

ಶಿವಮೊಗ್ಗ: ವಯಸ್ಸಿನ ಕಾರಣದಿಂದ ಕಣ್ಣು ಮಸುಕಾಗಿವೆ ಎಂದು ಭಾವಿಸಿ ಸುಮ್ಮನಾಗಿದ್ದ ಮಹಿಳೆಯೊಬ್ಬರು ಕೆಲವೇ ದಿನಗಳಲ್ಲಿ ತಮ್ಮ ಬಲಗಣ್ಣಿನ ದೃಷ್ಟಿ ಕಳೆದುಕೊಂಡು ಕಂಗಲಾಗಿದ್ದರು. ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ಅಪರೂಪದ ಶಸ್ತ್ರಚಿಕಿತ್ಸೆಯಿಂದ ಆ ಮಹಿಳೆ ಮರಳಿ ದೃಷ್ಟಿ ಪಡೆಯುವಂತಾಗಿದೆ.
47 ವರ್ಷದ ಆ ಮಹಿಳೆಗೆ ಆರಂಭದಲ್ಲಿ ಬಲ ಕಣ್ಣಿನಲ್ಲಿ ಸ್ವಲ್ಪ ಮುಸುಕು ಕಾಣಿಸಿತ್ತು. ಅದು ನಿಧಾನವಾಗಿ ಬೆಳಕೂ ಕಾಣದಷ್ಟು ಕಗ್ಗತ್ತಲಾಗಿ ಮಾರ್ಪಟ್ಟಿತ್ತು. ಕಣ್ಣಿನ ಸಮಸ್ಯೆ ಅಂದುಕೊಂಡಿದ್ದ ಅವರಿಗೆ ಅದು ಮಿದುಳಿನಲ್ಲಿ ಬೆಳೆಯುತ್ತಿದ್ದ ಅಪಾಯಕಾರಿ ಟ್ಯೂಮರ್(ಗಡ್ಡೆ)ನಿಂದ ಆದ ಸಮಸ್ಯೆ ಎಂಬುದು ತಡವಾಗಿ ಅರಿವಿಗೆ ಬಂದಿದೆ. ಶಿವಮೊಗ್ಗದ ಎನ್‌ಎಚ್ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ. ಎಂ.ಎಸ್.ಅನಿಲ್‌ಕುಮಾರ್ ಅವರನ್ನು ಭೇಟಿಯಾದ ಅವರು ತಪಾಸಣೆ ಬಳಿಕ ಮಿದುಳಿನಲ್ಲಿ 5*4*3.5 ಸೆಂ.ಮೀ ಗಾತ್ರದ ಮೆನಿಂಜಿಯೋಮಾ ಎಂಬ ಗಡ್ಡೆ ಪತ್ತೆಯಾಗಿತ್ತು. ಇದು ಕಣ್ಣುಗಳಿಗೆ ಸಂಬಂಧಿಸಿದ ಆಪ್ಟಿಕ್ ನರ್ವ್ ಮೇಲೆ ಒತ್ತಡ ಹಾಕುತ್ತಿದ್ದು, ಮಿದುಳಿನ ಮುಖ್ಯ ರಕ್ತನಾಳವಾದ ಮಿಡಲ್ ಸೆರಿಬ್ರಲ್ ಆರ್ಟರಿಗೂ ತುಂಬ ಹತ್ತಿರದಲ್ಲಿತ್ತು. ಅದನ್ನು ಹಾಗೆಯೇ ಬಿಟ್ಟಿದ್ದರೆ ಟ್ಯೂಮರ್ ಮುಂದುವರಿದು ಮಿದುಳಿನ ಹೈಪೊಥಾಲಮಸ್ ಭಾಗವನ್ನು ಒತ್ತಿ, ನೆನಪಿನ ಶಕ್ತಿ ಕಳೆದುಕೊಳ್ಳುವುದಲ್ಲದೆ ಅವರ ಹಾರ್ಮೋನ್ ವ್ಯವಸ್ಥೆ ಏರುಪೇರಾಗಿ ಕೋಮಾಗೆ ಜಾರುವ ಸಾಧ್ಯತೆಗಳೂ ಇದ್ದವು. ಶಸ್ತ್ರಚಿಕಿತ್ಸೆಯ ಎರಡು ವಾರಗಳ ಬಳಿಕ ಬೆಳಕನ್ನೂ ಕಾಣದೆ ಇದ್ದ ಕಣ್ಣಿನಿಂದಲೇ ರೋಗಿಯು 6 ಅಡಿ ದೂರದಿಂದ ಬೆರಳು ಎಣಿಸಲು ಸಾಧ್ಯವಾಗಿರುವುದು, ಅಚ್ಚರಿ ಹಾಗೂ ಸಂತೋಷಕ್ಕೆ ಕಾರಣವಾಗಿದೆ ಎನ್ನುತ್ತಾರೆ ಡಾ. ಅನಿಲ್‌ಕುಮಾರ್. ಇಂತಹ ಟ್ಯೂಮರ್‌ಗಳಿಂದ ದೃಷ್ಟಿ ಮತ್ತೆ ಬರುತ್ತದೆ ಎಂಬುದು ಅಪರೂಪ. ಜಾಗತಿಕ ಅಧ್ಯಯನಗಳ ಪ್ರಕಾರ, ಈ ರೀತಿಯ ಟ್ಯೂಮರ್‌ಗಳಿಂದ ದೃಷ್ಟಿ ಮರುಪಡೆಯುವ ಸಾಧ್ಯತೆ ಶೇ.5ರಿಂದ 8ರಷ್ಟು ಮಾತ್ರ. ಬದಲಾಗಿ, ದೃಷ್ಟಿ ಇನ್ನಷ್ಟು ಕುಗ್ಗುವ ಸಂಭವ ಶೇ.22ರಿಂದ 35ರಷ್ಟು ರಷ್ಟು ಇದೆ ಎಂದರು.
ಇದೊಂದು ಜಟಿಲ ಹಾಗೂ ಸೂಕ್ಷ್ಮಶಸ್ತ್ರಚಿಕಿತ್ಸೆಯಾಗಿತ್ತು. ಈ ಭಾಗಗಳು ದೃಷ್ಟಿ, ನೆನಪು ಮತ್ತು ದೇಹದ ಚೈತನ್ಯಕ್ಕೆ ಸಂಬಂಧಿಸಿದವು. ಒಂದು ಚಿಕ್ಕ ತಪ್ಪು ಆಕೆಯಲ್ಲಿ ಶಾಶ್ವತವಾದ ದೋಷಕ್ಕೆ ಕಾರಣವಾಗುತ್ತಿತ್ತು. ಆದರೂ 12 ಗಂಟೆಗಳ ಕಾಲ ನಡೆದ ಸೂಕ್ಷ್ಮಶಸ್ತ್ರಚಿಕಿತ್ಸೆಯಲ್ಲಿ ಮೈಕ್ರೋಸ್ಕೋಪ್ ಮತ್ತು ನ್ಯೂರೋ ನ್ಯಾವಿಗೇಶನ್ ತಂತ್ರಜ್ಞಾನ ಬಳಸಿಕೊಂಡು ಟ್ಯೂಮರ್ ಅನ್ನು ತೆಗೆದುಹಾಕಲಾಗಿದೆ. - ಡಾ. ಎಂ.ಎಸ್.ಅನಿಲ್‌ಕುಮಾರ್,ಶಿವಮೊಗ್ಗದ ಎನ್‌ಎಚ್ ಆಸ್ಪತ್ರೆ ನ್ಯೂರೋ ಸರ್ಜನ್