

ಬೆಂಗಳೂರು: ಸಾಕಷ್ಟು ವಿವಾದ ಸೃಷ್ಟಿಸಿದ ಬಳಿಕ ಯೂಟ್ಯೂಬ್ನಿಂದ ಮಾಯವಾಗಿದ್ದ ಬಿಗ್ಬಾಸ್ ವಿಜೇತ್ ಹಾಗೂ ರ್ಯಾಪರ್ ಚಂದನ್ ಶೆಟ್ಟಿಯವರ "ಕೋಲುಮಂಡೆ" ರ್ಯಾಪ್ ಸಾಂಗ್ ಇದೀಗ ಮರುಬಿಡುಗಡೆಯಾಗಿದೆ.
ಆಗಸ್ಟ್ 22 ರಂದು ಯೂಟ್ಯೂಬ್ನಲ್ಲಿ ಕೋಲುಮಂಡೆ ಸಾಂಗ್ ಬಿಡುಗಡೆ ಮಾಡಲಾಗಿತ್ತು. ಹಾಡು ವೈರಲ್ ಆದ ಬೆನ್ನಲ್ಲೇ ಹಾಡಿನ ಬಗ್ಗೆ ಚಾಮರಾಜನಗರದ ಜಾನಪದ ಕಲಾವಿದರು ಕಿಡಿಕಾರಿದ್ದರು.
ಮಾದಪ್ಪನ ಗೀತೆಯಲ್ಲಿ ಶಿವಶರಣೆ ಸಂಕಮ್ಮನ ಪಾತ್ರದ ಬಗ್ಗೆ ಅಶ್ಲೀಲತೆ ಪ್ರದರ್ಶಿಸಲಾಗಿದೆ ಮತ್ತು ಭಕ್ತಿ ಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ, ಹಾಡನ್ನು ಡಿಲೀಟ್ ಮಾಡಬೇಕೆಂಬ ಒತ್ತಾಯವೂ ಕೇಳಿಬಂದಿತ್ತು.
ಇದರ ಬೆನ್ನಲ್ಲೇ ಚಂದನ್ ಸಹ ಕ್ಷಮೆಯಾಚಿಸಿ, ಸ್ಪಷ್ಟನೆಯನ್ನು ನೀಡಿದ್ದ ಚಂದನ್, ಈ ಸಾಂಗ್ಗೆ ಎಲ್ಲೆಡೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಬರುತ್ತಿದೆ. ಯಾವುದೇ ವ್ಯಕ್ತಿ, ಜಾತಿ ಮತ್ತು ಧರ್ಮಕ್ಕೆ ಅವಮಾನ ಮಾಡಬೇಕೆಂಬ ಉದ್ದೇಶದಿಂದ ಸಾಂಗ್ ಮಾಡಿಲ್ಲ. ಒಳ್ಳೆಯ ಉದ್ದೇಶದಿಂದ ಸಾಂಗ್ ಮಾಡಿದ್ದೇವೆ ಎಂದು ಹೇಳಿದ್ದರು.
ಆದರೂ ಮಾದಪ್ಪನ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಯೂಟ್ಯೂಬ್ನಿಂದ ಸಾಂಗ್ ತೆಗೆದುಹಾಕಲಾಗಿತ್ತು. ಇದೀಗ ಯೂಟ್ಯೂಬ್ನಲ್ಲಿ ಸಾಂಗ್ ಮತ್ತೆ ಬಿಡುಗಡೆ ಮಾಡಲಾಗಿದೆ. ಆದರೆ, ಬದಲಾವಣೆ ಮಾಡಲಾಗಿದ್ದು, ಲಿರಿಕಲ್ ವಿಡಿಯೋ ಸಾಂಗ್ ಮಾತ್ರ ಮರುಬಿಡುಗಡೆ ಮಾಡಲಾಗಿದೆ. ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.