

ಬೆಂಗಳೂರು: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪದಡಿ ಬಂಧಿತರಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹೀಗಾಗಿ ಅವರು ಪರಪ್ಪನ ಅಗ್ರಹಾರದ ಜೈಲು ಸೇರಿದ್ದು ಅವರಿಗೆ ಜೈಲಿನಲ್ಲಿ ವಿಚಾರಣಾಧೀನ ಕೈದಿ(UTP) ಸಂಖ್ಯೆ 5664 ನೀಡಲಾಗಿದೆ.
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣಗೆ ವಿಚಾರಣಾಧೀನ ಖೈದಿ ಸಂಖ್ಯೆ 4567 ನೀಡಲಾಗಿತ್ತು.
ಸದ್ಯ ಪ್ರಜ್ವಲ್ ರೇವಣ್ಣ, ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಕ್ವಾರೆಂಟೈನ್ ಸೆಲ್ ನಲ್ಲಿದ್ದು, ಅವರಿಗೆ ವಿಚಾರಣಾಧೀನ ಕೈದಿ ನಂಬರ್-5664 ನೀಡಲಾಗಿದೆ. ಇನ್ನು ಇಂದಿನ ರಾತ್ರಿ ಊಟವನ್ನು ಸಹ ಜೈಲಾಧಿಕಾರಿಗಳು ನೀಡಿದ್ದಾರೆ. ರಾತ್ರಿ ಜೈಲಿನ ಮೆನುವಿನಂತೆ ಮುದ್ದೆ, ಅನ್ನ, ಸಾಂಬರು, ಪಲ್ಯ ನೀಡಲಾಗಿದೆ. ಆದ್ರೆ, ಪ್ರಜ್ವಲ್, ಜೈಲಿನ ಕ್ವಾರೆಂಟೈನ್ ಬ್ಯಾರಕ್ ನಲ್ಲಿ ಮೌನಕ್ಕೆ ಶರಣಾಗಿದ್ದಾರೆ.
ಪ್ರಜ್ವಲ್ ರೇವಣ್ಣನನ್ನು ಎಸ್ಐಟಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿತ್ತು. ಆದರೆ ಇಂದು ಎಸ್ಐಟಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಎಸ್ಐಟಿ ಅಧಿಕಾರಿಗಳು ಹಾಜರು ಪಡಿಸಿದ್ದರು. ಆಗ ನ್ಯಾಯಾಧೀಶರು ನಿಮಗೆ ಕಸ್ಟಡಿಯಲ್ಲಿ ಪೊಲೀಸರು ತೊಂದರೆ ಕೊಟ್ರಾ ಎಂದು ಪ್ರಶ್ನಿಸಿದರು. ಆಗ ಇಲ್ಲ ಎಂದು ಪ್ರಜ್ವಲ್ ರೇವಣ್ಣ ಉತ್ತರಿಸಿದ್ದರು. ವಿಚಾರಣೆ ನಡೆಸಿದ ಬಳಿಕ ಪ್ರಜ್ವಲ್ ರೇವಣ್ಣಗೆ 14 ದಿನಗಳ ಕಾಲ ಅಂದರೆ ಜೂನ್ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿತು.
ಇತ್ತ ಕೇಸ್ ದಾಖಲಾಗುತ್ತಿದ್ದಂತೆ, ಅತ್ತ ಪ್ರಜ್ವಲ್ ರೇವಣ್ಣ ಬೆಂಗಳೂರಿನಿಂದ ಜರ್ಮನಿಗೆ ಎಸ್ಕೇಪ್ ಆಗಿದ್ದರು. ಕಳೆದ ಏಪ್ರಿಲ್ 27ರಂದು ತಡರಾತ್ರಿ ಪ್ರಜ್ವಲ್ ಬೆಂಗಳೂರು ಏರ್‌ಪೋರ್ಟ್ ಮೂಲಕವೇ ಜರ್ಮನಿಗೆ ತೆರಳಿದ್ದರು. ಇದೀಗ 35 ದಿನಗಳ ಬಳಿಕ ಇದೀಗಷ್ಟೇ ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇಲೆ 4 ಕೇಸ್ ದಾಖಲಾಗಿದೆ.