ರಶ್ಮಿಕಾ ಮಂದಣ್ಣ ಉಪದೇಶಕ್ಕೆ ನೆಟ್ಟಿಗರ ಟ್ರೋಲ್​; ಗೌರವದಿಂದ ಬಾಳಬೇಕು ಎಂದರೆ ಸಾಧನೆ, ಹಣ ಎರಡೂ ಬೇಕು ಎಂದೆಲ್ಲಾ ಹೇಳಿದ ನಟಿಯ ಹೇಳಿಕೆ ವೈರಲ್​..!

rmix
Published on

ನ್ಯಾಷನಲ್​​​ ಕ್ರಶ್​ ರಶ್ಮಿಕಾ ಮಂದಣ್ಣ ಉಪದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ರಶ್ಮಿಕಾ ಮಂದಣ್ಣ ಅವರು ಸಾರ್ವಜನಿಕರಿಗೆ ಉಪದೇಶ ಮಾಡಿದ್ದಾರೆ. ಯಾರೇನೇ ಅಂದರೂ ನೀವು ಕನಸು ಕಾಣುವುದನ್ನು ಬಿಡಬೇಡಿ. ಕನಸು ಎಂದರೆ ಸಾಮಾನ್ಯ ಕನಸಲ್ಲ, ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು. ಎಲ್ಲವೂ ಕ್ಷಣಿಕ, ಯಾವುದೂ ಶಾಶ್ವತವಲ್ಲ ಎಂದು ಯಾರೆಷ್ಟೇ ಉಪದೇಶ ಮಾಡಿದರೂ ಅಂತಹ ಮಾತಿಗೆಲ್ಲ ತಲೆ ಕೆಡಿಸಿಕೊಳ್ಳಬೇಡಿ. ಹೌದು, ಯಾವುದೂ ಶಾಶ್ವತವಲ್ಲ, ಆದರೆ ಜೀವನ ಇರುವಷ್ಟು ದಿನ ಗೌರವದಿಂದ ಬಾಳಬೇಕು ಎಂದರೆ ಸಾಧನೆ, ಹಣ ಎರಡೂ ಬೇಕು. ಈ ರೀತಿಯಾಗಿ ರಶ್ಮಿಕಾ ಹೇಳಿರುವ ವಿಡಿಯೋಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್​​ ಮಾಡುತ್ತಿದ್ದಾರೆ.


ಯಾರು ಏನೇ ಅಂದ್ರೂ, ಯಾರು ನಿಮ್ಮ ಕಾಲೆಳೆದ್ರೂ, ನಿಮ್ಮ ಬೆನ್ನು ಬಿದ್ದು ಬೇತಾಳದಂತೆ ಕಾಡಿದರೂ ನೀವು ಮಾತ್ರ ನಿಮ್ಮ ಕನಸನ್ನು ಬಿಡಬೇಡಿ. ಅದನ್ನು ಬೆನ್ನುಹತ್ತಿ ಸಾಧಿಸಲು ಪ್ರಯತ್ನಿಸಬೇಕು. ನಮ್ಮ ಕನಸನ್ನು ನನಸು ಮಾಡಲು ನಾವು ಪರಿಶ್ರಮ ಪಟ್ಟು ಕೆಲಸ ಮಾಡಬೇಕು, ಮತ್ತೆ ಮತ್ತೆ ಕೆಲಸ ಮಾಡುತ್ತಲೇ ಇರಬೇಕು. ನಾನು ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ, ಅವಮಾನಗಳನ್ನು ಎದುರಿಸಿದ್ದೇನೆ. ಆದರೆ, ಯಾವತ್ತೂ ನನ್ನ ಕನಸನ್ನು ಬಿಟ್ಟುಕೊಡಲಿಲ್ಲ.


ಫಲಿತಾಂಶಕ್ಕೆ ನಾನು ಹೊಣೆಯಾದರೂ ಅದಕ್ಕೆ ಕಾರಣ ನಾನಲ್ಲ. ಸಿನಿಮಾದ ಸೋಲು-ಗೆಲುವು ನನ್ನೊಬ್ಬಳ ಮೇಲೆ ಅವಲಂಬಿಸಿಲ್ಲ. ಆದರೆ, ನನ್ನ ಕೆಲಸವನ್ನು ನಾನು ಶೃದ್ಧೆಯಿಂದ ಮಾಡಿದ್ದೇನೆ, ನನ್ನ ಪರಿಶ್ರಮಕ್ಕೆ, ಕೆಲಸಕ್ಕೆ ತಕ್ಕ ಪ್ರತಿಫಲ ಪಡೆದಿದ್ದೇನೆ. ನಾನು ನನ್ನ ಕನಸನ್ನು ನನಸು ಮಾಡಿಕೊಳ್ಳಲು ಸತತ ಪ್ರಯತ್ನ ಮಾಡುತ್ತಲೇ ಇದ್ದೇನೆ, ಅದೇ ದಾರಿಯಲ್ಲಿ ಸಾಗುತ್ತ ಗುರಿಗೆ ಸಮೀಪದಲ್ಲಿ ಇದ್ದೇನೆ. ನಾನು ನನ್ನ ಗುರಿಯನ್ನು ಖಂಡಿತವಾಗಿ ಸಾಧಿಸುತ್ತೇನೆ ಎಂಬ ವಿಶ್ವಾಸವೂ ನನಗಿದೆ ಎಂದಿದ್ದಾರೆ ಪುಷ್ಪಾ ಖ್ಯಾತಿಯ ಕನ್ನಡತಿ ರಶ್ಮಿಕಾ.


ಸದ್ಯ ರಶ್ಮಿಕಾ ಹೇಳಿಕೆಗೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್​​ ಮಾಡಿದ್ದು, ನೀನು ನಮಗೆ ಅಂದ್ರೆ ಜನರಿಗೆ ಉದೇಶ ಮಾಡುವಷ್ಟರ ಮಟ್ಟಿಗೆ ಇನ್ನೂ ಬೆಳೆದಿಲ್ಲ. ನಿನ್ನ ಕೆಲಸ ನಟನೆ ಅದನ್ನ ಮೊದಲು ಸರಿಯಾಗಿ ಕಲಿ ಅಂತಾ ಕಾಮೆಂಟ್​ ಮಾಡಿದ್ದಾರೆ. ಇನ್ನೂ ಹಲವರು, ನಿಮ್ಮ ಸಲಹೆ ನಿಜವಾಗಿಯೂ ಸರಿ ಇದೆ ಎಂದು ಮಿಶ್ರ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net