಳು ಭೂ ಮಂಜೂರಾತಿ ಸಂಬಂಧ ಪ್ರಾಥಮಿಕ ಸಭೆಗಳಾಗಿದ್ದು, ಕೇವಲ ಮೌಖಿಕ ಸಲಹೆ ಮತ್ತು ಸೂಚನೆಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಕಡತಗಳ ನೈಜತೆ ಪರಿಶೀಲನೆ ನಡೆಸದೆ ನಿಯಮಗಳನ್ನು ಉಲ್ಲಂಘಿಸಿ ಮಂಜೂರು ಮಾಡಿದ್ದಾರೆ.
ನಮೂನೆ-53ರ ಕಡತ, ನಡವಳಿ ಪುಸ್ತಕ, ಸಾಗುವಳಿ ಚೀಟಿ ವಿತರಣಾ ವಹಿಗಳನ್ನು ಹಾಗೂ ಫಲಾನುಭವಿಗಳ ದಾಖಲೆಗಳನ್ನು ತಹಸೀಲ್ದಾರ್ ಕೆ.ಎನ್.ಸುಜಾತಾ ಪ್ರಕರಣದ ಸುಗಮ ತನಿಖೆಗೆ ಅಡ್ಡಿ ಉಂಟು ಮಾಡುವ, ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಹಾಗೂ ಸಾಕ್ಷಿ ಪುರಾವೆಗಳನ್ನು ನಾಶಗೊಳಿಸುವ ಸಾಧ್ಯತೆಗಳಿರುವುದರಿಂದ ಕೂಡಲೇ ಅಮಾನತುಗೊಳಿಸಿ, ಕ್ರಮದ ಬಗ್ಗೆ ತಿಳಿಸಲು ಕೋರಿದ್ದಾರೆ.