ಓದುವ, ಬರೆಯುವ ಹವ್ಯಾಸ ಅಗತ್ಯ

sor ssp
ಸೊರಬ ಆನವಟ್ಟಿಯಲ್ಲಿ ಹಮ್ಮಿಕೊಂಡಿದ್ದ ಶರಣ ಸಾಹಿತ್ಯದ ಪ್ರಸ್ತುತತೆ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧವೃಷಭೇಂದ್ರ ಸ್ವಾಮೀಜಿ, ಬಾರಂದೂರು ಪ್ರಕಾಶ್, ಪ್ರಕಾಶ್ ಮಡ್ಳೂರ್, ಕುಮಾರ್, ಗಜಾನನ, ಇಬ್ರಾಹಿಂ ಇತರರಿದ್ದರು.
Published on

ಸೊರಬ: ಬಸವಾದಿ ಶರಣರ ಸಾಮಾಜಿಕ ಕಾಳಜಿ ಮತ್ತು ಸಮಾನತೆಯ ತತ್ವದ ಮೇಲೆ ನಮ್ಮ ಬದುಕಿನ ಭವಿಷ್ಯ ರೂಪಿಸಲು ಸಾಧ್ಯವಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾರಂದೂರು ಪ್ರಕಾಶ್ ಹೇಳಿದರು.

ಆನವಟ್ಟಿಯಲ್ಲಿ ಸೊರಬ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಶರಣ ಸಾಹಿತ್ಯದ ಪ್ರಸ್ತುತತೆ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣ ರಚಿಸಿದ ಅನುಭವ ಮಂಟಪ ಸಾಮಾಜಿಕ ಬದಲಾವಣೆಗೆ ಹಿಡಿದ ಕೈಗನ್ನಡಿ ಎಂದರು.

ಪ್ರಸ್ತುತ ಆಡಳಿತ ವ್ಯವಸ್ಥೆಯು ಅನುಭವ ಮಂಟಪದಂತೆಯೇ ಇದೆ. ಶರಣರ ಒಂದೊಂದು ವಚನಗಳು ಪ್ರತಿಯೊಬ್ಬರಿಗೂ ಶಾಂತಿ, ನೆಮ್ಮದಿ ನೀಡಬಲ್ಲವು. ನಾವು ಮತ್ತು ನಮ್ಮ ಮಕ್ಕಳು ಪುಸ್ತಕಗಳನ್ನು ಓದುವ ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಕೌಟುಂಬಿಕ ಜೀವನದಲ್ಲಿ ಸಾಮರಸ್ಯ, ಸಮನ್ವಯ ಕಾಣಬಹುದು ಎಂದು ತಿಳಿಸಿದರು.

ಜಾತಿ, ಮತ, ಧರ್ಮಗಳಲ್ಲೇ ಸಿಕ್ಕಿ ಒದ್ದಾಡುತ್ತಿರುವ ನಾವು ಬಸವಣ್ಣನ ಅಂದಿನ ಕಾಲದ ಸಾಮಾಜಿಕ ಬದಲಾವಣೆಯನ್ನು ಅನುಸರಿಸಬೇಕು. ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು. ಎಲ್ಲರನ್ನೂ ಸಮಚಿತ್ತದಿಂದ ನೋಡಿದರೆ ಬಸವಣ್ಣನ ನೆಲದಲ್ಲಿ ಹುಟ್ಟಿದ್ದು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಜಡೆ ಸಂಸ್ಥಾನ ಮಠದ ಶ್ರೀ ಕುಮಾರ ಕೆಂಪಿನ ಜಗದ್ಗುರು ಶ್ರೀ ಸಿದ್ಧವೃಷಭೇಂದ್ರ ಸ್ವಾಮೀಜಿ, ಶರಣರ ಆಶಯಗಳನ್ನು ನಾವು ಈಡೇರಿಸುವುದಾದರೆ ನಮ್ಮ ಬದುಕು ಬಂಗಾರವಾಗುತ್ತದೆ. ನಮ್ಮನ್ನು ಅನುಸರಿಸುವ ನಮ್ಮ ಮಕ್ಕಳಿಗೆ ನಾವು ಆದರ್ಶವಾಗಿರಬೇಕು. ನಾವು ಟಿವಿ, ಮೊಬೈಲ್‌ನಲ್ಲಿ ಮುಳುಗಿದರೆ ಮಕ್ಕಳು ಅದೇ ಪ್ರವೃತ್ತಿ ಅನುಸರಿಸುತ್ತಾರೆ. ಜತೆಗೆ ನಮ್ಮ ಹಿಡಿತಕ್ಕೆ ಸಿಗುವುದಿಲ್ಲ. ಇದರಿಂದ ಆರೋಗ್ಯವಂತ ಸಮಾಜವನ್ನು ಕಾಣುವುದು ಅಸಾಧ್ಯ ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೃತ್ಯುಂಜಯ ಗೌಡ, ಉಪಾಧ್ಯಕ್ಷ ಬಸವನಗೌಡ, ಕೆ.ಸಿ ಶಿವಕುಮಾರ್ ದಂಪತಿ, ಜಾನಪದ ಗಾಯಕ ಶಿವರುದ್ರಪ್ಪ ಜೋಗಿ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಮಡ್ಳೂರ್, ಕಾರ್ಯದರ್ಶಿ ಕುಮಾರ್, ಗಜಾನನ, ಇಬ್ರಾಹಿಂ ದೊಡ್ಮನಿ, ರಾಜು, ಅಶೋಕ್, ನಂದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net