

ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ದಾರಿ ಹುಡುಕಾಟ ನಡೆಸಿದ್ದ ಸರ್ಕಾರದ ಮುಂದೀಗ ‘ರೇಪಿಸ್ಟ್‌ಗಳಿಗೆ ಆಸ್ತಿಯಲ್ಲಿ ಹಕ್ಕಿಲ್ಲ’ ಎಂಬ ಪ್ರಸ್ತಾವನೆ ಇದ್ದು, ಅಧಿಕಾರಿಗಳು ಕಾನೂನು ಸಾಧ್ಯಾಸಾಧ್ಯತೆ ಗಮನಿಸಿ ಪ್ರಸ್ತಾವನೆಗೆ ಅನುಮತಿ ನೀಡುವ ಸಾಧ್ಯತೆ ಇದೆ. ತಜ್ಞರ ಸಮಿತಿ ಮಾಡಿರುವ ಈ ಶಿಾರಸನ್ನು ಪರಾಮರ್ಶೆ ಮಾಡಲು ಸರ್ಕಾರ ಮುಖ್ಯಕಾರ್ಯದರ್ಶಿಯವರಿಗೆ ಸೂಚಿಸಿದೆ. ತಜ್ಞರ ಸಮಿತಿ ನೀಡಿರುವ ವರದಿಯಲ್ಲಿ ರೇಪಿಸ್ಟ್‌ಗಳಿಗೆ ಆಸ್ತಿ ಹಕ್ಕು ಹಿಂಪಡೆಯುವ ಪ್ರಸ್ತಾಪ ಮಾಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಹಿಂಪಡೆಯುವ ಬಗ್ಗೆ ಕ್ರಮಗಳಾಗಬೇಕೆಂದು ಉಲ್ಲೇಖವಿದೆ. ಅಂದರೆ, ಪಡಿತರ ಧಾನ್ಯ ವಿತರಣೆ, ಸ್ಕಾಲರ್‌ಶಿಪ್ ಸೇರಿ ಯಾವುದೇ ಸೌಲಭ್ಯ ಸಿಗದ ತೀರ್ಮಾನ ಆಗಬೇಕೆಂದು ಹೇಳಲಾಗಿದೆ. 2014ರಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಸರಣಿ ರೀತಿ ನಡೆದಾಗ ಅಂದಿನ ಸರ್ಕಾರ ಎಂ.ಸಿ.ನಾಣಯ್ಯ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿತ್ತು. ಬಳಿಕ ಸಮಿತಿ ಜವಾಬ್ದಾರಿಯು ವಿಧಾನಪರಿತ್ ಮಾಜಿ ಸದಸ್ಯ ವಿ.ಎಸ್.ಉಗ್ರಪ್ಪ ಅವರ ಹೆಗಲೇರಿತ್ತು. ಬಳಿಕ ವಿಧಾನ ಪರಿಷತ್ ಸದಸ್ಯರು, ಐಎಎಸ್, ಐಪಿಎಸ್ ಅಧಿಕಾರಿಗಳನ್ನೊಳಗೊಂಡ ತಂಡ 140 ಸಭೆಗಳನ್ನು ನಡೆಸಿ, ವಿವಿಧ ಸ್ಥಳಗಳಿಗೆ ಭೇಟಿಯನ್ನೂ ಕೊಟ್ಟು, ಜನಾಭಿಪ್ರಾಯ ಸಂಗ್ರಹಿಸಿ 135 ಶಿಾರಸು ಮಾಡಿದೆ. ಈ ಶಿಫಾರಸನ್ನು ಜಾರಿ ಮಾಡುವ ಬಗ್ಗೆ ಪರಾಮರ್ಶೆ ನಡೆಸಿ ವರದಿ ಕೊಡಲು ಸರ್ಕಾರ ಮುಖ್ಯಕಾರ್ಯದರ್ಶಿಯವರಿಗೆ ಜವಾಬ್ದಾರಿ ವಹಿಸಿದೆ. ಶಾಲಾ, ಕಾಲೇಜುಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆಯಾದರೂ ಜಾಗೃತಿ ಸಭೆ ನಡೆಸುವುದನ್ನು ಕಡ್ಡಾಯಗೊಳಿಸಬೇಕು. ಕಠಿಣ ಕಾನೂನು ಬಗ್ಗೆಯೂ ಅರಿವು ಮೂಡಿಸುವ ಕೆಲಸ ಆಗಬೇಕು. ಆಗ ಜಾಗೃತ ಸಮಾಜ ನಿರ್ಮಾಣ ಸಾಧ್ಯವಾಗಬಹುದು ಎಂದು ಸಮಿತಿ ಹೇಳಿಕೊಂಡಿದೆ. ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ತನಿಖೆ ಮತ್ತು ವಿಚಾರಣೆಯನ್ನು ಗರಿಷ್ಠ ಒಂದು ವರ್ಷದ ಒಳಗೆ ಇತ್ಯರ್ಥಕ್ಕೆ ಕಾನೂನಿನಲ್ಲಿ ತಿದ್ದುಪಡಿ ತರಬೇಕೆಂಬ, ಕೋರ್ಟ್‌ನಲ್ಲಿ ಶಿಕ್ಷೆಗೆ ಗುರಿಯಾದ ಅಪರಾಧಿಗಳಿಗೆ ಮತದಾನದ ಹಕ್ಕನ್ನು ಶಾಶ್ವತವಾಗಿ ರದ್ದುಮಾಡಬೇಕು. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂಬುದೂ ಸಹ ಸಮಿತಿಯ ಪ್ರಮುಖ ಶಿಾರಸುಗಳಲ್ಲೊಂದು. ಉಳಿದಂತೆ ವಿಶೇಷ ಕೋರ್ಟ್ ಸ್ಥಾಪನೆ, ಶೀಘ್ರ ಪರಿಹಾರ ವಿತರಣೆ ವ್ಯವಸ್ಥೆ, ವಿಶೇಷ ಪೊಲೀಸ್ ಠಾಣೆ, ಶಾಲಾ ಕಾಲೇಜುಗಳಲ್ಲಿ ಭದ್ರತಾ ಸಿಬ್ಬಂದಿ, ಚಾಲಕರ ನೇಮಕ ಸಂದರ್ಭದಲ್ಲಿ ಪೊಲೀಸರ ಎನ್‌ಒಸಿ ಕಡ್ಡಾಯಗೊಳಿಸುವುದು ಸೇರಿ ವಿವಿಧ ಉಪಕ್ರಮದ ಬಗ್ಗೆ ಶಿಾರಸು ಮಾಡಲಾಗಿದೆ. ಮುಂದೇನು? ಮುಖ್ಯಕಾರ್ಯದರ್ಶಿಯವರು ಆರು ಸಾವಿರ ಪುಟಗಳ ವರದಿ, 135 ಶಿಾರಸನ್ನು ಅವಲೋಕಿಸಿ ಅದರ ಅನುಷ್ಠಾನದ ಸಾಧ್ಯತೆ ಬಗ್ಗೆ ವಿಶ್ಲೇಷಿಸಲು ಹಿರಿಯ ಅಧಿಕಾರಿಗಳ ತಂಡ ರಚಿಸುವರು. ಯಾವೆಲ್ಲ ಕಾನೂನುಗಳಿಗೆ ತಿದ್ದುಪಡಿ ಸಾಧ್ಯವಿದೆ? ಹೊಸ ಉಪಕ್ರಮ ಅನುಷ್ಠಾನಕ್ಕಿರುವ ಸಾಧ್ಯತೆಗಳೇನು ಎಂಬ ಬಗ್ಗೆ ಇಲಾಖೆಗಳಿಂದ ಅಭಿಪ್ರಾಯ ಪಡೆಯುವ ಕಾರ್ಯ ನಡೆಯುವುದು.
ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ಇತ್ಯಾದಿಗಳನ್ನು ನಿಯಂತ್ರಿಸುವ ಬಗ್ಗೆ ತಜ್ಞರ ಸಮಿತಿ ವರದಿಯ ಶಿಾರಸು ಅನುಷ್ಠಾನ ಮಾಡಲು ಸರ್ಕಾರ ಒಂದು ಹೆಜ್ಜೆ ಇಟ್ಟಿರುವುದು ಒಳ್ಳೆಯ ಬೆಳವಣಿಗೆ. ಸಮಿತಿ 135 ಶಿಾರಸು ಮಾಡಿತ್ತು. ಉತ್ತಮ ಸಮಾಜಕ್ಕಾಗಿ ಅವು ಶೀಘ್ರ ಅನುಷ್ಠಾನಕ್ಕೆ ಬರಲಿ. - ವಿ.ಎಸ್.ಉಗ್ರಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ (ಸಮಿತಿ ಅಧ್ಯಕ್ಷರಾಗಿದ್ದರು)