ಲಸಿಕೆ ಪಡೆದವರಿಗೆ ಮಾತ್ರ ರೇಷನ್; ಮಧ್ಯಪ್ರದೇಶ ಸರ್ಕಾರದಿಂದ ಹೊಸ ಆದೇಶ

asdasdfgb
Published on

ನವದೆಹಲಿ: ಲಸಿಕೆ ಅಭಿಯಾನಕ್ಕೆ ವೇಗ ಕೊಡುವ ಉದ್ದೇಶದಿಂದ ವ್ಯಾಕ್ಸಿನ್ ಹಾಕಿಸಿಕೊಳ್ಳದ ಕುಟುಂಬಗಳಿಗೆ ಪಡಿತರ ಸಾಮಗ್ರಿಗಳನ್ನು ನೀಡದಿರಲು ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿದೆ.

ಪ್ರತಿಯೊಬ್ಬ ರೇಷನ್ ಕಾರ್ಡದಾರರು ಎರಡೂ ಡೋಸ್ ಲಸಿಕೆ ಪಡೆಯುವುದು ಕಡ್ಡಾಯ. ಗ್ರಾಹಕರು ಈ ನಿಯಮ ಪಾಲಿಸಿದ್ದಾರೆಯೇ ಇಲ್ಲವೇ ಎಂದು ಪರಿಶೀಲಿಸಿ ಅದನ್ನು ಖಾತರಿಪಡಿಸುವುದು ರೇಷನ್ ಅಂಗಡಿಯವರ ಜವಾಬ್ದಾರಿಯಾಗಿದೆ ಎಂದು ಸರ್ಕಾರದ ಮಾರ್ಗಸೂಚಿ ತಿಳಿಸಿದೆ. ಪಡಿತರ ಚೀಟಿದಾರರು ಮೊದಲ ಅಥವಾ ಎರಡನೇ ಡೋಸ್ ಲಸಿಕೆ ಪಡೆಯದಿದ್ದರೆ ಅಂಥವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಬಾರದು ಎಂದು ಹೊಸ ಆದೇಶ ತಿಳಿಸಿದೆ.

ಲಸಿಕೆಗೆ ನ್ಯೂಜಿಲೆಂಡ್ ಮಾನ್ಯತೆ: ನ್ಯೂಜಿಲೆಂಡ್ ಸರ್ಕಾರ ಭಾರತದ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳಿಗೆ ಮಾನ್ಯತೆ ನೀಡಿದೆ. ಎಂಟು ಮಾನ್ಯತೆ ಪಡೆದ ಲಸಿಕೆ ಪಟ್ಟಿಗೆ ಈ ಎರಡು ಲಸಿಕೆಗಳನ್ನು ಸೇರ್ಪಡೆ ಮಾಡಿರುವುದು ಭಾರತಕ್ಕೆ ಅನುಕೂಲಕರವಾಗಲಿದ್ದು ಭಾರತದಿಂದ ತೆರಳುವವರ ಮೇಲಿನ ನಿರ್ಬಂಧಗಳನ್ನು ನ್ಯೂಜಿಲೆಂಡ್ ತೆಗೆದು ಹಾಕುವ ನಿರೀಕ್ಷೆ ಗರಿಗೆದರಿದೆ.

10,197 ಹೊಸ ಕೇಸ್ ಪತ್ತೆ: ಭಾರತದಲ್ಲಿ ಬುಧವಾರ ಕರೊನಾ ಸೋಂಕಿನ 10,197 ಹೊಸ ಪ್ರಕರಣಗಳು ದೃಢಪಟ್ಟಿವೆ. 301 ಜನರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು 527 ದಿನಗಳಲ್ಲೇ ಕನಿಷ್ಠವಾದ 1,28,555ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ ಒಂದು ದಿನದಲ್ಲಿ 12,134 ಜನರು ಚೇತರಿಸಿಕೊಂಡಿದ್ದಾರೆ. ಚೇತರಿಕೆ ದರ ಶೇಕಡ 92.87 ಆಗಿದೆ. ಒಟ್ಟು 3,38,73,890 ರೋಗಿಗಳು ಗುಣಮುಖರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net