

| ಪ್ರಶಾಂತ ರಿಪ್ಪನ್ಪೇಟೆ
ಧಾರವಾಡ ಜಿಲ್ಲೆಯ ಮಾರಡಗಿ ಗ್ರಾಮದ ವಿಶ್ವನಾಥ ಹೊಸಮಠ ಹಾಗೂ ಮಹಾದೇವಿ ಹೊಸಮಠ ಅವರ ಪುತ್ರಿಯಾದ ಕವಿತಾ ಓದಿದ್ದು ಪಿಯುಸಿಯಾದರೂ ಮನೆಯಲ್ಲಿದ್ದ ಸಂಸ್ಕಾರದ ವಾತಾವರಣ ಸಂಸ್ಕೃತಾಧ್ಯಯನಕ್ಕೆ ಪ್ರೇರಣೆ ನೀಡಿತು. ಲಿಂಗಾಂಗ ಸಾಮರಸ್ಯವನ್ನು ಸಾಧಿಸುವುದು ಆತ್ಮದರ್ಶನದ ಅತ್ಯುನ್ನತ ಮಾರ್ಗ. ಈ ಮಾರ್ಗವನ್ನು ಪರಿಪೂರ್ಣವಾಗಿ ಅಳವಡಿಸಿಕೊಳ್ಳಲು ಶ್ರೀರುದ್ರ ಸೇತುವೆಯಿದ್ದಂತೆ. ಇದನ್ನರಿತ ಕವಿತಾ ಶ್ರೀರುದ್ರವನ್ನು ಕಲಿಯುತ್ತಾರೆ. ಈ ಆಸಕ್ತಿಯ ಫಲವೇ ಶ್ರೀ ಸಿದ್ಧಾಂತ ಶಿಖಾಮಣಿ ಪಾರಾಯಣದಲ್ಲಿ ನಿಷ್ಣಾತೆಯಾಗಲು ಸಹಕಾರಿಯಾಯಿತು. ನಂತರ ರಾಜ್ಯ-ಹೊರರಾಜ್ಯಗಳ ನೂರಾರು ಮಹಿಳಾ ತಂಡಗಳಿಗೆ ಪಾರಾಯಣ ಕಲಿಸುವಲ್ಲಿ ಯಶಸ್ವಿಯಾದರು.
ಸ್ವತಃ ಶ್ರೀಚರಂತೇಶ್ವರ ಮಠದ ಪರಂಪರೆಯಲ್ಲಿ ಬೆಳೆದು ಬಂದಿದ್ದ ಕವಿತಾ ಅವರಿಗೆ 2010ರಲ್ಲಿ ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಬಿಡುಗಡೆ ಮಾಡಿದ ಶ್ರೀಸಿದ್ಧಾಂತ ಶಿಖಾಮಣಿ ಪಾರಾಯಣ ಗ್ರಂಥ ಹಾಲಿನಲ್ಲಿ ಜೇನು ಬೆರೆತಂತಾಯಿತು. ಬಂಕಾರಪುದ ಪರುಶುರಾಮ ನರೇಗಲ್ ಅವರು ಇದನ್ನು ರಾಗವಾಗಿ ಹೇಳುತ್ತಿದ್ದರು. ಕವಿತಾ ಹಿರೇಮಠ್ ಅವರಿಗಿದ್ದ ಆಸಕ್ತಿಯನ್ನು ಗಮನಿಸಿದ ಜಗದ್ಗುರುಗಳು ಅವರಿಂದ ಪಾರಾಯಣ ಕಲಿಯಲು ಆದೇಶಿಸಿದರು. ಬಹಳ ಶ್ರದ್ಧೆಯಿಂದ ಒಂದು ವರ್ಷದ ಪರ್ಯಂತರ ಸಿದ್ಧಾಂತ ಶಿಖಾಮಣಿ ಪಾರಾಯಣ ಕಲಿತರು. ತಾವಷ್ಟೇ ಕಲಿತು ಸುಮ್ಮನಾಗದ ಕವಿತಾ, ತಮ್ಮಂತೆ ಆಸಕ್ತಿ ಇದ್ದ ಇತರರಿಗೂ ಪಾರಾಯಣವನ್ನು ಕಲಿಸಲು ಆರಂಭಿಸಿದರು. ಇದರ ಪರಿಣಾಮವಾಗಿ ಇಂದು ನೂರಾರು ಮಹಿಳಾ ಬಳಗಗಳ ಸಾವಿರಾರು ಮಹಿಳೆಯರು ಪಾರಾಯಣ ಕಲಿತಿದ್ದಾರೆ. ಆ ಮೂಲಕ ಲಕ್ಷಾಂತರ ಜನರಿಗೆ ಸಿದ್ಧಾಂತ ಶಿಖಾಮಣಿಯನ್ನು ತಲುಪಿಸಿದ್ದಾರೆ.
ರೇಣುಕಾಗಸ್ಱ ಸಂವಾದ ಗ್ರಂಥ: ಶ್ರೀಜಗದ್ಗುರು ರೇಣುಕಾಚಾರ್ಯರು ಪಡ್ವಿಡಿ ಸೂತ್ರದ ಮೂಲಕ ಮಹಾಮುನಿ ಅಗಸ್ಱ ಮಹರ್ಷಿಯನ್ನು ನಿಮಿತ್ತ ಮಾಡಿಕೊಂಡು ಜಗತ್ತಿನ ಸಮಸ್ತ ಮನುಕುಲವನ್ನುದ್ದೇಶಿಸಿ ಉಪದೇಶಿಸಿದ ಶಿವಾದ್ವೈತ ಸಿದ್ಧಾಂತದ ಸಾರವಾಗಿರುವ ಶ್ರೀ ಸಿದ್ಧಾಂತ ಶಿಖಾಮಣಿಯು ರೇಣುಕಾಗಸ್ಱ ಸಂವಾದ ರೂಪದಲ್ಲಿದೆ. ಮೂಲ ಸಂಸ್ಕೃತ ಗ್ರಂಥವು ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಪರಿಶ್ರಮದ ಫಲವಾಗಿ ಜಗತ್ತಿನ ಒಟ್ಟು 19 ಭಾಷೆಗಳಿಗೆ ಅನುವಾದಗೊಂಡು ಪ್ರಧಾನಿ ನರೇಂದ್ರ ಮೋದಿಯವರಿಂದ ಬಿಡುಗಡೆಗೊಂಡಿವೆ.ಈ ಮಹಾಗ್ರಂಥವು 21 ಪರಿಚ್ಛೇದ, 101 ಸ್ಥಲಗಳಿಂದ ಕೂಡಿದ್ದು, 1400 ಶ್ಲೋಕಗಳನ್ನು ಒಳಗೊಂಡಿದೆ. 2020ರಲ್ಲಿ ಕಾಶೀ ಪೀಠದಲ್ಲಿ ಅಖಂಡ ಪಾರಾಯಣವನ್ನು ಮಾಡುವ ಮೂಲಕ ಹೊಸ ದಾಖಲೆಯನ್ನು ಬರೆದ ಕೀರ್ತಿ ಕವಿತಾ ಹಿರೇಮಠ ನೇತೃತ್ವದ ಮಾತೃ ಬಳಗಕ್ಕೆ ಸಲ್ಲುತ್ತದೆ.
ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರ: ಮಹಾರಾಷ್ಟ್ರದ ಖ್ಯಾತ ಉದ್ಯಮಿ ಬಾಬಾಸಾಹೇಬ ಕಲ್ಯಾಣಿಯವರ ಧರ್ಮಪತ್ನಿ ಸುನಿತಾ ಕಲ್ಯಾಣಿಯವರು ತಮ್ಮ ತಾಯಿಯವರ ಹೆಸರಿನಲ್ಲಿ ರಾಷ್ಟ್ರಮಟ್ಟದ ಪುರಸ್ಕಾರವೊಂದನ್ನು ಅತ್ಯುನ್ನತ ಸಾಧನೆ ಮಾಡಿದ ಮಹಿಳೆಗೆ ನೀಡಲು ಉದ್ದೇಶಿಸಿ ಕಾಶೀ ಪೀಠದಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಿದ್ದಾರೆ. 1 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುವ ‘ಶ್ರೀಮತಿ ಮಾಲತಿ ಮಹಾರುದ್ರಪ್ಪ ಖೇಣಿ ಮಾತೃಶಕ್ತಿ’ ರಾಷ್ಟ್ರೀಯ ಪುರಸ್ಕಾರದ ಪ್ರಥಮ ಗೌರವವು ಕವಿತಾ ಗುರುಸಿದ್ಧಯ್ಯ ಹಿರೇಮಠ ಅವರ ಪಾಲಿಗೆ ಬಂದಿದೆ. ಸಾಮಾನ್ಯ ಮಹಿಳೆಯೊಬ್ಬಳು ಅಸಾಮಾನ್ಯ ಸಾಧನೆಗೈದು ಮಾತೃಶಕ್ತಿ ಪ್ರದರ್ಶಿಸಿ, ಶ್ರೀಸಿದ್ಧಾಂತ ಶಿಖಾಮಣಿಯನ್ನು ಅಖಂಡ ಪಾರಾಯಣ ಮಾಡಿದ ಮೊದಲಿಗರಾದ ಕವಿತಾ ಹಿರೇಮಠ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವು ದಾಗಿ ಕಾಶೀ ಜಗದ್ಗುರುಗಳು ಘೋಷಿಸಿದ್ದಾರೆ. ಐತಿಹಾಸಿಕ, ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭವು ಜು.22ಕ್ಕೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆಯಲಿದೆ. ಕಾಶೀ ಪೀಠದ ಉಭಯ ಜಗದ್ಗುರುಗಳು ಸಾನ್ನಿಧ್ಯ ವಹಿಸಲಿದ್ದಾರೆ.