

ಬೆಟ್ಟದಪುರ: ಪ್ರಕರಣ ನ್ಯಾಯಾಲಯದಲ್ಲಿರುವಾಗ ಒತ್ತಡಕ್ಕೆ ಮಣಿದು ಅಧಿಕಾರಿಗಳು ಸರ್ವೆ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಮುಖಂಡರು ಅಧಿಕಾರಿಗೆ ೆರಾವ್ ಹಾಕಿದರು.
ಬೆಟ್ಟದಪುರ ಸಮೀಪದ ಚನ್ನಕಲ್ಲು ಕಾವಲು ಗ್ರಾಮದಲ್ಲಿ ಪ್ರಕರಣ ನ್ಯಾಯಾಲಯದಲ್ಲಿರುವ ಜಮೀನಿನನ್ನು ಸರ್ವೆ ನಡೆಸಲು ಶನಿವಾರ ಅಧಿಕಾರಿಗಳು ಆಗಮಿಸಿದ ಸಂದರ್ಭದಲ್ಲಿ ರೈತ ಸಂಘದ ಮುಖಂಡರು ತಡೆದು ಹಿಂದಕ್ಕೆ ಕಳುಹಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಸುಂದರೇಗೌಡ ಪತ್ರಿಕೆಯೊಂದಿಗೆ ಮಾತನಾಡಿ, ಚನ್ನಕಲ್ಲು ಕಾವಲು ಗ್ರಾಮದ ಸರ್ವೆ ನಂಬರ್ 30/114 ರಲ್ಲಿ ವೆಂಕಟೇಶ್ ಎಂಬುವರ 2.35 ಎಕರೆ ಜಮೀನಿದ್ದು, ಅತಿಕ್ರಮಣದ ಉದ್ದೇಶದಿಂದ ಪ್ರಭಾವಿಗಳು ಅಧಿಕಾರಿಗಳಿಗೆ ಒತ್ತಡ ಹೇರಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದೆ ಕಾನೂನು ತೀರ್ಪು ಬರುವವರೆಗೆ ಸರ್ವೆ ನಡೆಸಲು ಬಿಡುವುದಿಲ್ಲ ಎಂದು ಹೇಳಿದರು. ಇಂತಹ ಪ್ರಸಂಗಗಳು ತಾಲೂಕಿನಲ್ಲಿ ನಡೆಯದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಗಣೇಶ್, ಸುರೇಶ್, ರೈತ ಸಂಘದ ಸಂಚಾಲಕ ಅರುಣ್ ಕುಮಾರ್, ಶರತ್ ಕುಮಾರ್, ಧನಂಜಯ್, ಆನಂದ್, ಕುಬೇರ ಇತರರು ಇದ್ದರು.