ಕೇಂದ್ರ ಸಚಿವರ ಟ್ವಿಟರ್​ ಖಾತೆಯೇ ಬ್ಲಾಕ್; ಕಾಯ್ದೆ ಪಾಲಿಸಿ ಎಂದಿದ್ದವರಿಗೆ ಕಾನೂನು ಹೆಸರಲ್ಲೇ ಕಾಲೆಳೆಯಿತಾ ಟ್ವಿಟರ್​?

Untitled-1
Published on

ನವದೆಹಲಿ: ಭಾರತ ಸರ್ಕಾರ ಹಾಗೂ ಟ್ವಿಟರ್ ಸಂಸ್ಥೆ ನಡುವಿನ ಸಂಘರ್ಷ ಮುಂದುವರಿದಿದ್ದು, ಅದು ಇಂದು ಮತ್ತೊಂದು ಹಂತಕ್ಕೆ ಹೋಗಿರುವ ಲಕ್ಷಣಗಳು ಗೋಚರಿಸಿವೆ. ಏಕೆಂದರೆ ಕಮ್ಯುನಿಕೇಷನ್ಸ್​, ಎಲೆಕ್ಟ್ರಾನಿಕ್ಸ್​ ಆ್ಯಂಡ್ ಇನ್​ಫಾರ್ಮೇಷನ್​ ಟೆಕ್ನಾಲಜಿ ಸಚಿವ ರವಿಶಂಕರ್ ಪ್ರಸಾದ್ ಅವರ ಖಾತೆಯನ್ನೇ ಇಂದು ಟ್ವಿಟರ್ ಬ್ಲಾಕ್ ಮಾಡಿದೆ. ಈ ಬಗ್ಗೆ ಸಚಿವರೇ ಹೇಳಿಕೊಂಡಿದ್ದು, ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ನಡುವಿನ ಸಂಘರ್ಷ ಸಂಗತಿ ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ.

ಗೆಳೆಯರೇ, ಇಂದು ತುಂಬ ವಿಚಿತ್ರವಾದದ್ದೊಂದು ಸಂಭವಿಸಿತು. ಟ್ವಿಟರ್ ಸಂಸ್ಥೆ ಇಂದು ನನ್ನ ಖಾತೆ ನಿರ್ವಹಿಸುವ ಅವಕಾಶವನ್ನು ಸುಮಾರು 1 ಗಂಟೆ ಕಾಲ ತಡೆ ಹಿಡಿದಿತ್ತು. ಡಿಜಿಟಲ್​ ಮಿಲೆನಿಯಂ ಕಾಪಿರೈಟ್​ ಆ್ಯಕ್ಟ್ ಆಫ್ ಯುಎಸ್​ಎಯನ್ನು ಉಲ್ಲಂಘಿಸಿದ್ದಕ್ಕೆ ಹೀಗೆ ಮಾಡಲಾಗಿದೆ ಎಂದು ಅದು ಸಮಜಾಯಿಷಿ ನೀಡಿದೆ ಎಂದು ಅವರು ಖಾತೆ ಅನ್​ಬ್ಲಾಕ್​ ಆದ ಬಳಿಕ ಹೇಳಿಕೊಂಡಿದ್ದಾರೆ.

ಟ್ವಿಟರ್​ನವರ ಈ ವರ್ತನೆ ನೋಡಿದರೆ ಅವರು ಹೇಳಿಕೊಂಡ ರೀತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತಿಲ್ಲ. ಅವರಿಗೆ ಅವರದೇ ಆದ ಒಂದು ಅಜೆಂಡಾ ಇದೆ. ಅದಕ್ಕೆ ಪೂರಕವಾಗಿ ನಡೆದುಕೊಳ್ಳದಿದ್ದರೆ ಅವರು ನಿರ್ದಾಕ್ಷಿಣ್ಯವಾಗಿ ನಿಮ್ಮನ್ನು ಅವರ ವೇದಿಕೆಯಿಂದ ತೆಗೆದುಬಿಡುತ್ತಾರೆ ಎಂದು ಟ್ವಿಟರ್​ ನಡೆ ಬಗ್ಗೆ ರವಿಶಂಕರ್ ಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಐಟಿ ಕಾಯ್ದೆಯನ್ನು ಹೊಸದಾಗಿ ರೂಪಿಸಿರುವ ಕೇಂದ್ರ ಸರ್ಕಾರ ಎಲ್ಲ ಸೋಷಿಯಲ್ ಮೀಡಿಯಾ ಸಂಸ್ಥೆಯವರು ಭಾರತದ ಈ ಹೊಸ ಕಾಯ್ದೆಯನ್ನು ಪಾಲಿಸಬೇಕು ಎಂದು ಸೂಚಿಸಿದೆ. ಆದರೆ ಇದನ್ನು ಪಾಲಿಸಲು ಟ್ವಿಟರ್ ಹಿಂದೇಟು ಹಾಕುತ್ತಲೇ ಇದ್ದು ಸರ್ಕಾರ ಹಾಗೂ ಟ್ವಿಟರ್ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಇದೇ ಹಿನ್ನೆಲೆಯಲ್ಲಿ ಟ್ವಿಟರ್ ರವಿಶಂಕರ್ ಪ್ರಸಾದ್ ಅವರ ಖಾತೆ ಬ್ಲಾಕ್ ಮಾಡಿ ಕಾಲೆಳೆದಿದ್ದರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಮತ್ತೊಂದೆಡೆ ಕಾನೂನುಪಾಲನೆ ಸಂಬಂಧ ಕೇಂದ್ರ ಸಚಿವರು ತಮ್ಮ ನಿಲುವನ್ನು ಖಚಿತಪಡಿಸಿದ್ದಾರೆ. ಯಾವುದೇ ವೇದಿಕೆ ಏನೇ ಮಾಡಲಿ, ಅವರು ಹೊಸ ಐಟಿ ನಿಯಮಗಳಿಗೆ ಬದ್ಧರಾಗಿಯೇ ಇರಬೇಕು, ಆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬುದಾಗಿ ಸಚಿವರು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net