

ಮುಂಬೈ: ಖ್ಯಾತ ಉದ್ಯಮಿ ರತನ್ ಟಾಟಾ (86) ( Ratan Tata ) ನಿಧನದ ಸುದ್ದಿ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬುಧವಾರ ಮಧ್ಯರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಚಿಕ್ಕ ವಯಸ್ಸಿನಲ್ಲೇ ಅಧಿಕಾರ ವಹಿಸಿಕೊಂಡ ರತನ್ ಟಾಟಾ ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿಯೇ ಉಳಿದರು. ಯಾಕೆ ಮದುವೆಯಾಗಲಿಲ್ಲ? ಎನ್ನುವ ಕುರಿತಾಗಿ ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ.
ರತನ್ ಟಾಟಾ ಅವರು 28 ಡಿಸೆಂಬರ್ 1937 ರಂದು ಸೂರತ್‌ನಲ್ಲಿ ಜನಿಸಿದರು. ವ್ಯಕ್ತಿತ್ವದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಸ್ಥಾಪಿಸಿಕೊಂಡು ಉನ್ನತ ಶಿಖರಗಳನ್ನು ಏರಿದರು. ಅವರು ಟಾಟಾ ಗ್ರೂಪ್ ಆಫ್ ಬಿಸಿನೆಸ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದರು. ಹಾಗಾಗಿಯೇ ಟಾಟಾ ಇಂದು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಆದರೆ ವ್ಯಾಪಾರದಲ್ಲಿ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರೆಂದೇ ಹೆಸರಾಗಿರುವ ರತನ್ ಟಾಟಾ ಪ್ರೀತಿಯಲ್ಲಿ ವಿಫಲರಾದರು.
ಟಾಟಾ ಸಮೂಹದ ಮಾಜಿ ಅಧ್ಯಕ್ಷ ರತನ್ ಟಾಟಾ ಸಂದರ್ಶನವೊಂದರಲ್ಲಿ ತಮ್ಮ ಪ್ರೇಮ ಜೀವನದ ಬಗ್ಗೆ ಮಾತನಾಡಿ, ಪ್ರೀತಿ ತನ್ನ ಜೀವನದಲ್ಲಿ ಒಂದಲ್ಲ ನಾಲ್ಕು ಬಾರಿ ಬಾಗಿಲು ತಟ್ಟಿದೆ, ಆದರೆ ಕಷ್ಟಕರ ಸಂದರ್ಭಗಳಿಂದ ಅವರ ಸಂಬಂಧವು ಮದುವೆಯ ಹಂತವನ್ನು ತಲುಪಲಿಲ್ಲ. ಇದಾದ ನಂತರ ಮತ್ತೆ ಮದುವೆಯ ಬಗ್ಗೆ ಯೋಚಿಸಲಿಲ್ಲ. ದೇಶದಲ್ಲಿ ಟಾಟಾ ಗ್ರೂಪ್‌ನ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸುವುದರ ಮೇಲೆ ಅವರ ಇಡೀ ಜೀವನವು ಸಂಪೂರ್ಣವಾಗಿ ಕೇಂದ್ರೀಕೃತವಾಗಿತ್ತು ಎಂದು ಅವರು ವಿವರಿಸಿದರು.
ರತನ್ ಟಾಟಾ ಅವರು ತಮ್ಮ ಬಾಲ್ಯದಿನಗಳಲ್ಲಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು ಸುಂದರ ಯುವತಿಯನ್ನು ಮನಸಾರೆ ಪ್ರೀತಿಸುತ್ತಿದ್ದರು. ಇಬ್ಬರೂ ಸಹ ಮದುವೆಯಾಗಲು ಬಯಸಿದ್ದರು. ಆದರೆ ಅದೇ ಸಮಯದಲ್ಲಿ ರತನ್ ಟಾಟಾ ಅವರ ಅಜ್ಜಿ ಅನಾರೋಗ್ಯಕ್ಕೆ ಒಳಗಾದ ಪರಿಣಾಮ ಟಾಟಾ ಅವರು ಭಾರತಕ್ಕೆ ಬರಬೇಕಾಯಿತು. ಅದೇ ಸಮಯಕ್ಕೆ ಸರಿಯಾಗಿ ಭಾರತ ಮತ್ತು ಚೀನಾ ದೇಶಗಳ ನಡುವೆ ಯುದ್ಧ ನಡೆಯುತ್ತಿತ್ತು. ಇದರಿಂದಾಗಿ ರತನ್ ಅವರ ಪ್ರೀತಿಯ ಹುಡುಗಿ ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ.
ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುವ ಉದ್ದೇಶದಿಂದ ಆಕೆಯನ್ನು ಭಾರತಕ್ಕೆ ಕರೆಸಿಕೊಳ್ಳಲು ರತನ್ ಟಾಟಾ ಅವರು ಯೋಚಿಸಿದ್ದರು. ಆದರೆ ಭಾರತ ಮತ್ತು ಚೀನಾ ನಡುವಿನ ಯುದ್ಧದ ಕಾರಣ, ತನ್ನ ಗೆಳತಿಯ ಪೋಷಕರಿಗೆ ಅವಳನ್ನು ಭಾರತಕ್ಕೆ ಕಳುಹಿಸಲು ಇಷ್ಟವಿರಲಿಲ್ಲ. ಇದರಿಂದ ಅವರ ಪ್ರೀತಿ ವಿಫಲವಾಯಿತು. “ನಾನು ಮದುವೆಯಾಗಲು ಬಯಸಿದ ವ್ಯಕ್ತಿ ನನ್ನೊಂದಿಗೆ ಭಾರತಕ್ಕೆ ಬರಬೇಕೆಂದು ನಾನು ಬಯಸಿದ್ದೆ, ಆದ್ದರಿಂದ ಅವಳನ್ನು ಭೇಟಿಯಾಗಲು ಹಿಂತಿರುಗಿದೆ. ಆದರೆ ಯುದ್ಧದ ಕಾರಣ, ಅವಳ ಪೋಷಕರು ಅವಳನ್ನು ನನ್ನೊಂದಿಗೆ ಕಳುಹಿಸಲು ಒಪ್ಪಲಿಲ್ಲ. ಇದರೊಂದಿಗೆ ನಮ್ಮ ಸಂಬಂಧವು ಕೊನೆಗೊಂಡಿತು ಎಂದು ಹೇಳಿದರು.
ಅವಳು ನನ್ನ ಜೀವನದಲ್ಲಿ ಇದ್ದಿದ್ದರೆ ಪರಿಸ್ಥಿತಿ ಇನ್ನಷ್ಟು ಜಟಿಲವಾಗುತ್ತಿತ್ತು ಎಂದು ಹೇಳಿದರು. 'ನನಗೆ ಕ್ರಶ್ ಇದೆಯಾ ಎಂದು ನೀವು ಕೇಳಿದರೆ, ನಾನು ಮದುವೆಯ ಬಗ್ಗೆ ನಾಲ್ಕು ಬಾರಿ ಗಂಭೀರವಾಗಿ ಯೋಚಿಸಿದೆ ಎಂದು ಹೇಳುತ್ತೇನೆ. ಆದರೆ ಆಗೊಮ್ಮೆ ಈಗೊಮ್ಮೆ ಯಾವುದೋ ಭಯದಿಂದ ಹಿಂದೆ ಸರಿಯುತ್ತೇನೆ. ನಾನು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾಗ, ನನ್ನ ಪ್ರೀತಿಯ ಬಗ್ಗೆ ತುಂಬಾ ಗಂಭೀರವಾಗಿದ್ದೆ. ಭಾರತಕ್ಕೆ ಮರಳಿದ ನಂತರ ನಾವು ಮದುವೆಯಾಗಲು ಸಾಧ್ಯವಾಗಲಿಲ್ಲ ಎಂದಿದ್ದರು.
“ನನಗೆ ಹೆಂಡತಿ ಅಥವಾ ಕುಟುಂಬವಿಲ್ಲದ ಕಾರಣ ನಾನು ಅನೇಕ ಬಾರಿ ಒಂಟಿತನವನ್ನು ಅನುಭವಿಸುತ್ತೇನೆ. ಬಿಡುವಿಲ್ಲದ ಕೆಲಸ, ಸರಿಯಾದ ಸಮಯದ ಅಭಾವ ಮುಂತಾದ ಹಲವು ಕಾರಣಗಳಿಂದ ಮದುವೆಯಾಗದೇ ಇದ್ದೆನೆ. ನಾನು ಕೆಲವು ಬಾರಿ ಮದುವೆಯಾಗಲು ಪ್ರಯತ್ನಿಸಿದೆ, ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದು ರತನ್ ಟಾಟಾ ಹೇಳಿದರು.
ನಂತರ ರತನ್ ಟಾಟಾ ತಮ್ಮ ಸಂಪೂರ್ಣ ಗಮನವನ್ನು ಟಾಟಾ ಗ್ರೂಪ್ ಮೇಲೆ ಕೇಂದ್ರೀಕರಿಸಿದರು. ಸಮೂಹ ಸಂಸ್ಥೆಗಳನ್ನು ಮುಂದಕ್ಕೆ ಕೊಂಡೊಯ್ಯಲು ಶ್ರಮಿಸಿದರು. ಮನೆಯ ಅಡುಗೆಮನೆಯಲ್ಲಿ ಬಳಸುವ ಉಪ್ಪಿನಿಂದ ಹಿಡಿದು ಆಕಾಶದಲ್ಲಿ ವಿಮಾನ ಪ್ರಯಾಣದವರೆಗೆ ಟಾಟಾ ಗ್ರೂಪ್ ಕಂಪನಿಗಳು ತಮ್ಮ ಅಸ್ತಿತ್ವವನ್ನು ಸಾರಿವೆ. ಮದುವೆಯಾಗದಿದ್ದರೂ.. ರತನ್ ಟಾಟಾ ತುಂಬಾ ಸಂತೋಷದ ಜೀವನ ನಡೆಸುತ್ತಿದ್ದರು. 2012 ರಲ್ಲಿ 75 ನೇ ವಯಸ್ಸಿನಲ್ಲಿ ಟಾಟಾ ಸನ್ಸ್‌ನಿಂದ ನಿವೃತ್ತರಾದರು.