

ಬೋರಗಾಂವ: ಎನ್‌ಸಿಪಿ ಅಭ್ಯರ್ಥಿ ಉತ್ತಮ ಪಾಟೀಲ ಪರ ತಂದೆ ರಾವಸಾಹೇಬ ಪಾಟೀಲ ಶುಕ್ರವಾರ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ತಾಲೂಕಿನ ಮಾಣಕಾಪುರ, ಕುನ್ನೂರು, ಗಳತಗಾ, ಅಕ್ಕೋಳ, ಕಾರದಗಾ, ಬೋರಗಾಂವ ಸೇರಿ ವಿವಿಧ ಗ್ರಾಮಗಳಲ್ಲಿ ಹಾಗೂ ನಿಪ್ಪಾಣಿ ನಗರದ ವಿವಿಧ ವಾರ್ಡುಗಳಲ್ಲಿ ಪ್ರಚಾರ ಕೈಗೊಂಡು ತಾಲೂಕು ಸಮಸ್ಯೆ ಮುಕ್ತ ಮಾಡಲು ಉತ್ತಮ ಪಾಟೀಲಗೆ ಮತ ನೀಡಿ ಎಂದು ಮನವಿ ಮಾಡಿದರು.
ಅನೇಕ ದಶಕಗಳಿಂದ ಅರಿಹಂತ ಉದ್ಯೋಗ ಸಮೂಹವು ಸಾಮಾಜಿಕ ಕಾರ್ಯ ಕೈಗೊಂಡಿದೆ. ಉತ್ತಮ ಪಾಟೀಲ ಗ್ರಾಪಂ ಚುನಾವಣೆಯಲ್ಲಿ ನೇತೃತ್ವ ವಹಿಸಿ ತಾಲೂಕಿನ 17 ಗ್ರಾಪಂಗಳಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಸ್ವಾರ್ಥಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ. ಅನೇಕ ಅಭಿವೃದ್ಧಿ ಮಾಡಿರುವುದಾಗಿ ಹೇಳುವ ಸ್ಥಳೀಯ ಶಾಸಕರು ಕಾರ್ಯಕರ್ತರಲ್ಲಿ ಗೊಂದಲ ನಿರ್ಮಿಸುತ್ತಿದ್ದಾರೆ. ಉತ್ತಮ ಪಾಟೀಲ ಸರ್ವಸಾಮಾನ್ಯರ ಸೇವೆಗಾಗಿ ಹಗಲು ರಾತ್ರಿ ದುಡಿಯುತ್ತಿದ್ದು, ಜನರ ಪ್ರೀತಿ, ವಿಶ್ವಾಸದಿಂದ ಗೆಲುವು ಖಚಿತ ಎಂದರು. ಗ್ರಾಪಂ ಅಧ್ಯಕ್ಷೆ ವೈಶಾಲಿ ಕುಂಬಾರ, ಸದಸ್ಯ ಧನಂಜಯ ಮಾಳಿ, ಸಂದೀಪ ಬನ್ನೆ, ಅಭಯ ಚೌಗುಲೆ, ಸುನೀಲ ಮ್ಹಾಕಾಳೆ, ಧನಪಾಲ ಚೌಗುಲೆ, ಅನ್ನಾಸೋ ನೋರಜೆ, ಸಚಿನ ಬೇಡಕಿಹಾಳೆ, ಪ್ರಮೋದ ಮಾಳಿ, ಪ್ರಮೋದ ಅರಗೆ, ಪ್ರಕಾಶ ಮಾಳಿ, ಅನ್ನಾಸೋ ಚೌಗುಲೆ ಇತರರಿದ್ದರು.
ಅಶೋಕಕುಮಾರ ಅಸೋದೆ ಮತಯಾಚನೆ: ನಿಪ್ಪಾಣಿ ನಗರದಲ್ಲಿ ಉತ್ತಮ ಪಾಟೀಲ ಅವರಿಗೆ ಅತಿ ಹೆಚ್ಚು ಮತ ಸಿಗಲಿವೆ ಎಂದು ದಲಿತ ಕ್ರಾಂತಿ ಸೇನಾ ಅಧ್ಯಕ್ಷ ಅಶೋಕಕುಮಾರ ಅಸೋದೆ ಹೇಳಿದರು. ನಗರದ ಗೋಸಾವಿ, ಬಾದಲ ಪ್ಲಾಟ್ ಹಾಗೂ ಹರಿನಗರದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಜನರು ಊಹಾಪೋಹಗಳಿಗೆ ಕಿವಿಗೊಡದೆ ಉತ್ತಮ ಪಾಟೀಲ ಅವರ ಗೆಲುವಿಗೆ ಶ್ರಮಿಸಿ ಎಂದು ಕೋರಿದರು. ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಗಾಡಿವಡ್ಡರ್ ಮಾತನಾಡಿ, ಕಾಂಗ್ರೆಸ್‌ನವರು ನಮಗೆ ಹಾಗೂ ಉತ್ತಮ ಪಾಟೀಲ ಅವರಿಗೆ ಟಿಕೆಟ್ ನೀಡುವುದಾಗಿ ಆಸೆ ತೋರಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು. ಅಭ್ಯರ್ಥಿ ಉತ್ತಮ ಪಾಟೀಲ ಮಾತನಾಡಿ, ಜನರಿಗೆ ನೀರಾವರಿ ಸೌಲಭ್ಯ ನೀಡಿ, ಸಮಸ್ಯೆ ಮುಕ್ತ ತಾಲೂಕು ನಿರ್ಮಿಸುವ ಸಂಕಲ್ಪ ಮಾಡಿದ್ದೇನೆ. ಜನಪರ ಕಾರ್ಯಗಳಿಗೆ ಆದ್ಯತೆ ನೀಡಲಿದ್ದು, ಈ ಬಗ್ಗೆ ಪ್ರಣಾಳಿಕೆಯಲ್ಲಿ ಮಾಹಿತಿ ನೀಡಲಾಗಿದೆ. ನುಡಿದಂತೆ ನಡೆಯುವೆ ಎಂದರು.