

ರಣದೀಪ್ ಸಿಂಗ್ ಸುರ್ಜೆವಾಲಾ ಟೀಕೆ -- ಕರ್ನಾಟಕ ಕಾಂಗ್ರೆಸ್ ಸರ್ಕಾರ ದೇಶಕ್ಕೇ ಮಾದರಿ
ವಿಜಯವಾಣಿ ಸುದ್ದಿಜಾಲ ಉಡುಪಿ
ಕರ್ನಾಟಕ ಮತ್ತು ದೇಶದಲ್ಲಿ 2 ಮಾದರಿಯ ಆಡಳಿತ ಕಂಡು ಬರುತ್ತಿದೆ. ಅದು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿರುವ ಜನಪರ ಐದು ಗ್ಯಾರಂಟಿ ಯೋಜನೆಯ ಮಾದರಿ ಹಾಗೂ ಇನ್ನೊಂದು ದೇಶದ ಜನರಿಗೆ ಕೇಂದ್ರ ಬಿಜೆಪಿ ಸರ್ಕಾರ ನೀಡಿರುವ ಚೊಂಬು ಮಾದರಿ ಯೋಜನೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಟೀಕಿಸಿದರು.
ಉಡುಪಿಯ ಖಾಸಗಿ ಹೋಟೆಲ್ನಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳು ದೇಶದಲ್ಲೇ ಪ್ರಥಮ ಹಾಗೂ ಮಾದರಿ ಯೋಜನೆಯಾಗಿದೆ ಎಂದರು.
ಕರ್ನಾಟಕ ಸರ್ಕಾರ ನೀಡಿರುವ ಮಾದರಿಯಲ್ಲೇ ದೇಶದ ಜನತೆಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿಯ ಭರವಸೆ ನೀಡಿದೆ. 'ಪಂಚ ನ್ಯಾಯದ ಹೆಸರಲ್ಲಿ ದೇಶದ ಬಡ ಮಹಿಳೆಯರಿಗೆ ತಿಂಗಳಿಗೆ 8,300 ರೂ.ನಂತೆ ವರ್ಷಕ್ಕೆ 1 ಲಕ್ಷ ರೂ. ನೆರವು, ಯುವ ಸಮುದಾಯಕ್ಕೂ ಉದ್ಯೋಗ ಭರವಸೆಯಾಗಿ ತಿಂಗಳಿಗೆ 8,300 ರೂ.ನಂತೆ ವರ್ಷಕ್ಕೆ 1 ಲಕ್ಷ ರೂ. ನೆರವು, ರೈತರ 3 ಲಕ್ಷ ರೂ. ವರೆಗಿನ ಸಾಲಮನ್ನಾ ಹಾಗೂ ನರೇಗಾ ಕೂಲಿ ಹಣ ದಿನಕ್ಕೆ 530 ರೂ.ಗೆ ಏರಿಕೆ ಮಾಡಲಾಗುವುದು ಎಂದರು.
ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳನ್ನೇ ನಕಲು ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕಕ್ಕೆ ತೆರಿಗೆ ಹಣದಲ್ಲೂ ವಂಚನೆ ಮಾಡಿದ್ದಾರೆ. ಹುಸಿ ಭರವಸೆಗಳೇ ಅವರ ಸಾಧನೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲೂ ಸಹ ಚೊಂಬು ಪ್ರದರ್ಶಿಸುವ ಮೂಲಕ ರಣದೀಪ್ ಸಿಂಗ್ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮಂಜುನಾಥ ಭಂಡಾರಿ, ಸಲೀಂ ಅಹ್ಮದ್, ವಿನಯಕುಮಾರ್ ಸೊರಕೆ, ಎಂ.ಎ. ಗಫೂರ್ಗೂ, ಸೂರಜ್ ಹೆಗ್ಡೆ, ವಿಜಯ ಮುಳಗುಂದ, ಅಶೋಕುಮಾರ್ ಕೊಡವೂರು, ಕಿಶನ್ ಹೆಗ್ಡೆ ಕೊಳ್ಕೆಬೈಲು, ಮುನಿಯಾಲು ಉದಯ್ ಶೆಟ್ಟಿ, ಪ್ರಸಾದ್ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮಳವಳ್ಳಿ, ಭಾಸ್ಕರ್ ರಾವ್ ಕಿದಿಯೂರು ಇತರರಿದ್ದರು.
ಪ್ರಸಕ್ತ ಲೋಕಸಭಾ ಚುನಾವಣೆಯು ಸಂವಿಧಾನದ ರಕ್ಷಣೆಯ ವಿಚಾರವಾಗಿಯೇ ನಡೆಯುತ್ತಿದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನ ನಾಶ ಖಂಡಿತ. ಅದನ್ನು ಅವರ ಸಂಸದರೇ ಆಗಾಗ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ದೇಶದ ಸರ್ವಜನರ ಹಿತ ಹಾಗೂ ಒಳಿತಿಗಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು. ಕೇಸರಿ ಆಡಳಿತದಿಂದ ಜನ ಬೇಸತ್ತಿದ್ದಾರೆ ಎಂದು ಸುರ್ಜೇವಾಲಾ ಹೇಳಿದರು.