

ಶಿವಮೊಗ್ಗ: ಕರ್ನಾಟಕ ಸಂಘದ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ಕರ್ನಾಟಕ ಸಂಘದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಛಾಯಾಚಿತ್ರ, ಅಂಚೆ ಚೀಟಿ ಹಾಗೂ ನಾಣ್ಯಗಳ ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ. ಪತ್ರಕರ್ತ ಎಸ್.ಚಂದ್ರಕಾಂತ್ ಸಂಗ್ರಹಿಸಿದ ಅಂಚೆ ಚೀಟಿ ಹಾಗೂ ನಾಣ್ಯಗಳು, ವೈದ್ಯ ಡಾ. ಶ್ರೀಕಾಂತ್ ಹೆಗಡೆ ಕ್ಲಿಕ್ಲಿಸಿದ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಅದ್ಭುತವಾಗಿವೆ.
ದೇಶವನ್ನಾಳಿದ ವಿವಿಧ ರಾಜ ಮನೆತನಗಳ ಅವಧಿಯ ನಾಣ್ಯಗಳು, ಸ್ವಾತಂತ್ರಾೃನಂತರದ ಅವಧಿಯಲ್ಲಿ ಚಲಾವಣೆಗೆ ಬಂದ ನಾಣ್ಯ, ನೋಟುಗಳು, ದೇಶದ ಸಾಧಕರು, ಉತ್ತಮ ಆಡಳಿತಗಾರರು, ಹೆಸರಾಂತ ಸ್ಮಾರಕಗಳ ಸವಿನೆನಪಿಗಾಗಿ ಸರ್ಕಾರಗಳು ಬಿಡುಗಡೆ ಮಾಡಿದ ವಿವಿಧ ಅಂಚೆ ಚೀಟಿಗಳನ್ನು ಸಂಗ್ರಹಿಸಿರುವ ಪತ್ರಕರ್ತ ಎಸ್.ಚಂದ್ರಕಾಂತ್ ಪ್ರದರ್ಶನದಲ್ಲಿ ಇರಿಸಿದ್ದಾರೆ.
50 ವರ್ಷಕ್ಕೂ ಹೆಚ್ಚು ಕಾಲದಿಂದ ಹವ್ಯಾಸವಾಗಿ ಮಾಡಿಕೊಂಡಿರುವ ಅವರು, ಕುಶಾನರು, ಗುಪ್ತರು, ವಿಜಯನಗರ ಸಾಮ್ರಾಜ್ಯ, ಮೈಸೂರು ಸಂಸ್ಥಾನದ ಅವಧಿಯ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಭಾರತ ಮಾತ್ರವಲ್ಲದೇ ವಿವಿಧ ದೇಶಗಳ ಕರೆನ್ಸಿಗಳನ್ನೂ ಇಲ್ಲಿ ನೋಡಬಹುದು.
ವೃತ್ತಿಯಲ್ಲಿ ಸಾಕಷ್ಟು ಹೆಸರು ಗಳಿಸಿರುವ ಡಾ. ಶ್ರೀಕಾಂತ್ ಹೆಗಡೆ, ಪ್ರವೃತ್ತಿಯಲ್ಲೂ ಸೈ ಎನಿಸಿಕೊಂಡವರು. ವನ್ಯಜೀವಿ ಛಾಯಾಚಿತ್ರಗಳು, ದೇಶ ವಿದೇಶಗಳ ಪ್ರವಾಸಿ ತಾಣಗಳು, ಸ್ಮಾರಕಗಳು, ವಿವಿಧ ಆಚರಣೆಗಳನ್ನು ತಮ್ಮ ಕ್ಯಾಮರಾದಲ್ಲಿ ಕ್ಲಿಕ್ಕಿಸಿರುವ ಇವರು ಅವುಗಳೆಲ್ಲವನ್ನೂ ಪ್ರದರ್ಶನದಲ್ಲಿ ಇಟ್ಟಿದ್ದಾರೆ.
ಮೈಸೂರು ಅರಮನೆಯ ಅಪರೂಪದ ಫೋಟೊಗಳು, ಹುಲಿ, ಸಿಂಹ, ಕಪ್ಪು ಚಿರತೆಯ ನಾನಾ ಭಂಗಿಗಳು, ಈಜಿಪ್ಟ್‌ನ ಬಾತು, ಗಮನಸೆಳೆಯುವ ಕಿಂಗ್‌ಫಿಷರ್, ರಾಕ್ ಈಗಲ್ ಗೂಭೆ, ಬ್ಲುೃ ಹನಿ ಕೀಪರ್, ಬೂದು ಕಿರೀಟದ ಹಕ್ಕಿ, ಮಲಬಾರ್ ಗಿಳಿ, ನೀರಾನೆಗಳು, ಚೀತಾ ಎಲ್ಲವೂ ಕ್ಯಾಮರಾದಲ್ಲಿ ಸೆರೆಯಾಗಿವೆ.