

ಬೆಂಗಳೂರು: ‘ಅನುಭವ ಮಂಟಪ- ಬಸವಾದಿ ಶರಣರ ವೈಭವ’ ರಥಯಾತ್ರೆಯು ಇಡೀ ರಾಜ್ಯದಲ್ಲಿ ಪ್ರಯಾಣ ಮಾಡಲಿದೆ. ಇದರಿಂದ ವಚನ ಸಾಹಿತ್ಯದ ಪರಿಚಯ, ಬಸವಣ್ಣನವರ ವಿಚಾರಗಳು ಪ್ರಚಾರವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧ ಮಹಾದ್ವಾರದ ಮೆಟ್ಟಿಲು ಬಳಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ಆಯೋಜಿಸಿದ್ದ ‘ಅನುಭವ ಮಂಟಪ- ಬಸವಾದಿ ಶರಣರ ವೈಭವ’ ಕಾರ್ಯಕ್ರಮದ ಲಾಂಛನ ಬಿಡುಗಡೆ ಮತ್ತು ರಥಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಸವಣ್ಣನವರು ಸಮಾಜಕ್ಕಾಗಿ ಬದುಕಿದವರು. ಸಮಾಜದ ಬದಲಾವಣೆಗಾಗಿ ಬದುಕಿರುವವರೆಗೂ ಪ್ರಯತ್ನಿಸಿದರು. ಬಸವಣ್ಣನವರ ಅನುಭವ ಮಂಟಪ ಪರಿಕಲ್ಪನೆಯ ಮೂಲಕ 12 ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ಸ್ಥಾಪನೆಯಾಗಿತು. ಇಲ್ಲಿ ಚರ್ಚೆ ಮತ್ತು ಅದಕ್ಕೆ ಪರಿಹಾರವನ್ನು ಕಂಡುಹಿಡಿದು ಅದನ್ನು ಜಾರಿ ಮಾಡುತ್ತಿದ್ದರು.
ಜಗತ್ತಿನ ಮೊದಲನೇ ಸಂಸತ್ತು ಇದಾಗಿತ್ತು. ಎಲ್ಲಾ ಧರ್ಮ, ಜಾತಿಯವರಿಗೆ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿತ್ತಲ್ಲದೇ ಅವರ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಬಹುದಾಗಿತ್ತು ಎಂದರು.
ಕಳೆದ ಬಾರಿ ನಮ್ಮ ಸರ್ಕಾರದ ಅವಧಿಯಲ್ಲಿ ಬಸವ ಕಲ್ಯಾಣದ ಅನುಭವ ಮಂಟಪ ಪುನರುತ್ಥಾನ ಮಾಡಲು ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಪುನರುತ್ಥಾನದ ಕೆಲಸವನ್ನು ಈ ಬಾರಿ ಪೂರೈಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ನಮ್ಮ ಸರ್ಕಾರ ಘೋಷಣೆಯನ್ನು ಮಾಡಿದೆ. ಕೇವಲ ಘೋಷಣೆ ಮಾಡಿಲ್ಲ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡು ಜಾರಿ ಮಾಡಿದೆ. ಬಸವಣ್ಣ ಸಾಮಾಜಿಕ ಕ್ರಾಂತಿ ಮಾಡಿದವರು. ಸಮಾಜದಲ್ಲಿನ ಸಾಮಾಜಿಕ ರೋಗಗಳಿಗೆ ಪರಿಹಾರವನ್ನು ಸೂಚಿಸಿದ್ದು ಮಾತ್ರವಲ್ಲದೇ ನುಡಿದಂತೆ ನಡೆಯುವ ಹಾಗೂ ನಡೆದಂತೆ ನುಡಿಯುವ ಪ್ರಯತ್ನವನ್ನು ಮಾಡಿದರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಕೂಡಲಸಂಗಮದಲ್ಲಿ ಬಸವ ಜಯಂತಿ ಪ್ರಯುಕ್ತ ಏ.29 ಮತ್ತು 30ರಂದು ಧರ್ಮ ಸಂಸತ್ತು ನಡೆಯಲಿದೆ. ಇದರ ಅಂಗವಾಗಿ ಅನುಭವ ಮಂಟಪ- ಬಸವಾದಿ ಶರಣರ ವೈಭವ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ರಥಯಾತ್ರೆಯು 15 ಜಿಲ್ಲೆಗಳಲ್ಲಿ ಸಂಚರಿಸಿ ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಪ್ರಚಾರ, ವಚನ ಸಾಹಿತ್ಯ ಪರಿಚಯಿಸಲಾಗುವುದು ಎಂದು ತಿಳಿಸಿದರು.
ಸಚಿವರಾದ ಎಚ್.ಕೆ.ಪಾಟೀಲ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ, ಆರ್.ಬಿ.ತಿಮ್ಮಾಪುರ, ಡಾ.ಶರಣ ಪ್ರಕಾಶ್ ಪಾಟೀಲ, ಶಾಸಕ ಅಲ್ಲಮಪ್ರಭು ಪಾಟೀಲ, ನಿಜಗುಣ ಶಿವಯೋಗಿಗಳು, ಸಾಹಿತಿ ಹಂಪನಾ ಇನ್ನಿತರರು ಇದ್ದರು.