

ನರೇಗಲ್ಲ: ನಾವು ಈಗಾಗಲೆ ಸೈನ್ಯದಿಂದ ನಿವೃತ್ತರಾಗಿ ಬಂದಿದ್ದೇವೆ. ಈಗ ನಡೆದಿರುವ ಯುದ್ಧದಲ್ಲಿ ನಮ್ಮ ಸಹೋದರ, ಸಹೋದರಿಯರು ವೀರಾವೇಶದಿಂದ ಹೋರಾಡಿ ಭಾರತಕ್ಕೆ ಜಯ ತಂದಿದ್ದಾರೆ. ಒಂದು ವೇಳೆ ಯುದ್ಧ ಮುಂದುವರಿದು, ಅಲ್ಲಿ ನಮ್ಮ ಅವಶ್ಯಕತೆಯೇನಾದರೂ ಇದ್ದರೆ ನಾವು ಸಂತೋಷದಿಂದ ಯುದ್ಧಕ್ಕೆ ತೆರಳಲು ಸಿದ್ಧ ಎಂದು ನರೇಗಲ್ಲದ ನಿವೃತ್ತ ಸೈನಿಕರೆಲ್ಲರೂ ಒಕ್ಕೊರಲಿನಿಂದ ಶಪಥಗೈದರು.
ಪಟ್ಟಣದ ಗಾಂಧಿ ಭವನದಲ್ಲಿನ ನಿವೃತ್ತ ಯೋಧರ ಕಚೇರಿಯಲ್ಲಿ ಕರೆಯಲಾದ ಮಾಸಿಕ ಸಭೆಯಲ್ಲಿ ಯೋಧರಿಗೆ ಅಭಿನಂದನೆ ಸಲ್ಲಿಸಿ, ಪರಸ್ಪರ ಸಿಹಿ ಹಂಚಿ ಸಂತೋಷ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಶಿವಪುತ್ರಪ್ಪ ಸಂಗನಾಳ ಮಾತನಾಡಿ, ನಾವು ಎಂದಿಗೂ ಯೋಧರೆ. ನಮ್ಮ ಸೇವೆ ಎಂದಿಗೂ ಭಾರತಾಂಬೆಗೆ ಮೀಸಲು. ಸರ್ಕಾರ ಮತ್ತೆ ನಮ್ಮ ಸೇವೆಯನ್ನು ಪಡೆದುಕೊಳ್ಳಲು ಬಯಸಿದರೆ ನಾವು ಎಂದಿಗೂ ಸಿದ್ಧ ಎಂದರು.
ಪಾಕಿಸ್ತಾನದ ಮಾತು ಎಂದಿಗೂ ನಂಬಿಕೆಗೆ ಅರ್ಹವಲ್ಲ. ಅದು ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬ ಪಾಲಿಸಿಯನ್ನು ಎಂದಿನಿಂದಲೂ ಜಾರಿಗೊಳಿಸುತ್ತ ಬಂದಿದೆ. ಈಗಲೂ ಪಾಕಿಸ್ತಾನ ಅದೇ ಬುದ್ಧಿಯನ್ನು ತೋರಿಸಿದರೆ ಸರ್ಕಾರ ಹಿಂದೇಟು ಹಾಕದೆ ಪಾಕಿಸ್ತಾನದ ಮೇಲೆ ನಿರ್ಣಾಯಕ ಯುದ್ಧವನ್ನೇ ಮಾಡಬೇಕೆಂದು ಅನೇಕ ನಿವೃತ್ತ ಸೈನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಆಪರೇಷನ್ ಸಿಂಧೂರ ಅತ್ಯಂತ ಸಮರ್ಪಕ ಕಾರ್ಯ ಎಂದು ಅವರು ಶ್ಲಾಘಿಸಿದರು.
ಪ್ರಭುದೇವ ಮುಕ್ಕನಗೌಡರ, ಉಮೇಶ ಕರಮುಡಿ, ಗುರುಶಾಂತಗೌಡ ಮಲ್ಲನಗೌಡರ, ಮಂದಾಲಪ್ಪ ಸಂಗನಾಳ, ಶಿವಪ್ಪ ಶಿವಾಪುರ, ಬಸವರಾಜ ಕಡೆತೋಟದ, ಜಿ. ಎಸ್. ಮಲ್ಲನಗೌಡರ, ರೇವಣಸಿದ್ದಪ್ಪ ನರಗುಂದ, ಈರಪ್ಪ ದೊಡ್ಡಣ್ಣವರ, ಶಿವಾನಂದ, ಎಂ. ಬಿ. ಕಡೆತೋಟದ, ಬಸವೇಶ್ವರ ಚಿಕ್ಕೊಪ್ಪದ ಇತರರಿದ್ದರು.