

ಬೆಂಗಳೂರು : ಸಮಾಜದ ಓರೆ ಕೋರೆಗಳನ್ನು ತಿದ್ದಿ ತೀಡಿ ಮುನ್ನಡೆಸುವುದೇ ಮಹಾನುಭಾವರ ಆದ್ಯ ಕರ್ತವ್ಯವಾಗಿದೆ. ಧರ್ಮಾಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ, ನೆಲೆ ಸಿಗಲಾರದು. ಮನುಷ್ಯನಲ್ಲಿ ವೈಚಾರಿಕತೆ ಬೆಳೆದು ಬರಲಿ ಆದರೆ ನಾಸ್ತಿಕ ಮನೋಭಾವ ಬೆಳೆಯಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಿಸಿದ್ದಾರೆ. ಶನಿವಾರ ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಜರುಗಿದ ಸಂಸ್ಕೃತಿ ಸಂವರ್ಧನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಅಸತ್ಯದಿಂದ ಸತ್ಯ ಸಾಕ್ಷಾತ್ಕಾರದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ,ಸಾವಿನಿಂದ ಸಾವಿಲ್ಲದೆಡೆಗೆ ಮುನ್ನಡೆವ ಗುರಿ ಮನುಷ್ಯನದಾಗಬೇಕು. ಮನುಷ್ಯನ ದೈಹಿಕ ವಿಕಾಸಕ್ಕೆ ಆಹಾರ ನೀರು ಬೇಕು. ಬದುಕಿನ ವಿಕಾಸಕ್ಕೆ ಧರ್ಮಾಚರಣೆ ಬೇಕು. ಜೀವನದಲ್ಲಿ ಸಂಪತ್ತು ಸಂಪಾದಿಸದಿದ್ದರೂ ಚಿಂತೆಯಿಲ್ಲ. ಆದರೆ ಸದ್ಗುಣಗಳನ್ನು ಸಂಪಾದಿಸಿಕೊಳ್ಳುವುದನ್ನು ಮರೆಯಬಾರದು. ಅತಿ ಶತ್ರುಗಳನ್ನು ನಿಯಂತ್ರಿಸಬಹುದು. ಆದರೆ ಮತಿ ಶತ್ರುಗಳನ್ನು ನಿಯಂತ್ರಿಸುವುದು ಕಷ್ಟ. ದುಷ್ಟ ಶಕ್ತಿಗಳ ದಮನ, ಸಾತ್ವಿಕ ಶಕ್ತಿಗಳ ಸಂವರ್ಧನೆಗಾಗಿ ವೀರಭದ್ರಸ್ವಾಮಿ ಅವತಾರ ತಾಳಿ ಬಂದಿದ್ದಾನೆ. ವೀರಶೈವ ಧರ್ಮದಲ್ಲಿ ಜೀವ ಶಿವನಾಗುವ ಸಾಧನಾ ಮಾರ್ಗವನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ ಎಂದು ಶ್ರೀ ಜಗದ್ಗುರುಗಳು ವಿವರಿಸಿದರು.
ಧರ್ಮ ಸಂರಕ್ಷಣೆಯಲ್ಲಿ ವೀರಭದ್ರ ಸ್ವಾಮಿ ಕೊಡುಗೆ ಎಂಬ ವಿಷಯದ ಕುರಿತು ಪತ್ರಕರ್ತ ಪ್ರಶಾಂತ ರಿಪ್ಪನಪೇಟೆ ಉಪನ್ಯಾಸ ನೀಡಿದರು. ಇಂದಿನ ವಿಜ್ಞಾನ ಯುಗದಲ್ಲೂ ಸಹ ವೀರಭದ್ರಸ್ವಾಮಿಯ ಲೀಲೆ ಪವಾಡಗಳನ್ನು ಭೇದಿಸಲು ಸಾಧ್ಯವಾಗಿಲ್ಲ. ಶಿವ ಸಂಸ್ಕೃತಿಯ ಸಂವರ್ಧನೆಗಾಗಿ ಅವತರಿಸಿದ ಕಾರಣಿಕ ಪುರುಷ ವೀರಭದ್ರಸ್ವಾಮಿಯನ್ನು ಕೇವಲ ವೀರಶೈವರಷ್ಟೇ ಅಲ್ಲದೆ ವೀರಶೈವೇತರರೂ ಕೂಡಾ ಪೂಜಿಸುತ್ತಾರೆ. ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಮತ್ತು ಗೋತ್ರಪುರುಷನಾಗಿ ಪೂಜೆಗೊಳ್ಳುವ ವೀರಭದ್ರಸ್ವಾಮಿ ದೇಶದೆಲ್ಲೆಡೆ ಪೂಜೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಎಸ್.ಜೆ.ಆರ್.ವಿದ್ಯಾ ಸಂಸ್ಥೆ ಅಧ್ಯಕ್ಷ ಯು.ಎಂ.ಬಸವರಾಜ ರಂಭಾಪುರಿ ಬೆಳಗು ಮಾಸ ಪತ್ರಿಕೆ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಎಡೆಯೂರು, ರಾಜಾಪುರ, ಧನಗೂರು, ಸಿದ್ಧರಬೆಟ್ಟ ಮತ್ತಿತರ ಮಠಗಳ ಶ್ರೀಗಳು ಉಪಸ್ಥಿತರಿದ್ದರು.
ಸಣ್ಣ ನೀರಾವರಿ ಇಲಾಖೆ ಜಂಟಿ ಕಾರ್ಯದರ್ಶಿ ಪಂಪನಗೌಡ್ರು ಮೇಲ್ಸೀಮೆ, ಗುಬ್ಬಿ ತೋಟದಪ್ಪ ಛತ್ರದ ಕಾರ್ಯದರ್ಶಿ ಎಂ.ಸದಾಶಿವಯ್ಯ ಮತ್ತಿತರ ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.