ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಲಭಿಸಲಿದೆ ನೈಜ ಸ್ವಾತಂತ್ರ್ಯ; ಮಾಜಿ ಸಚಿವ ಅಶ್ವತ್ಥನಾರಾಯಣ ಕುಟುಕು

IMG_20240409_123204
Published on

ಬೆಂಗಳೂರು: ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಟೀಮ್ ನಲ್ಲಿ ಕೆಲಸ ಮಾಡಲು ಡಾ.ಸಿ.ಎನ್.ಮಂಜುನಾಥ್ ಮುಂದೆ ಬಂದಿದ್ದಾರೆ. ನುರಿತ ವೈದ್ಯರು, ಮಾನವೀಯ ಸಂವೇದನೆಯುಳ್ಳ, ಒಳ್ಳೆಯ ವ್ಯಕ್ತಿಯಾಗಿದ್ದಾರೆ. ಲೋಕಸಭೆ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಖಂಡಿತವಾಗಿ ಜನ ಬೆಂಬಲ ಸಿಗಲಿದೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ನೈಜ ಸ್ವಾತಂತ್ರ್ಯ ಲಭಿಸಲಿದೆ ಎಂದು ಬಿಜೆಪಿ ಮಾಜಿ ಸಚಿವ ಕ್ಷೇತ್ರದ ಉಸ್ತುವಾರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕುಟುಕಿದರು.

ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಕ್ಷೇತ್ರದಲ್ಲಿ ಉಸಿರುಗಟ್ಟುವ ಪರಿಸ್ಥಿತಿಯಿದೆ. ರಾಜಕಾರಣವೆಂದರೆ ಸ್ವಾರ್ಥ, ಪ್ರತಿಷ್ಠೆ, ಹಿಡಿತ ಸಾಧಿಸುವುದು, ದ್ವೇಷವೆಂದು ತಿಳಿದುಕೊಂಡಿದ್ದು, ಈ ಸಮಸ್ಯೆಗಳಿಂದ ಕ್ಷೇತ್ರ ಮುಕ್ತವಾಗುವ ಕಾಲ ಬಂದಿದೆ. ಜನ ಸ್ವಯಂಪ್ರೇರಿತರಾಗಿ ಡಾ.ಮಂಜುನಾಥ್ ಪರ ಬೆಂಬಲಕ್ಕೆ ಸುನಾಮಿ ರೀತಿಯಲ್ಲಿ ಧಾವಿಸುತ್ತಿದ್ದಾರೆ. ನಾಮಪತ್ರ ಸಲ್ಲಿಸಿದವರ ಪೈಕಿ 13 ಜನ ಹಿಂಪಡೆದಿರುವುದು ನಿದರ್ಶನ ಎಂದರು.

ರಾಜ್ಯದಲ್ಲಿ ಅತ್ಯಂತ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಕನಕಪುರ ಸೇರಿದೆ. ಈ ಕ್ಷೇತ್ರವನ್ನು ಡಿಕೆ ಸೋದರರು ಯಾವ ಪರಿಸ್ಥಿತಿಯಲ್ಲಿಟ್ಟಿದ್ದಾರೆ ಎಂದು ಗೊತ್ತಾಗುತ್ತದೆ. ರಾಜಕೀಯ ಎಂದರೆ ಬರೀ ಅಧಿಕಾರವಲ್ಲ. ಜನಪರ ಅಭಿವೃದ್ಧಿ ಕಾರ್ಯ, ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಾಗಿದೆ. ಪಕ್ಷದ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಈ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ. ಇಂತಹವರನ್ನು ಆಯ್ಕೆ ಮಾಡಿದರೆ ದೇಶಕ್ಕೂ ಒಳ್ಳೆಯದಾಗಲಿದೆ ಎಂಬ ವಿಶ್ವಾಸ ಜನರಲ್ಲಿ ಮೂಡಿದೆ ಎಂದು ಡಾ.ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು.

ದ್ವೇಷ ರಾಜಕಾರಣ ಮಾಡಲ್ಲ

ಬಿಜೆಪಿ ಎಂದಿಗೂ ದ್ವೇಷ ರಾಜಕಾರಣ ಮಾಡುವುದಿಲ್ಲ. ಜನರನ್ನು ಪ್ರೀತಿ, ವಿಶ್ವಾಸದಿಂದ ಕಾಣ ಬಯಸುತ್ತದೆ. ಈ ನಿಟ್ಟಿನಲ್ಲಿ ಮೋದಿಯವರ ಸಬ್ ಕೆ ಸಾಥ್ ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ ಎಂಬ ಸಂಕಲ್ಪ ಮಾಡಿದ್ದಲ್ಲದೆ ದೇಶದ ಪ್ರತಿಯೊಬ್ಬ ಪ್ರಜೆಯ ಏಳಿಗೆಗಾಗಿ ರಜೆಯಿಲ್ಲದೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು‌.

ಮೋದಿಯವರ ನಾಯಕತ್ವ, ಕಾಳಜಿ, ಪ್ರತಿಭಾವಂತರು, ಪರಿಣತರಿಗೆ ಪ್ರೇರಣೆ. ಪ್ರತಿಯೊಬ್ಬರಿಗೆ ನೆರವಾಗುವ ಯೋಜನೆಗಳನ್ನು ಡಾ.ಸಿ.ಎನ್.ಮಂಜುನಾಥ್ ಗಮನಿಸಿ, ತಮ್ಮ ಸೇವೆಯನ್ನು ದೇಶಕ್ಕರ ವಿಸ್ತರಿಸುವ ಅಭಿಲಾಷೆಯೊಂದಿಗೆ ಸ್ಪರ್ಧಿಸಿದ್ದಾರೆ. ಅವರಿಂದ ಆರೋಗ್ಯದ ಆರೈಕೆ, ಚಿಕಿತ್ಸೆ ಪಡೆದವರಷ್ಟೇ ಹೇಳಿದರೆ ಸಾಕು ಎದುರಾಳಿ ತರಗೆಲೆಯಂತೆ ಹಾರಿ ಹೋಗುತ್ತಾರೆ‌ ಎಂದರು.

ಅಭ್ಯರ್ಥಿ ಡಾ.ಸಿ.ಎನ್.ಮಂಜನಾಥ್ ಮಾತನಾಡಿ ಮೋದಿಯವರ ಹತ್ತು ವರ್ಷಗಳ ಆಡಳಿತದಲ್ಲಿ ಆರೋಗ್ಯ‌, ವೈದಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಸುಧಾರಣೆಗಳಾಗಿವೆ. ಜೀವನಶೈಲಿಗೆ ಸಂಬಂಧಿಸಿದ ರೋಗಗಳಿಂದ ಶೇಕಡ 65ರಷ್ಟು ಜನರು ದೇಶದಲ್ಲಿ ಬಳಲುತ್ತಿದ್ದಾರೆ. ವಾರ್ಷಿಕ 30 ಲಕ್ಷ ಜನರು ಹೃದ್ರೋಗ ಕಾಯಿಲೆಗೆ ಬಲಿಯಾಗುತ್ತಾರೆ. 14 ಕೋಟಿ ಜನರು ಸಕ್ಕರೆ ಕಾಯಿಲೆ ಪೀಡಿತರು. ಅಧಿಕ ರಕ್ತದ ಒತ್ತಡ, ಕ್ಯಾನ್ಸರ್, ಕಿಡ್ನಿ ಸಂಬಂಧಿತ ರೋಗಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ರೋಗಗಳು ಬಡವ, ಬಲ್ಲಿದನೆಂಬ ವ್ಯತ್ಯಾಸವಿಲ್ಲದೆ ಬಾಧಿಸುತ್ತಿವೆ ಎಂದರು.

ಬಡವರ ಕೈಗೆಟುಕುವ ದರದಲ್ಲಿ ಔಷಧ, ಮಾತ್ರೆ ಸಿಗಬೇಕೆಂಬ ಉದ್ದೇಶದಿಂದ ಜನೌಷಧಿ ಕೇಂದ್ರ ತೆರೆದರು. ಒಂದು ಸಾವಿರ ರೂ ವೆಚ್ಚದ ಔಷಧ, ಮಾತ್ರೆಗಳು 100 ರಿಂದ 120 ರೂ.ಗಳಿಗೆ ಸಿಗುತ್ತವೆ. ಹಾಗೆಯೇ ಲಕ್ಷದಷ್ಟಿದ್ದ ಸ್ಟೆಂಟ್ ಬೆಲೆ 30 ಸಾವಿರ ರೂ.ಗಳಿಗೆ ಇಳಿಸಿದ್ದಾರೆ. ಉನ್ನತ ದರ್ಜೆ ಆರೋಗ್ಯ ಸವಲತ್ತು ಎಲ್ಲ ನಗರಗಳಿಗೆ ವಿಸ್ತರಿಸುವ ಭಾಗವಾಗಿ ಏಮ್ಸ್ ಸಂಸ್ಥೆಗಳನ್ನು ಐದರಿಂದ 23ಕ್ಕೆ ಏರಿಸಿದ್ದಾರೆ ಎಂದು ಡಾ.ಸಿ.ಎನ್.ಮಂಜುನಾಥ್ ವಿವರಿಸಿದರು.

ಮಾಜಿ ಸಚಿವ, ಶಾಸಕ ಮುನಿರತ್ನ, ಪಕ್ಷದ ವಕ್ತಾರ ಅಶೋಕ್ ಗೌಡ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net