ಸಂಗೀತ ಸಾಮ್ರಾಜ್ಞೆ, ಭಾರತ ರತ್ನ ಪುರಸ್ಕೃತ ಎಂ.ಎಸ್.ಸುಬ್ಬಲಕ್ಷ್ಮೀ ಜೀವನಧಾರಿತ ಸಿನಿಮಾ ತೆರೆಮೇಲೆ ತರಲು ಸಿದ್ಧತೆಗಳು ನಡೆಯುತ್ತಿವೆ. ‘ಕಿಂಗ್ಡಮ್’ ನಿರ್ದೇಶಕ ಗೌತಮ್ ಈ ಬಯೋಪಿಕ್‌ಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ ಎನ್ನಲಾಗಿದೆ. ತೆರೆಮರೆಯಲ್ಲಿ ಪ್ರಿ-ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿವೆ. ಹಾಗಾದರೆ, ಎಂ.ಎಸ್. ಸುಬ್ಬಲಕ್ಷ್ಮೀ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆ, ಕುತೂಹಲ ಪ್ರೇಕ್ಷಕರಲ್ಲಿ ಇದ್ದೇ ಇದೆ. ಮೊದಲಿನಿಂದಲೂ ಸಂಗೀತ ಸಾಮಾಜ್ಞೆಯ ಪಾತ್ರಕ್ಕೆ ಬಹುಭಾಷಾ ತಾರೆ ಸಾಯಿ ಪಲ್ಲವಿ ಹೆಸರು ಹೆಚ್ಚು ಕೇಳಿಬಂದಿತ್ತು. ನಟಿ ಕೂಡ ಪಾತ್ರಕ್ಕಾಗಿ ಸಿದ್ಧತೆ ನಡೆಸುತ್ತಿದ್ದು, ಜತೆಗೆ ಕರ್ನಾಟಕ ಸಂಗೀತ ಕಲಿಯುತ್ತಿದ್ದಾರೆ ಎಂದು ವರದಿಯಾಗಿತ್ತು. ಸದ್ಯ ಸಾಯಿ ಪಲ್ಲವಿ ಬಹುನಿರೀಕ್ಷಿತ ‘ರಾಮಾಯಣ’ ಸೇರಿ ಕೆಲ ಸಿನಿಮಾಗಳಲ್ಲಿ ಬಿಜಿಯಾಗಿರುವುದರಿಂದ, ಅವರ ಬದಲು ‘ಕಾಂತಾರ’ ಕನಕವತಿ ರುಕ್ಮಿಣಿ ವಸಂತ್ ಹೆಸರು ಮುನ್ನೆಲೆಗೆ ಬಂದಿತ್ತು. ಆದರೆ, ರುಕ್ಮಿಣಿ ಹೆಸರು ಸಾಯಿ ಪಲ್ಲವಿಯಷ್ಟು ಹೆಚ್ಚು ದಿನ ಓಡಲಿಲ್ಲ. ಹಾಗಾಗಿ, ಪ್ರಾಜೆಕ್ಟ್ ತಡವಾದರೂ ಸಾಯಿ ಪಲ್ಲವಿಯೇ ಅಂತಿಮವಾಗಬಹುದು ಎನ್ನಲಾಗುತ್ತಿತ್ತು. ಹೀಗಿರುವಾಗಲೇ ಎಂ.ಎಸ್.ಸುಬ್ಬಲಕ್ಷ್ಮೀ ಪಾತ್ರಕ್ಕೆ ಇದೀಗ ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಹೆಸರು ಕೇಳಿಬಂದಿದೆ. ಇತ್ತೀಚೆಗೆ ಅವರ ಹೈದರಾಬಾದ್ ನಿವಾಸದಲ್ಲಿ ಲುಕ್ ಟೆಸ್ಟ್ ಕೂಡ ನಡೆಸಲಾಗಿದೆಯಂತೆ. ಹಾಗೆಯೇ, ಪಾತ್ರಕ್ಕಾಗಿ ಸಿದ್ಧತೆ ನಡೆಸುವಂತೆಯೂ ಅವರಿಗೆ ಚಿತ್ರತಂಡ ತಿಳಿಸಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ರಶ್ಮಿಕಾ ಆಗಲಿ ಅಥವಾ ಚಿತ್ರತಂಡವಾಗಲಿ ಅಧಿಕೃತ ೋಷಣೆ ಮಾಡಿಲ್ಲವಷ್ಟೆ. -ಏಜೆನ್ಸೀಸ್