

ನವದೆಹಲಿ: ಡಿಜಿಟಲ್ ಹೆಲ್ತ್ ಮಿಷನ್ ಅಡಿಯಲ್ಲಿ ಆರಂಭಿಸಲಾಗಿರುವ ವಿಶಿಷ್ಟ ಆರೋಗ್ಯ ಖಾತೆಗೆ ‘ಆರೋಗ್ಯ ಭಾರತ ಹೆಲ್ತ್ ಅಕೌಂಟ್’ (ಎಬಿಎಚ್ಎ) ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ತೀರ್ವನಿಸಿದೆ. ಈ ವಿಚಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಸಲದ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಮಿಷನ್ (ಎಬಿಡಿಎಂ) ಅಧೀನದ ಎಬಿಎಚ್ಎ ಉಪಕ್ರಮದಲ್ಲಿ ಭಾಗಿಯಾಗುವಂತೆ ದೇಶವಾಸಿಗಳನ್ನು ಉತ್ತೇಜಿಸುವ ಉದ್ದೇಶ ಈ ನಿರ್ಧಾರದ ಹಿಂದೆ ಇದೆ. ಪ್ರತಿಯೊಬ್ಬ ಭಾರತೀಯನೂ ಡಿಜಿಟಲ್ ಹೆಲ್ತ್ ರೆಕಾರ್ಡ್ ಖಾತೆ ರಚಿಸಬೇಕು ಮತ್ತು ಅದನ್ನು ನಿರ್ವಹಿಸಬೇಕು. ಹೀಗಾಗಿ ‘ಎಬಿಎಚ್ಎ’ ಎಂದು ಮರುನಾಮಕರಣ ಮಾಡಿ ಅದನ್ನು ಸಾಮಾನ್ಯ ಜನರಿಗೆ ಹತ್ತಿರುವಾಗುವಂತೆ ಮಾಡುವುದು ಸರ್ಕಾರದ ಉದ್ದೇಶ.
15 ಕೋಟಿ ಹೆಲ್ತ್ ಐಡಿ: ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು 2020ರ ಆಗಸ್ಟ್ 15ರಂದು ಘೋಷಣೆ ಮಾಡಿದರು. ಕಳೆದ ವರ್ಷ ಸೆಪ್ಟೆಂಬರ್ 27ರಂದು ಇದನ್ನು ಜಾರಿಗೊಳಿಸಲಾಗಿದೆ. ಜನವರಿ 6ರ ತನಕ 15 ಕೋಟಿ ಹೆಲ್ತ್ ಐಡಿ ರಚನೆಯಾಗಿದೆ. 15,000ಕ್ಕೂ ಹೆಚ್ಚು ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಸಂಸ್ಥೆಗಳು ಈ ವ್ಯವಸ್ಥೆಯ ಒಳಗೆ ಬಂದಿವೆ. 7,400 ಡಾಕ್ಟರ್ಸ್ ಸೇರ್ಪಡೆ ಆಗಿದ್ದು, 2 ಲಕ್ಷಕ್ಕೂ ಹೆಚ್ಚು ಆರೋಗ್ಯ ದಾಖಲೆ ಆಪ್ಗಳು ಇದುವರೆಗೆ ಡೌನ್ಲೋಡ್ ಆಗಿವೆ.