

ಬೆಂಗಳೂರು: ಇಪ್ಪತ್ತೆಂಟು ವಾರಗಳ ಗರ್ಭಿಣಿಯಾಗಿದ್ದ ಬಾಲಕಿಯೊಬ್ಬಳ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಅತ್ಯಾಚಾರಕ್ಕೊಳಗಾಗಿ ಗರ್ಭವತಿಯಾಗಿದ್ದ 13 ವರ್ಷದ ಮಗಳ ಭ್ರೂಣ ತೆಗೆಸಲು ವಾಣಿವಿಲಾಸ ಆಸ್ಪತ್ರೆಗೆ ನಿರ್ದೇಶನ ನೀಡುವಂತೆ ಕೋರಿ ಸಂತ್ರಸ್ತೆಯ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ಗರ್ಭಪಾತ ಮಾಡುವ ಸಂಬಂಧ ವೈದ್ಯರಿಂದ ಅಗತ್ಯ ಪರೀಕ್ಷೆ ನಡೆಸಿ ಸಂತ್ರಸ್ತೆ ಜೀವಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ಈ ಪ್ರಕ್ರಿಯೆಯಲ್ಲಿ ವೈದ್ಯಕೀಯ ಗರ್ಭಪಾತ ನಿಯಮಗಳು 1971ರ ಪ್ರಕಾರ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ಕೈಗೊಳ್ಳಬೇಕು ಎಂದು ಪೀಠ ಹೇಳಿದೆ.
ಗರ್ಭಪಾತದ ನಂತರ ಭ್ರೂಣವನ್ನು ಡಿಎನ್‌ಎ ಪರೀಕ್ಷೆಗೆ ಅನುಕೂಲವಾಗುವಂತೆ ಸಂರಕ್ಷಿಸಿ ಅದರ ಅಂಗಾಂಶ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿನ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಬೇಕು ಎಂದು ಆಸ್ಪತ್ರೆಗೆ ನಿರ್ದೇಶನ ನೀಡಿದೆ.
ಸಂತ್ರಸ್ತೆಯ ಚಿಕಿತ್ಸೆ ಮತ್ತು ಮುಂದಿನ ಆರೋಗ್ಯ ಸುಧಾರಣೆಗಾಗಿ ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ 3 ಲಕ್ಷ ರೂ. ಮಂಜೂರು ಮಾಡಬೇಕು. ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಚಂದ್ರಾ ಲೇಔಟ್ ಬಡಾವಣೆ ಪೊಲೀಸರು, ವಾಣಿವಿಲಾಸ ಆಸ್ಪತ್ರೆ ವೈದ್ಯಾಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಆದೇಶದ ಅನುಪಾಲನಾ ವರದಿಯನ್ನು ಮುಂದಿನ ಎರಡು ವಾರಗಳಲ್ಲಿ ಸಲ್ಲಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಉಚಿತ ವಾಹನ ವ್ಯವಸ್ಥೆ:
ಗರ್ಭಪಾತ ಮತ್ತು ಆಕೆಯ ಆರೋಗ್ಯ ಪರೀಕ್ಷೆಗಾಗಿ ಸಂತ್ರಸ್ತೆ ಮತ್ತವರ ಹತ್ತಿರದ ಕುಟುಂಬಸ್ಥರಿಗೆ ವಾಣಿ ವಿಲಾಸ ಆಸ್ಪತ್ರೆಗೆ ಹೋಗುವುದು ಮತ್ತೆ ಹಿಂದಿರುಗಲು ಉಚಿತ ವಾಹನ ವ್ಯವಸ್ಥೆ ಮಾಡಬೇಕು. ವೈದ್ಯರ ಸಲಹೆ ಮೇರೆಗೆ ಹೆಚ್ಚುವರಿ ಚಿಕಿತ್ಸೆ ಅಗತ್ಯವಿದ್ದಲ್ಲಿ ಅದಕ್ಕೂ ವಾಹನ ವ್ಯವಸ್ಥೆ ಕಲ್ಪಿಸಬೇಕು ಎಂದು ಚಂದ್ರಾಲೇಔಟ್ ಬಡಾವಣೆ ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಏನಿದು ಪ್ರಕರಣ?
ಬಾಲಕಿ ದೌರ್ಜನ್ಯಕ್ಕೊಳಗಾದ ತಕ್ಷಣ ಆಕೆಯ ತಾಯಿ ಆರೋಪಿಗಳ ವಿರುದ್ಧ ಫೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದರು. ಜತೆಗೆ, ಗರ್ಭಪಾತ ಮಾಡಲು ವಾಣಿವಿಲಾಸ ಆಸ್ಪತ್ರೆಗೆ ನಿರ್ದೇಶನ ನೀಡಬೇಕು ಮತ್ತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕಾಗಿ ಭ್ರೂಣವನ್ನು ಡಿಎನ್‌ಎ ಪರೀಕ್ಷೆಗಾಗಿ ಸಂಗ್ರಹ ಮಾಡಲು ಸೂಚನೆ ನೀಡಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ವಾದ ಆಲಿಸಿದ್ದ ನ್ಯಾಯಪೀಠ, ಸಂತ್ರಸ್ತೆಗೆ ಗರ್ಭಪಾತ ಮಾಡುವ ಸಂಬಂಧ ವಾಣಿ ವಿಲಾಸ ಆಸ್ಪತ್ರೆಯ ವೈದ್ಯರಿಂದ ವೈದ್ಯಕೀಯ ಮಂಡಳಿ ರಚನೆ ಮಾಡಿದ್ದು, ಸಂತ್ರಸ್ತೆ ಪರಿಶೀಲಿಸಿದ್ದ ಮಂಡಳಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿತ್ತು. ವರದಿ ಪರಿಶೀಲಿಸಿ ನ್ಯಾಯಪೀಠ ಈ ಸೂಚನೆ ನೀಡಿದೆ.