

ಶಿವಮೊಗ್ಗ: ಸಂವಿಧಾನದ ಓದು ಪ್ರಜಾಪ್ರಭುತ್ವದ ಅರಿವನ್ನು ವಿಸ್ತರಿಸುತ್ತದೆ ಮತ್ತು ಅದನ್ನು ಓದಿ ಅರ್ಥ ಮಾಡಿಕೊಳ್ಳುವುದರಿಂದ ಸಹಿಷ್ಣುತೆ ಹೆಚ್ಚುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.
ಶಿವಮೊಗ್ಗ ಸಾಗರ ರಸ್ತೆಯ ಮಲ್ಲಿಗೇನಹಳ್ಳಿಯ ಸನ್ನಿಧಿ ಪಾಲನಾ ನವೀಕರಣ ಕೇಂದ್ರದಲ್ಲಿ ಶನಿವಾರ ಸಂವಿಧಾನ ಓದು ಅಭಿಯಾನ ಕರ್ನಾಟಕ, ಶಿವಮೊಗ್ಗದ ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ಜಿಲ್ಲಾಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವನ್ನು ತಿಳಿಯದೇ ನಮ್ಮ ಸಂವಿಧಾನವನ್ನು ತಿಳಿಯಲು ಸಾಧ್ಯವೇ ಇಲ್ಲ. ಸಂವಿಧಾನ ತಿಳಿಯದೇ ಅದರ ಮೂಲ ತತ್ವವನ್ನು ಅರಿಯುವುದು ಅಸಾಧ್ಯ. ಅಧಿಕಾರ, ನ್ಯಾಯಾಂಗ, ಕಾರ್ಯಾಂಗದ ವ್ಯಾಪ್ತಿಗಳು ಅದರ ಸ್ವೇಚ್ಛಾಚಾರ. ಅವುಗಳನ್ನೆಲ್ಲಾ ಸಂವಿಧಾನದ ಮೂಲಕವೇ ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಸಂಸ್ಕೃತಿ, ಉಪಸಂಸ್ಕೃತಿ, ಧರ್ಮ, ಜಾತಿ, ಆರ್ಥಿಕ, ಸಾಮಾಜಿಕ ಸಂಬಂಧಗಳು ಇವೆಲ್ಲವೂ ಸಂವಿಧಾನದ ಓದುವಿನಿಂದ ಮನನವಾಗುತ್ತವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಸಂವಿಧಾನ ಓದು ಕಾರ್ಯಕ್ರಮದಲ್ಲಿ ರಾಜಕಾರಣಿಗಳು ಭಾಗವಹಿಸುವುದೇ ಒಂದು ಪುಣ್ಯದ ಕೆಲಸ. ಇದು ನಮ್ಮ ಕರ್ತವ್ಯವೂ ಹೌದು. ನೆಲ, ಜಲ, ಭಾಷೆ, ಧರ್ಮ ಎಲ್ಲ ಸೇರಿಯೇ ಭಾರತವಾಗಿದೆ. ಅದರ ರಕ್ಷಣೆಗೆ ಸಂವಿಧಾನವೇ ನಿಂತುಕೊಂಡಿದೆ. ಸಂವಿಧಾನವನ್ನು ನಾವು ರಕ್ಷಿಸಬೇಕಾಗ ಸಂದರ್ಭ ಬಂದಿರುವುದು ವಿಷಾದನೀಯ ಎಂದರು.
ಕಾರ್ಯಕ್ರಮ ಆಯೋಜಕ, ವಕೀಲ ಕೆ.ಪಿ.ಶ್ರೀಪಾಲ್ ಪ್ರಾಸ್ತಾವಿಕ ಮಾತನಾಡಿದರು. ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಸನ್ನಿಧಿ ಪಾಲನಾ ನವೀಕರಣ ಕೇಂದ್ರದ ನಿರ್ದೇಶಕ ಫಾದರ್ ಕ್ಲಿಫರ್ಡ್ ರೋಷನ್ ಪಿಂಟೋ, ಹಿರಿಯ ವಕೀಲ ಜಿ.ಎಸ್.ನಾಗರಾಜ್, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಸಿಇಒ ಎನ್.ಹೇಮಂತಕುಮಾರ್, ಸಂಪನ್ಮೂಲ ವ್ಯಕ್ತಿ ಬಿ.ರಾಜಶೇಖರ್ ಮೂರ್ತಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಪತ್ರಕರ್ತ ಆರ್.ಎಸ್.ಹಾಲಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.