

ಶಿಕಾರಿಪುರ: ರಾಷ್ಟ್ರಕವಿ ಕುವೆಂಪು ಅವರ ಸಂದೇಶಗಳು ಸಾರ್ವಕಾಲಿಕ. ಅವರ ಸಾಹಿತ್ಯದಲ್ಲಿ ಸಮಗ್ರ ದೃಷ್ಟಿಕೋನ ಮತ್ತು ಸಾಮಾಜಿಕ ಕಳಕಳಿಯಿದೆ. ಅದು ಅವರನ್ನು ಶ್ರೇಷ್ಠತೆಯ ಕಡೆಗೆ ಕೊಂಡೊಯ್ದಿದೆ ಎಂದು ಲೇಖಕ ಡಾ. ಎಸ್.ವಿ. ಪುರುಷೋತ್ತಮ್ ಹಾರೋಹಿತ್ತಲು ಹೇಳಿದರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಆಶ್ರಯದಲ್ಲಿ ಆಯೋಜಿಸಿದ್ದ ದಿ. ಮೈತ್ರಾದೇವಿ ಯಡಿಯೂರಪ್ಪ ದತ್ತಿ ಹಾಗೂ ದಿ. ಎಂ.ಎಸ್. ಮಲ್ಲಪ್ಪ ಮತ್ತು ಎಂ.ಎಸ್. ಭರಮಪ್ಪ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕುವೆಂಪು ಅವರ ಸಾಹಿತ್ಯದ ಕೊಡುಗೆ ಕನ್ನಡ ಸಾಹಿತ್ಯ ಪ್ರಪಂಚವನ್ನು ಶ್ರೀಮಂತಗೊಳಿಸಿವೆ. ಕುವೆಂಪು ಅವರ ಸಾಹಿತ್ಯದಲ್ಲಿ ನಾವು ಪ್ರಕೃತಿ ಮತ್ತು ವಾಸ್ತವ ಬದುಕನ್ನು ಕಾಣಬಹುದು ಎಂದರು.
ಕುವೆಂಪು ಅವರು ಸಹೃದಯಿ ಸಾಹಿತಿ. ಸರ್ವರಿಗೂ ಸಮಬಾಳು, ಸಮಪಾಲು ತತ್ವದ ಪರವಾಗಿದ್ದರು. ಕುವೆಂಪು ಪ್ರಕೃತಿಯ ಆರಾಧಕರಾಗಿದ್ದರು. ಕುವೆಂಪು ಸಾಹಿತ್ಯವನ್ನು ನೀವು ಓದಬೇಕು. ಕುವೆಂಪು ಸಾಹಿತ್ಯದ ಮೌಲ್ಯಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದರು.
ಹಾಸ್ಯ ಸಾಹಿತ್ಯ ವಿಷಯ ಕುರಿತು ಮಾತನಾಡಿದ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕ ನಾಗರಾಜ್, ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಸಾಹಿತ್ಯ ಕೂಡ ಪ್ರಮುಖವಾದುದು. ಭಾರವಾದ ಬದುಕು ಹಗುರವಾಗಲು ಹಾಸ್ಯಬೇಕು. ಇಂದಿನ ಒತ್ತಡದ ಜೀವನದಲ್ಲಿ ಹಾಸ್ಯ ಪ್ರಮುಖ ಪಾತ್ರ ವಹಿಸುತ್ತದೆ. ಹಾಸ್ಯ ನಮ್ಮ ಆಯಸ್ಸನ್ನು ಹೆಚ್ಚು ಮಾಡುತ್ತದೆ. ಹಾಸ್ಯದ ಮೂಲಕ ಮೌಲ್ಯವನ್ನು ತಿಳಿಸುವ ಕಾರ್ಯ ಆಗುತ್ತಿದೆ. ಇರುವಷ್ಟು ದಿನ ನೀವು ನಗುನಗುತ್ತಾ ಜೀವನ ಸಾಗಿಸಬೇಕು ಎಂದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಬಿ.ಶಿವಕುಮಾರ್, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಕೆ.ಎಸ್.ಹುಚ್ಚರಾಯಪ್ಪ, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಉಪನ್ಯಾಸಕರು ಇದ್ದರು.