

ಚಿಕ್ಕಮಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗಡೆ ಅವರು ತಾಲೂಕಿನ ಉದ್ದೆಬೋರನಹಳ್ಳಿ ಸಮೀಪದ ತಡಬೇನಹಳ್ಳಿ ಗ್ರಾಮದ ಶ್ರೀ ಶಕುನ ರಂಗನಾಥಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಗೆ ಸುಮಾರು ಎರಡು ಲಕ್ಷ ರೂ.ಗಳ ದೇಣಿಗೆ ನೀಡಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಲಕ್ಯಾ ವಲಯದ ಮೇಲ್ವಿಚಾರಕಿ ನಮ್ರತಾ ಚೆಕ್‌ನ್ನು ದೇವಾಲಯ ಸಮಿತಿಗೆ ವಿತರಿಸಿ ಮಾತನಾಡಿ, ಯೋಜನೆಯ ಹಲವಾರು ಕಾರ್ಯಕ್ರಮಗಳಲ್ಲಿ ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧರ್ಮಾಧಿಕಾರಿಗಳು ವಿಶೇಷ ಆದ್ಯತೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಶ್ರೀ ಶಕುನ ರಂಗನಾಥ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಟಿ.ವಿ.ಸಿದ್ದೇಗೌಡ ಮಾತನಾಡಿ, ಪ್ರಸ್ತುತ ರಂಗನಾಥ ದೇವಾಲಯ 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳು ಸುಲಭದ ಕೆಲಸವಲ್ಲ. ಇಂತಹ ಸಂದರ್ಭದಲ್ಲಿ ಧರ್ಮಾಧಿಕಾರಿಗಳು ಗ್ರಾಮದ ಮನವಿಗೆ ಸ್ಪಂದಿಸಿ 2 ಲಕ್ಷ ರೂ. ದೇಣಿಗೆ ನೀಡಿರುವುದು ಗ್ರಾಮಸ್ಥರ ಸೌಭಾಗ್ಯ ಎಂದು ಹೇಳಿದರು.
ಮುಂದಿನ ದಿನಗಳಲ್ಲೂ ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಾಯ ಹಸ್ತ ನೀಡುವ ಶಕ್ತಿಯನ್ನು ಶ್ರೀ ಮಂಜುನಾಥ ಸ್ವಾಮಿ ಕರುಣಿಸಲಿ ಎಂದು ಹಾರೈಸಿದರು. ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಟಿ.ಆರ್.ಸಿದ್ದೇಗೌಡ, ಗ್ರಾಮದ ಮುಖಂಡರಾದ ಟಿ.ಓ.ರಾಮೇಗೌಡ, ಟಿ.ಎಸ್.ನಾಗರಾಜ್, ಟಿ.ಆರ್.ನಾಗರಾಜಪ್ಪ, ಮೇಲ್ವಿಚಾರಕಿ ಲತಾಮಣಿ, ಸೇವಾ ಪ್ರತಿನಿಧಿ ಶಿಲ್ಪಾ ಮತ್ತಿತರರಿದ್ದರು.