

ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಚುನಾವಣೆ ಕಾವು ಜೋರಾಗಿದ್ದು, ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದವರಲ್ಲಿ ಯಾರೂ ವಾಪಸ್ ಪಡೆಯದ ಕಾರಣ ಚುನಾವಣೆ ಜಿದ್ದಾಜಿದ್ದಿಗೆ ಕಾರಣವಾಗಿದೆ.
ಡಿ. 4ಕ್ಕೆ ಮತದಾನ ನಿಗದಿಯಾಗಿದ್ದು, ಒಂದು ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಕಂದಾಯ ಇಲಾಖೆಯ ಅಜಯ್ ಕುಮಾರ್, ರಾಜ್ಯ ಪರಿಷತ್ ಸ್ಥಾನಕ್ಕೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎನ್.ಶ್ರೀನಿವಾಸರೆಡ್ಡಿ ಹಾಗೂ ಖಜಾಂಚಿ ಸ್ಥಾನಕ್ಕೆ ಶಿಕ್ಷಣ ಇಲಾಖೆಯ ವಿ.ಮುರಳಿ, ಮತ್ತೊಂದು ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಸರ್ವೇ ಇಲಾಖೆಯ ಸುರೇಶ್ ಬಾಬು, ರಾಜ್ಯ ಪರಿಷತ್‌ಗೆ ಆರೋಗ್ಯ ಇಲಾಖೆಯ ಪ್ರೇಮಾ ರಾಜು ಹಾಗೂ ಖಜಾಂಚಿ ಸ್ಥಾನಕ್ಕೆ ವೆಂಕಟಾಚಲಪತಿ ಗೌಡ ನಾಮಪತ್ರ ಸಲ್ಲಿಸಿದ್ದು, ಯಾರೂ ಕಣದಿಂದ ಹಿಂದೆ ಸರಿಯದ ಕಾರಣ ಚುನಾವಣೆ ಖಚಿತವಾಗಿದೆ.
ಉಮೇದುವಾರಿಕೆ ಹಿಂಪಡೆಯುವ ದಿನ ಶುಕ್ರವಾರ ಯಾರಾದರೂ ನಾಮಪತ್ರ ವಾಪಸ್ ಪಡೆಯಬಹುದು. ಇದರಿಂದಾಗಿ ಅವಿರೋಧ ಆಯ್ಕೆಯಾಗುವ ಸಾಧ್ಯತೆಯಿದೆ ಎಂಬ ಬಗ್ಗೆ ಚರ್ಚೆ ನಡೆದಿದ್ದವು. ಕಣದಿಂದ ಯಾವುದೇ ಬಣದವರು ಹಿಂದೆ ಸರಿಯದ ಹಿನ್ನೆಲೆಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.
ಕೋಲಾರ ಶಾಸಕರಾದ ಕೊತ್ತೂರು ಮಂಜುನಾಥ್, ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಸಹ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಚುನಾವಣೆಯಲ್ಲಿ ಅಜಯ್ ಅವರನ್ನು ಗೆಲ್ಲಿಸಿಕೊಳ್ಳಲು ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನಲಾಗುತ್ತದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಬೆಂಬಲದೊAದಿಗೆ ಸುರೇಶ್ ಬಾಬು ಗುರುತಿಸಿಕೊಳ್ಳುವ ಮೂಲಕ ಗೆಲ್ಲಲು ಕಸರತ್ತು ನಡೆಸಿದ್ದಾರೆ.
* ಮತದಾರರಿಗೆ ಆಮಿಷ
ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದು, ಮತದಾರರ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಜತೆಗೆ ಉಡುಗೊರೆ ಅಮಿಷವೊಡ್ಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಕೆಲ ನಿರ್ದೇಶಕರು ಎರಡೂ ಅಭ್ಯರ್ಥಿಗಳ ಜತೆ ಗುರುತಿಸಿಕೊಂಡಿದ್ದರೆ, ಇನ್ನು ಕೆಲ ನಿರ್ದೇಶಕರು ಚುನಾವಣೆಯ ದಿನ ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ನೌಕರರ ವಲಯದಲ್ಲಿ ಕೇಳಿ ಬಂದಿವೆ.
* ಗೊಂದಲ ಸೃಷ್ಟಿ ಆರೋಪ
ಸೋಲಿನ ಭೀತಿಗೆ ಒಳಗಾಗಿರುವ ಸುರೇಶ್ ಬಾಬು ಬಣದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅಜಯ್ ಕುಮಾರ್ ಬಣದಲ್ಲಿ ೫೫ಕ್ಕೂ ಹೆಚ್ಚಿನ ನಿರ್ದೇಶಕರು ಗುರುತಿಸಿಕೊಂಡಿದ್ದು, ಇದು ಸುರೇಶ್ ಬಾಬು ಬಣದವರ ನಿದ್ದೆ ಕೆಡಿಸಿದೆ. ಈ ಮಧ್ಯೆ ಸುಳ್ಳು ಹೇಳಿಕೆಗಳನ್ನು ನೀಡಿ ಮತದಾರರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಸುರೇಶ್ ಬಾಬು ಮೇಲಿದ್ದು, ನಾಮಪತ್ರ ಸಲ್ಲಿಸುವ ವೇಳೆ ಅವರದ್ದೇ ಬಣದ ಸೂಚಕರು ಯಾರೂ ದೊರೆಯದ ಕಾರಣ, ಅಜಯ್ ಬಣದ ಸದಸ್ಯರು ಸೂಚಕರು ಬೇಕಾಗಿದ್ದಾರೆ ಎಂದು ಸುರೇಶ್ ಬಾಬು ಬಣದ ವಿರುದ್ಧ ವ್ಯಂಗ್ಯವಾಡುತ್ತಿದ್ದಾರೆ.
* ಒಟ್ಟು 71 ಮತ
ಡಿಸೆಂಬರ್ ೪ರಂದು ನಡೆಯಲಿರುವ ಚುನಾವಣೆಯಲ್ಲಿ ಒಟ್ಟು 71 ಮಂದಿಗೆ ಮತ ಚಲಾವಣೆಯ ಅವಕಾಶ ಇದ್ದು, ಜಿಲ್ಲೆಯ ಎಲ್ಲ ತಾಲೂಕು ಅಧ್ಯಕ್ಷರು 5 ಮತ ಹಾಗೂ ಜಿಲ್ಲಾ ಕೇಂದ್ರದಲ್ಲಿ 66 ನಿರ್ದೇಶಕರು ಹಕ್ಕು ಚಲಾಯಿಸಲಿದ್ದಾರೆ.
ಕೋಟ್...
ಕಾಲಮಿತಿಯೊಳಗೆ ನೌಕರರ ಭವನ ನಿರ್ಮಾಣ ಸೇರಿ ಹಲವು ನೌಕರರ ಪರ ಯೋಜನೆಗಳನ್ನು ಜಾರಿ ತರುವ ಗುರಿ ಹೊಂದಿದ್ದೇನೆ. ಎಲ್ಲ ನೌಕರರ ಒತ್ತಾಯದ ಮೇಲೆ ಚುನಾವಣೆಗೆ ಸ್ಪಽðಸಿದ್ದು, ಹೆಚ್ಚಿನ ನಿರ್ದೇಶಕರು ಬೆಂಬಲ ಸೂಚಿಸಿದ್ದಾರೆ. ಇದನ್ನು ಸಹಿಸಿಕೊಳ್ಳಲಾಗದವರು ಗೊಂದಲ ಸೃಷ್ಟಿಸುತ್ತಿದ್ದಾರೆ.
- ಅಜಯ್ ಕುಮಾರ್, ಅಭ್ಯರ್ಥಿ.