ವಿಜೃಂಭಣೆಯ ದಸರಾಕ್ಕೆ ಸಜ್ಜಾಗಿ: ಶಾಸಕ ಚೆನ್ನಿ

mla
ಶಿವಮೊಗ್ಗ ದಸರಾ ಪೂರ್ವಭಾವಿ ಸಭೆಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿದರು. ಕೆ.ಮಾಯಣ್ಣ ಗೌಡ ಇದ್ದರು.
Published on

ಶಿವಮೊಗ್ಗ: ಈ ಬಾರಿ ಮಹಾನಗರ ಪಾಲಿಕೆಯಿಂದ ಅತ್ಯಂತ ವಿಜೃಂಭಣೆಯ ದಸರಾ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಗುರುವಾರ ಪಾಲಿಕೆ ಅಧಿಕಾರಿಗಳೊಂದಿಗೆ ದಸರಾ ಪೂರ್ವಭಾವಿ ಸಭೆ ನಡೆಸಿದ ಅವರು, ಅತ್ಯಂತ ವೈಭವಯುತ ದಸರಾ ಅಚರಣೆ ನಡೆಸಬೇಕು. ಯಾವುದೆ ಕಾರ್ಯಕ್ರಮಕ್ಕೆ ಕೊರತೆ ಉಂಟಾಗಬಾರದು. ಅಧಿಕಾರಿಗಳ 14 ಸಮಿತಿ ರಚನೆಯಾಗಿದೆ. ಎಲ್ಲರೂ ಸಮಿತಿ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ತಿಳಿಸಿದರು.

ಅದ್ದೂರಿಯಾಗಿ ಅನೇಕ ವರ್ಷ ವಿಜಯದಶಮಿಯನ್ನು ನಡೆಸಿರುವ ಅನುಭವ ಅಧಿಕಾರಿಗಳಿಗಿದೆ. ಸಾರ್ವಜನಿಕರಿಂದಲೂ ಸಲಹೆಗಳನ್ನು ಪಡೆಯೋಣ, ಇನ್ನೂ ಮೂರ‌್ನಾಲ್ಕು ಸಭೆ ನಡೆಸಿದ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ. ಸ್ವಾಗತ ಸಮಿತಿ ಅಂಬಾರಿ ಮೆರವಣಿಗೆ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದರು.

ಮುಖ್ಯ ಲೆಕ್ಕಾಧಿಕಾರಿ ಢಕಣಾನಾಯ್ಕ ಮಾತನಾಡಿ, ದಸರಾ ಆಚರಣೆಗೆ ಅಗತ್ಯವಿರುವ ಅನುದಾನವನ್ನು ಒದಗಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಉತ್ತರ ನಿರೀಕ್ಷೆ ಮಾಡಲಾಗಿದೆ. ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ಆಯಕ್ತ ಕೆ.ಮಾಯಣ್ಣ ಗೌಡ, ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಿರುವ ವಿವರಗಳನ್ನು ಶಾಸಕರಿಗೆ ಒದಗಿಸಿ ಎಂದು ಢಕಣಾ ನಾಯ್ಕ ಅವರಿಗೆ ಸೂಚಿಸಿದರು. ಎಲ್ಲ ಸಮಿತಿಯಿಂದ ಅ.15ರೊಳಗೆ ದಸರಾಗೆ ಸಂಬಂಧಿಸಿದ ಬಿಲ್‌ಗಳನ್ನು ನೀಡಬೇಕು ಎಂದು ಹೇಳಿದರು.

ಸ್ವಾಗತ ಸಮಿತಿ, ಉತ್ಸವ ಸಮಿತಿ, ಕಲಾ ಮತ್ತು ಕಾರ್ಮಿಕ ದಸರಾ, ಪರಿಸರ ದಸರಾ, ರೈತ, ಆಹಾರ, ಯೋಗ, ಮಕ್ಕಳ ದಸರಾ, ಗಮಕ ದಸರಾ, ಪತ್ರಿಕಾ ದಸರಾ, ಪೌರ ಕಾರ್ಮಿಕರ ದಸರಾ, ಚಲನಚಿತ್ರ, ರಂಗ ದಸರಾ, ಸಾಂಸ್ಕೃತಿಕ ಮತ್ತು ಮಹಿಳಾ ದಸರಾ ಸೇರಿ ಎಲ್ಲ ಸಮಿತಿಗಳ ರಚನೆ ಆಗಿದೆ. ದಸರಾ ಆಚರಣೆಗೆ ಫ್ರೀಡಂ ಪಾರ್ಕ್‌ನ್ನು 10 ದಿನಗಳ ಅವಧಿಗೆ ಕಾಯ್ದಿರಿಸಬೇಕು. ಆಹಾರ ದಸರಾ ಸಮಿತಿ ಉಸ್ತುವಾರಿ ನೋಡಿಕೊಳ್ಳುವವರು ಹೊರಗಿನವರು ಆಹಾರಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net