

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸುವಾಗ ಯಾವ ಕಾರಣಗಳಿಗೆ ಮತ್ತು ಆಧಾರಗಳ ಮೇಲೆ ದಸ್ತಗಿರಿ ಮಾಡುತ್ತಿರುವ ಬಗ್ಗೆ ಕಡ್ಡಾಯವಾಗಿ ಲಿಖಿತ ರೂಪದಲ್ಲಿ ಮಾಹಿತಿ ನೀಡಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಅಲೋಕ್ ಮೋಹನ್ ಆದೇಶಿಸಿದ್ದಾರೆ.
ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ,2023ರ ಕಲಂ 47(1)ರಲ್ಲಿ ಮತ್ತು ಭಾರತ ಸಂವಿಧಾನದ ಅನುಚ್ಛೇದ 22 (1)ರಲ್ಲಿ ಉಲ್ಲೇಖಿಸಿರುವಂತೆ ಆರೋಪಿಯನ್ನು ಬಂಧಿಸುವಾಗ ಕಡ್ಡಾಯವಾಗಿ ಮಾರ್ಗಸೂಚಿಯನ್ನು ಪಾಲಿಸುವಂತೆ ಸುತ್ತೋಲೆ ಹೊರಡಿಸಿದ್ದಾರೆ.
ಆರೋಪಿಯನ್ನು ಬಂಧಿಸುವ ಪೊಲೀಸ್ ಅಧಿಕಾರಿ, ಕಡ್ಡಾಯವಾಗಿ ದಸ್ತಗಿರಿ ಮೆಮೊ ನೀಡಬೇಖು. ಜತೆಗೆ ಪ್ರತ್ಯೇಕವಾಗಿ ಬಂಧಿಸಲು ಕಾರಣಗಳು ಮತ್ತು ಆಧಾರಗಳನ್ನು ಲಿಖಿತವಾಗಿ ಆರೋಪಿತನ ಭಾಷೆಯಲ್ಲಿ ಕೊಡುವ ಜೊತೆಗೆ ಆತನಿಂದ ಸಹಿ ಪಡೆದು ಜಾರಿ ಮಾಡಬೇಕು. ಅದರಲ್ಲಿನ ವಿಷಯಗಳನ್ನು ಆತನಿಗೆ ಅರಿವಾಗುವಂತೆ ತಿಳಿಸಿ ಆನಂತರ ಬಂಧಿಸಬೇಕು. ದಸ್ತಗಿರಿಯ ಕಾರಣಗಳನ್ನು ರಿಮ್ಯಾಂಡ್ ಅರ್ಜಿಯಲ್ಲಿ ನಮೂದಿಸಬೇಕೆಂದು ಸೂಚಿಸಿದ್ದಾರೆ.
ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಒಂದು ವೇಳೆ ವಿಳಂಬ ಮಾಡಿದರೆ ಆರೋಪಿಗೆ ಜಾಮೀನು ದೊರೆಯಲ್ಲಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಕರ್ತವ್ಯ ಲೋಪದಡಿ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ಇದಲ್ಲದೆ, ದಸ್ತಗಿರಿ ಮಾಹಿತಿ ಮತ್ತು ಕಾರಣಗಳು ಬೇರೆ ಬೇರೆಯಾಗಿದ್ದು, ಈ ಎರಡನ್ನು ಪ್ರತ್ಯೇಕವಾಗಿ ಸಲ್ಲಿಸಬೇಕು. ಈ ವಿಷಯವನ್ನು ಮತ್ತು ದಾಖಲಾತಿಗಳನ್ನು ನ್ಯಾಯಾಲಯಕ್ಕೆ ರಿಮ್ಯಾಂಡ್ ಅರ್ಜಿಯೊಂದಿಗೆ ಸಲ್ಲಿಸಿ ಸೂಕ್ತ ಹಿಂಬರಹವನ್ನು ಪಡೆಯುವುದು ಕಡ್ಡಾಯವಾಗಿದೆ ಎಂದು ಡಿಜಿ-ಐಜಿಪಿ ಡಾ. ಅಲೋಕ್ ಮೋಹ್ ಎಚ್ಚರಿಕೆ ನೀಡಿದ್ದಾರೆ.