

ಬೆಂಗಳೂರು:
ತಿಂಗಳಲ್ಲಿ ಒಂದು ದಿನ ಸಚಿವರು ಪಕ್ಷದ ಕಚೇರಿಗೆ ಭೇಟಿ ನೀಡುವ ಕಾರ್ಯಕ್ರಮದಡಿ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು ಬುಧವಾರ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಅಹವಾಲು ಸ್ವೀಕರಿದರು.
ಈ ಸಂದರ್ಭದಲ್ಲಿ ಹೆಬ್ಬಾಳದ ಕ್ರೆಸೆಂಟ್ ಇಂಗ್ಲಿಷ್ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ತಾಹೀರ್ ಆಮೀರ್ ಸೆ.19 ರಿಂದ 24 ವರೆಗೆ ಇಂಡೋನೇಷ್ಯಾದ ಜಕಾತರ್ದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಗೆ ಆಯ್ಕೆಯಾಗಿದ್ದು ಆರ್ಥಿಕ ಸಂಕಷ್ಟದಿಂದ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಸಚಿವರು ತಕ್ಷಣ ತಮ್ಮ ವೈಯಕ್ತಿಕ ವೆಚ್ಚದಲ್ಲಿ ಸ್ಪರ್ಧೆಗೆ ಹೋಗಿ ಬರುವ ವಿಮಾನ ವೆಚ್ಚ 65 ಸಾವಿರ ರೂ. ಟಿಕೆಟ್ ಮಾಡಿಸಿ ಸ್ಥಳದಲ್ಲೇ ನೀಡಿ, ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಆರೋಗ್ಯ, ಶಿಕ್ಷಣ ನೆರವು ಕೋರಿ ಬಂದವರಿಗೆ ವೈಯಕ್ತಿಕ ವೆಚ್ಚದಲ್ಲಿ ಆರ್ಥಿಕ ನೆರವು ನೀಡಿದರು.
ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಇಲಾಖೆ ಗಳಿಗೆ ಸಂಬಂಧಿಸಿದ ಅರ್ಜಿ ಸ್ವೀಕಾರ ಮಾಡಿ ಸಂಬಂಧ ಪಟ್ಟ ಇಲಾಖೆಗಳಿಗೆ ಕಳುಹಿಸಿ ಸೂಕ್ತ ದಾಖಲೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.
ರಾಜ್ಯದ ವಿವಿಧ ಜಿಲ್ಲೆ ಹಾಗೂ ಬೆಂಗಳೂರು ನಗರದ ನೂರಾರು ಸಾರ್ವಜನಿಕರು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಅಹವಾಲು ಸಲ್ಲಿಸಿದರು. ಜಿಲ್ಲಾಧ್ಯಕ್ಷ ಶೇಖರ್ ಮತ್ತಿತರರ ಮುಖಂಡರು ಉಪಸ್ಥಿತರಿದ್ದರು.
-
ತಿಂಗಳಲ್ಲೊಮ್ಮೆ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಅಹವಾಲು ಸ್ವೀಕರಿಸಬೇಕು ಎಂಬ ಪಕ್ಷದ ಆದೇಶದಂತೆ ಇಂದು ಭೇಟಿ ನೀಡಿದ್ದೇನೆ. ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಜಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಉಸ್ತುವಾರಿ ಜಿಲ್ಲೆ ವಿಜಯನಗರ ಸೇರಿದಂತೆ ರಾಜ್ಯ ಪ್ರವಾಸ ಸಂದರ್ಭದಲ್ಲೂ ಜಿಲ್ಲಾ ಅಥವಾ ತಾಲ್ಲೂಕಿನಲ್ಲಿ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುತ್ತಿದ್ದೇನೆ.
- ಜಮೀರ್ ಅಹಮದ್ ಖಾನ್, ಸಚಿವರು