ಹನೂರು : ತಾಲೂಕಿನ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಆಯೋಗದ ಅನುದಾನದಲ್ಲಿ 38.94 ಲಕ್ಷ ರೂ. ದುರುಪಯೋಗವಾಗಿದ್ದು, ಈ ಸಂಬಂಧ ಪಿಡಿಒ ಎನ್.ರಂಗರಾಜು ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯಿತಿ ಇಒ ಉಮೇಶ್ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ವರದಿ ಸಲ್ಲಿಸಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಆಯೋಗದ ಅನುದಾನದ ವೆಚ್ಚಕ್ಕೆ ಸಂಬಂಧಿಸಿದಂತೆ 2023ರ ನ.16ರಿಂದ 2025ರ ಮಾ.31ರವರೆಗೆ ಲಕ್ಷಾಂತರ ರೂ. ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಮೂರ‌್ನಾಲ್ಕು ತಿಂಗಳ ಹಿಂದೆ ಗ್ರಾಮಸ್ಥರು ತಾಲೂಕು ಪಂಚಾಯಿತಿ ಅಧಿಕಾರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಒ ಅವರ ಆದೇಶದ ಮೇರೆಗೆ ಮೇ 3ರಂದು ತಾಪಂ ಸಹಾಯಕ ಲೆಕ್ಕಾಧಿಕಾರಿ ಡಿ.ಎಸ್. ಶಶಿಕಲಾ ಹಾಗೂ ಸಹಾಯಕ ನಿರ್ದೇಶಕಿ ಎಚ್.ಬಿ. ರಾಧಾ ಅವರು ಗ್ರಾಪಂ ಕಚೇರಿಗೆ ಭೇಟಿ ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ ಲೆಕ್ಕಪತ್ರ ಹಾಗೂ ಕಡತಗಳನ್ನು ಪರಿಶೀಲಿಸಿದ್ದರು.
ಪರಿಶೀಲನಾ ವರದಿಯಲ್ಲಿ 2023 -24ನೇ ಸಾಲಿನಲ್ಲಿ 9,44,302 ರೂ, ಹಾಗೂ 2024 - 25ನೇ ಸಾಲಿನಲ್ಲಿ 29,50,426 ಸೇರಿದಂತೆ 38,94,728 ರೂ. ವೆಚ್ಚ ಭರಿಸಿರುವುದಕ್ಕೆ ಯಾವುದೇ ದಾಖಲೆ ಇಲ್ಲ. ಇದರಿಂದ ಆದೇಶ ಉಲ್ಲಂಘನೆಯಾಗಿದ್ದು, ಹಣ ದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ವರದಿ ನೀಡಿದ್ದರು. ಅನುದಾನ ದುರುಪಯೋಗವಾಗಿರುವ ಹಿನ್ನೆಲೆಯಲ್ಲಿ ಪಿಡಿಒ ಎನ್. ರಂಗರಾಜು ಇವರ ವಿರುದ್ಧ ಸೂಕ್ತ ಶಿಸ್ತು ಕ್ರಮಕೈಗೊಳ್ಳಬಹುದು ಎಂದು ಇಒ ಉಮೇಶ್ ಮೇ 13 ರಂದು ಸಿಇಒ ಅವರಿಗೆ ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
---------
ಫೋಟೋ
24 ಹನೂರು 3
ತಾಲೂಕು ಪಂಚಾಯಿತಿ ಇಒ ಉಮೇಶ್ ಅವರು ಹಣ ದುರುಪಯೋಗವಾಗಿರುವ ಸಂಬಂಧ ಜಿಪಂ ಸಿಇಒ ಅವರಿಗೆ ಸಲ್ಲಿಸಿರುವ ವರದಿಯ ಪ್ರತಿ.