ಡಿಸಿಎಂ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ; ಸಿಎಂ ಮಧ್ಯಪ್ರವೇಶಕ್ಕೆ ಆಗ್ರಹ

DK Shivakumar
Published on

ಬೆಂಗಳೂರು: ಸರ್ಕಾರದ ಅಕಾಡೆಮಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆಯನ್ನು ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ್ದಲ್ಲದೇ ಸಮರ್ಥಿಸಿಕೊಳ್ಳುವ ಬರದಲ್ಲಿ ಅಕಾಡೆಮಿಗೆ ನೇಮಕಗೊಂಡವರು ರಾಜಕೀಯ ವ್ಯಕ್ತಿಗಳು ಎಂದು ಹೇಳಿಕೆ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತೀಕ್ಷ್ಣ ಟೀಕೆ ವ್ಯಕ್ತವಾಗಿದೆ.

ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿ ಹಲವು ಶಾಸಕರು ಡಿಸಿಎಂ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಾಗೃತ ನಾಗರಿಕರು ಸಂಘಟನೆಯು ಪತ್ರಿಕಾ ಹೇಳಿಕೆ ನೀಡಿದ್ದು, ಅಕಾಡೆಮಿ, ಪ್ರಾಧಿಕಾರಗಳ ಸ್ವಾಯತ್ತತೆಗೆ ಭಂಗ ತರುವ ಇತ್ತೀಚಿನ ಕೆಲವು ಪ್ರಸಂಗಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಖಂಡಿಸಿಸುವುದಾಗಿ ತಿಳಿಸಿದೆ.

ಇತ್ತೀಚೆಗೆ ರಾಜ್ಯದಲ್ಲಿ ನೂತನವಾಗಿ ನೇಮಕಗೊಂಡ ನಿಗಮ ಮಂಡಳಿಗಳ ಅಧ್ಯಕ್ಷರುಗಳ ಸಭೆಯನ್ನು ಕಾಂಗ್ರೆಸ್ ಅಧ್ಯಕ್ಷರು ಭಾರತ್ ಜೋಡೋ ಭವನದಲ್ಲಿ ಕರೆದಿದ್ದರು ಮತ್ತು ಅಲ್ಲಿ ನೂತನ ಅಕಾಡೆಮಿಗಳ ಕೆಲವು ಅಧ್ಯಕ್ಷರೂ ಪಾಲ್ಗೊಂಡಿದ್ದರು ಎನ್ನುವ ಸಂಗತಿ ತೀವ್ರ ಚರ್ಚೆಗೆ ಒಳಗಾಗಿದೆ.

ಅಕಾಡೆಮಿ, ಪ್ರಾಧಿಕಾರಗಳಿಗೆ ನೇಮಕವನ್ನು ಮಾಡುವುದು ಸರ್ಕಾರವೇ ಆಗಿದ್ದರೂ ಅವುಗಳ ಸರ್ಕಾರದ ಸಹಕಾರದೊಂದಿಗೆ ಸ್ವಾಯತ್ತವಾಗಿ ಕಾರ್ಯ ನಿರ್ವಹಣೆ ಮಾಡುವುದು ಅವರ ಅಧಿಕಾರ ಮತ್ತು ಸಾಂಸ್ಕೃತಿಕ ಅಗತ್ಯ ಕೂಡಾ ಆಗಿದೆ. ಇದುವರೆಗೂ ಹಾಗೆಯೇ ನಡೆದುಕೊಂಡು ಬಂದಿದೆ ಕೂಡಾ. ಅದರ ಕುರಿತೇ ಗಂಭೀರ ಚರ್ಚೆಗಳು ನಡೆಯುತ್ತಿರುವಾಗ ಡಿ.ಕೆ.ಶಿವಕುಮಾರ್, ಸಾಹಿತಿಗಳನ್ನು ಕರೆಸಿದ್ದೇ ನಾನು, ತಪ್ಪೇನು ಎಂಬುದಾಗಿ ಸಮರ್ಥನೆ ಮಾಡಿಕೊಂಡಿದ್ದಲ್ಲದೇ ಅದೇ ಭರದಲ್ಲಿ ಅಕಾಡೆಮಿಗಳು ಸ್ವಾಯತ್ತ ಸಂಸ್ಥೆಗಳಲ್ಲ ಎಂದೂ ಸಾರಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರ ಬಾಯಲ್ಲಿ ಈ ಮಾತು ಬಂದಿದೆ ಎಂದರೆ ಅದು ಅವರ ಪಕ್ಷದ ನಿಲುವೂ ಕೂಡಾ ಎಂದು ಭಾವಿಸಬೇಕಾಗುತ್ತದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.

ಈ ನಿಲುವು ಸರ್ಕಾರದ್ದಿರಲಿ, ಕಾಂಗ್ರೆಸ್ ಪಕ್ಷದ್ದಿರಲಿ, ಸಾಂಸ್ಕೃತಿಕ ಕ್ಷೇತ್ರದ ಸ್ವಾಯತ್ತ ಸ್ವಾತಂತ್ರಕ್ಕೆ ಭಂಗ ತರುವ ನಿಲುವಾಗಿರುವುದರಿಂದ ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಸಾಂಸ್ಕೃತಿಕ ಸ್ವಾಯತ್ತ ಸ್ವರೂಪವನ್ನು ಗೌರವಿಸುವ ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾಹಿತಿ, ಕಲಾವಿದರು, ಸಂಸ್ಕೃತಿ ಚಿಂತಕರನ್ನು ಯಾವುದೇ ಪಕ್ಷದ ಅಡಿಯಾಳುಗಳಂತೆ ಕಾಣುವುದು ಯಾವುದೇ ಕಾರಣಕ್ಕೂ ಸರಿಯಾದ ನಡವಳಿಕೆಯಲ್ಲ. ಇಂಥಹ ಸಾಂಸ್ಕೃತಿಕ ಜೀತಗಾರಿಕೆಗೆ ಸಾಂಸ್ಕೃತಿಕ ಕ್ಷೇತ್ರದ ಸ್ವಾಯತ್ತತೆಯ ಘನತೆ ಗೌರವಗಳ ಬಗ್ಗೆ ಅರಿವಿರುವ ಯಾವ ವ್ಯಕ್ತಿಯೂ ಕೆಲಸ ಮಾಡಲು ಒಪ್ಪುವುದಿಲ್ಲ. ಇದು ವ್ಯಕ್ತಿಯ ಸ್ವಾಭಿಮಾನದ ಪ್ರಶ್ನೆಯಷ್ಟೇ ಮುಖ್ಯವಾಗಿ, ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಘನತೆ ಗೌರವಗಳನ್ನು ಒಳಗೊಂಡಿದೆ ಎಂದು ಅಭಿಪ್ರಾಯಪಡಲಾಗಿದೆ.

ಅಕಾಡೆಮಿ, ಪ್ರಾಧಿಕಾರ, ಸಾಹಿತ್ಯ ಪರಿಷತ್ತುಗಳ ಸ್ವಾಯತ್ತತೆಯನ್ನು ನಿರಾಕರಿಸುವ ಹಕ್ಕು ಸರ್ಕಾರಕ್ಕಿಲ್ಲ, ಅವುಗಳ ಕಾರ್ಯನಿರ್ವಹಣೆಗೆ ಅಗತ್ಯವಾದ ಧನ ಸಹಾಯ ಮಾಡುವುದು ಸರ್ಕಾರದ ಕರ್ತವ್ಯ. ಇದಕ್ಕಾಗಿ ಅವರ ಹಂಗಿಗೆ ಒಳಗಾಗಬೇಕಿಲ್ಲ. ಆದ್ದರಿಂದ ಮುಖ್ಯಮಂತ್ರಿಯವರು ಪಕ್ಷದ ಆಡಳಿತಕ್ಕೆ ಒಳಪಡದ, ನೇರವಾಗಿ ಸರ್ಕಾರದ ಆಡಳಿತಕ್ಕೆ ಸಂಬಂಧಿಸಿದ ಈ ಸಾಂಸ್ಕೃತಿಕ ಕ್ಷೇತ್ರಗಳ ವಿವಾದದವನ್ನು ಕೊನೆಗೊಳಿಸಲು ಮಧ್ಯಪ್ರವೇಶ ಮಾಡಬೇಕು. ಸ್ವಾಯತ್ತ ಸಂಸ್ಥೆಗಳ ಘನತೆ ಗೌರವಕ್ಕೆ ಕುಂದುಂಟಾಗದಂತೆ ನಿಯುಕ್ತಗೊಂಡ ಸದಸ್ಯರು ಕಾರ್ಯನಿರ್ವಹಿಸುವುದು ತಮ್ಮ ಆದ್ಯ ಕರ್ತವ್ಯ ಎಂದು ನಿಯುಕ್ತರಾದ ಎಲ್ಲರೂ ಎಚ್ಚರವಹಿಸಬೇಕೆಂದೂ ಹೇಳಬಯಸುತ್ತೇವೆ ಎಂದು ಸಾಹಿತಿಗಳಾದ ಪ್ರೊ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಪ್ರೊ.ಎಸ್. ಜಿ.ಸಿದ್ದರಾಮಯ್ಯ, ಡಾ.ವಿಜಯಾ, ವಿಮಲಾ, ಡಾ.ಬಂಜಗೆರೆ ಜಯಪ್ರಕಾಶ್, ಜಾಣಗೆರೆ ವೆಂಕಟರಾಮಯ್ಯ ಸೇರಿ ಹತ್ತು ಹಲವು ಸಾಹಿತಿ, ಲೇಖಕರು ಬಹಿರಂಗ ಪತ್ರ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net