ಕಷ್ಟ, ಕಾರ್ಪಣ್ಯ ನಿವಾರಿಸುವ ರವಿ ರಾಮೇಶ್ವರ ದೈವ

04 HDK 01 (1)
ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದ ಹಿನ್ನೀರಿನ ತೆರಣಿಮುಂಟಿ ಮುಂಟಿ ಗ್ರಾಮದಲ್ಲಿರುವ ರವಿ ರಾಮೇಶ್ವರ ದೇವಸ್ಥಾನ.
Published on

ಎಚ್.ಡಿ.ಕೋಟೆ: ಉತ್ತರ ಭಾರತದಲ್ಲಿ ರವಿ ರಾಮೇಶ್ವರ ದೇವಸ್ಥಾನ ಪ್ರಸಿದ್ಧಿಯಾಗಿರುವಂತೆ ತಾಲೂಕಿನ ಕಬಿನಿ ಹಿನ್ನೀರಿನಲ್ಲಿರುವ ಪುರಾತನ ರವಿ ರಾಮೇಶ್ವರ ದೇವಾಲಯ ಜಿಲ್ಲೆಯ ಮನೆ ಮಾತಾಗಿದೆ.

ದೇವಾಲಯ ಪಟ್ಟಣದಿಂದ ಸುಮಾರು 25 ಕಿಮೀ ದೂರದಲ್ಲಿದ್ದು, ಕಬಿನಿ ಜಲಾಶಯದ ಹಿನ್ನೀರಿನ ಕಿತ್ತೂರು ಈಗಿನ ತೆರಣಿಮುಂಟಿ ಮುಂಟಿ ಗ್ರಾಮದಲ್ಲಿ ಕಾಣಸಿಗುತ್ತದೆ. ಭಕ್ತರ ಆರಾಧ್ಯ ದೈವವಾಗಿರುವ ರವಿ ರಾಮೇಶ್ವರ ಸ್ವಾಮಿ ಭಕ್ತರ ಮೊರೆಯನ್ನು ಆಲಿಸಿದ ಬಳಿಕ ಅವರ ಕಷ್ಟ-ಕಾರ್ಪಣ್ಯವನ್ನು ಬಗೆಹರಿಸುವ ಮೂಲಕ ಶಕ್ತಿ ದೇವರಾಗಿ ನೆಲೆ ನಿಂತಿದ್ದಾನೆ. ರಾಮೇಶ್ವರ ದೇವಸ್ಥಾನಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಶ್ರಾವಣ ಮಾಸದಲ್ಲಿನ ಹುಣ್ಣಿಮೆ ದಿನದಂದು ಸ್ವಾಮಿಗೆ ರುದ್ರಾಭಿಷೇಕದೊಂದಿಗೆ ಸತ್ಯನಾರಾಯಣ ಪೂಜೆ ನೆರವೇರಲಿದೆ.
ವಿಶೇಷ ಪೂಜಾ ದಿನದಂದು ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಜಿಲ್ಲೆ ಹಾಗೂ ಹೊರ ಜಿಲ್ಲೆಯಿಂದ ಭಕ್ತರು ಆಗಮಿಸುತ್ತಾರೆ. ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿದ ಬಳಿಕ ಗರ್ಭಗುಡಿ ಮುಂಭಾಗದಲ್ಲಿರುವ ನಂದಿ ಕಿವಿಯಲ್ಲಿ ಕಷ್ಟಗಳನ್ನು ಹೇಳಿಕೊಂಡರೆ ಎಲ್ಲವೂ ಬಗೆಹರಿಯುತ್ತದೆ ಎಂಬ ನಂಬಿಕೆ ಭಕ್ತರದ್ದು.

ದೇವಸ್ಥಾನ ಹಿನ್ನೆಲೆ: ಈ ಗ್ರಾಮದ ಹಿಂದಿನ ಹೆಸರು ಕಿತ್ತೂರು. 2 ಸಾವಿರ ವರ್ಷಗಳ ಹಿಂದೆ ಪೊನ್ನಾಟ ದೇಶದ ರಾಜಧಾನಿ ಕೀರ್ತಿಪುರ ಇದಾಗಿತ್ತು ಎಂಬುದು ಇತಿಹಾಸದಿಂದ ತಿಳಿಯುತ್ತದೆ. ತ್ರೇತಾಯುಗದಲ್ಲಿ ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ಆಕೆಯನ್ನು ಹುಡುಕುತ್ತ ಬಂದ ಶ್ರೀರಾಮ ಈ ಜಾಗದಲ್ಲಿ ಶಿವನನ್ನು ಕುರಿತು ಧ್ಯಾನ ಮಾಡಿದ್ದ. ಆಗ ಪ್ರತ್ಯಕ್ಷನಾದ ಶಿವ ಪಶ್ಚಿಮದಿಂದ ಪೂರ್ವಕ್ಕೆ ಹರಿಯುವ ಕಪಿಲಾ ನದಿ, ಇಲ್ಲಿ ಉತ್ತರಕ್ಕೆ ಹರಿದು ಮತ್ತೆ ಪೂರ್ವದತ್ತ ಹರಿಯುತ್ತದೆ. ಅಲ್ಲಿ ಶಿವಲಿಂಗವನ್ನು ಮರಳಿನಲ್ಲಿ ಮಾಡಿ ಪೂಜಿಸುವಂತೆ ಹೇಳಿದನಂತೆ. ಅದರಂತೆ ಶ್ರೀರಾಮ ಇದೇ ಜಾಗದಲ್ಲಿ ಶಿವಲಿಂಗವನ್ನು ಮರಳಿನಲ್ಲಿ ಮಾಡಿ ಪೂಜಿಸಿದ ಎಂಬುದು ಇತಿಹಾಸ. ಹಾಗಾಗಿ ಇಲ್ಲಿನ ಲಿಂಗದ ಮೇಲೆ ಬಾಣದ ಗುರುತು ಮೂಡಿದೆ ಎನ್ನುತ್ತಾರೆ ಹಿರಿಯರು.

ಕಪಿಲಾ ನದಿಗೆ 1972 ರಲ್ಲಿ ಅಣೆಕಟ್ಟು ಕಟ್ಟಿದಾಗ ಮುಳುಗಡೆ ಭೀತಿಯಲ್ಲಿ ಕಿತ್ತೂರಿನ ಜನತೆ ದೂರದ ಊರುಗಳಿಗೆ ಹೋಗಿ ನೆಲೆಸಿದ್ದರು. ಆದರೆ ದೇವಸ್ಥಾನ ಮುಳುಗಡೆ ಆಗಲಿಲ್ಲ. ಹಾಗಾಗಿ ಗ್ರಾಮವನ್ನು ಬಿಟ್ಟು ತೆರಳಿದ ಅನೇಕರು 30 ವರ್ಷಗಳ ನಂತರ ಮತ್ತೆ ಗ್ರಾಮಕ್ಕೆ ಬಂದು ರವಿ ರಾಮೇಶ್ವರ ದೇವಸ್ಥಾನ ಸಮಿತಿ ರಚಿಸಿ ದೇವಸ್ಥಾನವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ಹೊರ ದೇಶಗಳಿಂದ ಪ್ರವಾಸಿಗರು ಭೇಟಿ ನೀಡಿ ದೇವರ ಮಹಿಮೆ ತಿಳಿಯುತ್ತಾರೆ.

1910 ರಿಂದ 1965ರವರೆಗೆ ದಿ.ವೆಂಕಟಸುಬ್ಬಯ್ಯ ಅವರು ಇಲ್ಲಿನ ಪ್ರಧಾನ ಅರ್ಚಕರಾಗಿದ್ದರು. ನಂತರ ಕಬಿನಿ ಅಣೆಕಟ್ಟು ಕಟ್ಟಲು ಪ್ರಾರಂಭ ಮಾಡಿದಾಗ ದೇವಸ್ಥಾನದ ಆಸ್ತಿ ನೀರಿನಲ್ಲಿ ಮುಳುಗಡೆ ಆಯಿತು. ನಂತರ ಗ್ರಾಮ ತೊರೆದ ಕಾರಣ 1965 ರಿಂದ 2002 ರ ವರೆಗೆ ದೇವಸ್ಥಾನ ಪಾಳು ಬಿದ್ದಿತ್ತು. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿದ್ದ ಕೆಲವು ಅಮೂಲ್ಯ ವಿಗ್ರಹಗಳನ್ನು ಅರಸು ಮನೆತನದವರು ಒಯ್ದರೆನ್ನಲಾಗಿದೆ. ಆದರೆ ಗರ್ಭಗುಡಿ ಹಾಗೂ ಉಪನಂದಿಯನ್ನು ಸರ್ಪ ಕಾವಲು ಕಾಯುತ್ತಿದ್ದರಿಂದ ಅದನ್ನು ತೆಗೆಯಲಾಗದೆ ಪಾಳು ಬಿಡಲಾಯಿತು. ಪಾಳುಬಿದ್ದು ದೇವಸ್ಥಾನದ ಸುತ್ತ ಕಾಡು ಬೆಳೆದು ಹುಲಿ, ಚಿರತೆ, ಹಂದಿ, ಹಾವು, ಚೇಳುಗಳ ವಾಸಸ್ಥಾನವಾಗಿ ಮಾರ್ಪಾಡಾಯಿತು.

ಇದನ್ನು ಗಮನಿಸಿದ ಕಿತ್ತೂರು ಬಳಗದವರು ಸರ್ಕಾರದ ನೆರವಿಲ್ಲದೆ ಸ್ವಂತ ಖರ್ಚಿನಲ್ಲಿ ದೇವಸ್ಥಾನವನ್ನು 2002ರಲ್ಲಿ ಜೀರ್ಣೋದ್ಧಾರ ಮಾಡಿದರು. ಅಲ್ಲಿಂದ ಈವರೆಗೆ ನಾನು ಪ್ರಧಾನ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಕೆ.ವಿ.ಭಾಸ್ಕರ್ ವಿಜಯವಾಣಿಗೆ ಮಾಹಿತಿ ನೀಡಿದರು.

ಇತಿಹಾಸ: ಗ್ರೀಸ್‌ನ ಕೆಲವು ದಾಖಲೆಗಳಲ್ಲಿ ಜಿಲ್ಲೆಯ ಬಗ್ಗೆ ಪ್ರಸ್ತಾಪವಿದೆ. ಹೆಗ್ಗಡದೇವನಕೋಟೆಯ ಕಿತ್ತೂರಿನ ಕೀರ್ತಿ ಕ್ರಿ.ಶ. ಹದಿಮೂರರ ಸಂದರ್ಭದಲ್ಲೇ ಅಲ್ಲಿ ಹರಡಿತ್ತು. ವೀರರಾಣಿ ಚನ್ನಮ್ಮನ ಕಿತ್ತೂರು ಇದಲ್ಲವಾದರೂ ಕ್ರಿ.ಶ ನಾಲ್ಕನೇ ಶತಮಾನದಲ್ಲಿ ಕಿತ್ತೂರು ವೀರರ ನಾಡಾಗಿತ್ತು. ಕಿತ್ತೂರು ಈ ಹಿಂದೆ ಕೀರ್ತಿ ಪುರವಾಗಿತ್ತು. ಕೀರ್ತಿಪುರವನ್ನೆ ಕೇಂದ್ರವನ್ನಾಗಿಸಿಕೊಂಡು ಪೊನ್ನಾಟ ಎಂಬ ರಾಜ ಸಂತತಿ ಕ್ರಿ.ಶ 6ನೇ ಶತಮಾನದವರೆಗೂ ಇಲ್ಲಿ ರಾಜ್ಯಾಡಳಿತ ನಡೆಸುತ್ತಿತ್ತು. ಪುನ್ನಾಟವು ಚೆರಿಲ್ ಎಂಬ ಅಮೂಲ್ಯ ಕಲ್ಲು ಸಿಗುವ ಸ್ಥಳವೆಂದು ಗ್ರೀಕ್‌ನ ಪ್ರಾಚೀನ ಭೂಗೋಳ ವಿಜ್ಞಾನಿ ಟಾಲೆಮಿ ಹೇಳಿರುವುದು ಹೆಮ್ಮೆಯ ವಿಚಾರ.

ಚೆರಿಲ್ ಎಂಬ ಕಲ್ಲು ಆ ಕಾಲಕ್ಕೆ ಕೀರ್ತಿಪುರದಿಂದ ಗ್ರೀಸ್ ಮತ್ತು ರೋಮ್ ನಗರಗಳಿಗೆ ರಫ್ತಾಗುತ್ತಿತ್ತಂತೆ. ಪುನ್ನಟದ ಪ್ರದೇಶದಲ್ಲಿ ದೊರೆತ ರೋಮನ್ ನಾಣ್ಯಗಳು ಪುರಾತನ ವ್ಯಾಪಾರದ ಸಂಬಂಧಗೆ ಪುಷ್ಟಿ ನೀಡಿದೆ. ಜತೆಗೆ ಟಾಲೆಮಿ ಹೇಳಿದ ಪುನ್ನಾಟವು ಸಹ ಈ ಕೀರ್ತಿಪುರ ಎಂಬ ಅಂಶ ದೃಢಪಟ್ಟಂತಾಗಿದೆ.

ಬಸವನಪುರ, ಕುಮಾರಲಿಂಗಂ ಮತ್ತು ಮಾಂಬಳ್ಳಿ ಶಾಸನಗಳ ಪ್ರಕಾರ ಮೈಕ್ ಎಂಬುವನ ಮಗ ತಾಮರ ಕಶ್ಯಪ ಪುನ್ನಾಟದ ಮೊದಲನೇ ಅರಸ. ಈತ ತಾಮ್ರದ ಪಾತ್ರೆಯಲ್ಲಿ ಹುಟ್ಟಿದವನೆಂಬ ಇತಿಹಾಸದಿಂದಾಗಿ ಈ ಅರಸನಿಗೆ ತಾಮರ ಕಶ್ಯಪ್ಪ ಎಂಬ ಹೆಸರು ಬಂತು ಎಂದು ತಿಳಿಸಲಾಗಿದೆ. ಗಂಗರ ಸಮಕಾಲೀನರಾಗಿ ಆಳುತ್ತಿದ್ದ ಈ ರಾಜ ಸಂತತಿಯನ್ನು ಪುರರಾಷ್ಟ್ರ, ಪೂನಾಡು ಮತ್ತು ಪುದಲ್ ನಾಡು ಎಂದು ಕರೆಯಲಾಗುತ್ತಿತ್ತು.
ಕುಪ್ಪುನಿ (ಕಬಿನಿ) ನದಿಯ ದಂಡೆಯಲ್ಲಿದ್ದ ಈ ನಾಡು ಫಲವತ್ತಾಗಿತ್ತು. ಕಾಡು, ಎಮ್ಮೆ, ಹಸು ಕುದುರೆಗಳಿಂದ ಸಮೃದ್ಧವಾಗಿಯೂ ಚಿನ್ನ, ಬೆಳ್ಳಿ, ಹವಳ, ಮುತ್ತುಗಳಿಂದಲೂ ಶ್ರೀಮಂತವಾಗಿತ್ತೆಂದು ಶಾಸನಗಳಿಂದ ತಿಳಿದು ಬಂದಿದೆ. ದೇವಾಲಯಕ್ಕೆ ತೆರಳ ಬಯಸುವವರು ಅರ್ಚಕ ಕೆ.ವಿ.ಭಾಸ್ಕರ್ ಅವರ ಮೊ.ನಂ.9945616044 ಸಂಪರ್ಕಿಸಬಹುದಾಗಿದೆ.

ಮಾರ್ಗ: ದೇವಸ್ಥಾನ ಜಿಲ್ಲಾ ಕೇಂದ್ರ ಮೈಸೂರಿನಿಂದ 75 ಕಿ.ಮೀ. ದೂರದಲ್ಲಿದ್ದು ಮೈಸೂರಿನಿಂದ ಮಾನಂದವಾಡಿ ಮಾರ್ಗವಾಗಿ ಹ್ಯಾಂಡ್‌ಪೋಸ್ಟ್ ಮೂಲಕ ಕಬಿನಿ ಜಲಾಶಯದಿಂದ ಬಿದರಹಳ್ಳಿ ಗ್ರಾಮದ ಮುಖ್ಯ ರಸ್ತೆಯಿಂದ 3 ಕಿಮೀ ದೂರ ಕ್ರಮಿಸಿದರೆ ದೇವಸ್ಥಾನ ಸಿಗಲಿದೆ. ದೇವಸ್ಥಾನದ ಸುತ್ತ ನೀರು ಇರುವ ಕಾರಣ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ನಂಜನಗೂಡು ಮಾರ್ಗವಾಗಿಯೂ ಇಲ್ಲಿಗೆ ಬರಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net