ಮಹಾರಾಷ್ಟ್ರದಲ್ಲಿ 35 ಅಡಿ ಎತ್ತರದ ಶಿವಾಜಿ ಪ್ರತಿಮೆ ಕುಸಿತ; ಕಾರಣ ಏನು ಗೊತ್ತಾ?

Untitled-design-2024-08-27T134322.349-1
Published on

ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕೋಟೆಯಲ್ಲಿದ್ದ ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದ ವಿಚಾರಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರನ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಗುತ್ತಿಗೆದಾರ ಜೈದೀಪ್​​ ಅಪ್ಟೆ ಹಾಗೂ ಸ್ಟ್ರಕ್ಚರಲ್ ಕನ್ಸಲ್ಟೆಂಟ್ ಚೇತನ್ ಪಾಟೀಲ್ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ.

ಒಳಸಂಚು, ವಂಚನೆ, ಸಾರ್ವಜನಿಕ ಸುರಕ್ಷತೆಗೆ ಅಪಾಯವಿದೆ ಎಂಬ ಆರೋಪಗಳ ಜತೆಗೆ ಪ್ರತಿಮೆಯ ನಿರ್ಮಾಣ ಕಳಪೆ ಗುಣಮಟ್ಟದ್ದಾಗಿದ್ದು ಅದರಲ್ಲಿ ಬಳಸಲಾದ ನಟ್​​ ಬೋಲ್ಟ್‌ಗಳು ತುಕ್ಕು ಹಿಡಿದಿರುವುದು ಕಂಡುಬಂದಿದೆ ಎಂದು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ನೀಡಿದ ದೂರಿನ ಮೇರೆಗೆ ಈ ಎಫ್‌ಐಆರ್​​ ದಾಖಲಿಸಲಾಗಿದೆ.

ಸ್ಥಳೀಯ ನಾಗರಿಕರು ಮತ್ತು ಪ್ರವಾಸಿಗರು ಈಗಾಗಲೇ ಈ ಪ್ರತಿಮೆಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ನಿತ್ಯ ತಪಾಸಣೆ ವೇಳೆ ವಿಗ್ರಹದ ನಟ್‌ ಬೋಲ್ಟ್‌ಗಳು ಹಾಳಾಗಿರುವ ಬಗ್ಗೆ ಪಿಡಬ್ಲ್ಯುಡಿ ಸಹಾಯಕ ವಿಭಾಗದ ಎಂಜಿನಿಯರ್ ಎಚ್ಚರಿಕೆ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನೀಡಿದ ಎಚ್ಚರಿಕೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಪಿಡಬ್ಲ್ಯುಡಿ ಹೇಳಿದೆ.

ಪ್ರತಿಮೆ ತಯಾರಿಸಲು ಬಳಸಲಾದ ಉಕ್ಕು ತುಕ್ಕು ಹಿಡಿಯಲಾರಂಭಿಸಿತ್ತು. ಪ್ರತಿಮೆ ತುಕ್ಕು ಹಿಡಿದಿರುವ ಬಗ್ಗೆ ಪಿಡಬ್ಲ್ಯುಡಿ ಈಗಾಗಲೇ ನೌಕಾಪಡೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದೆ ಎಂದು ಸಿಂಧುದುರ್ಗ ಉಸ್ತುವಾರಿ ಸಚಿವ ರವೀಂದ್ರ ಚವ್ಹಾಣ ಹೇಳಿದ್ದಾರೆ.

ಪ್ರತಿಮೆ ನಿರ್ಮಾಣದಲ್ಲಿ ಯಾವುದೇ ಪರಿಣಿತಿಯನ್ನು ಹೊಂದಿರದ ಭಾರತೀಯ ನೌಕಾಪಡೆಗೆ ಪ್ರತಿಮೆಯನ್ನು ಸ್ಥಾಪಿಸುವ ಕಾರ್ಯವನ್ನು ವಹಿಸಿಕೊಡಲಾಗಿತ್ತು. ಸೆಪ್ಟೆಂಬರ್ 8ರಂದು ಪ್ರತಿಮೆ ನಿರ್ಮಾಣದ ಕೆಲಸ ಪ್ರಾರಂಭಿಸಿತು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಡಿಸೆಂಬರ್​ 4ರಂದು ಈ ಸ್ಮಾರಕವನ್ನು ಉದ್ಘಾಟಿಸಿದರು. ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ಪ್ರತಿಮೆ ಕುಸಿದಿದೆ.

ಗಂಟೆಗೆ 45 ಕಿ.ಮೀ ವೇಗದಲ್ಲಿ ಗಾಳಿ ಬೀಸಿದ್ದು ಪ್ರತಿಮೆ ಕುಸಿದಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಘಟನೆಯನ್ನು ದೃಢಪಡಿಸಿದ್ದಾರೆ. ನೌಕಾಪಡೆ ವಿನ್ಯಾಸಗೊಳಿಸಿ ನಿರ್ಮಿಸಿದ ಪ್ರತಿಮೆ ಬಿದ್ದಿರುವುದು ಅತ್ಯಂತ ದುರದೃಷ್ಟಕರ. ನಾವು ಪ್ರತಿಮೆಯನ್ನು ಹೆಚ್ಚು ಗಟ್ಟಿಮುಟ್ಟಾಗಿ ಪುನರ್ನಿರ್ಮಾಣ ಮಾಡುತ್ತೇವೆ. ನೌಕಾಪಡೆಯ ಅಧಿಕಾರಿಗಳು ಪ್ರತಿಮೆ ಪುನರ್ನಿರ್ಮಾಣದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net